ತುಷಾರ್ ಗಿರಿನಾಥ್
ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಗಾಗಿ ಅವಶ್ಯಕ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಹೆಬ್ಬಾಳ ಜಂಕ್ಷನ್‌ವರೆಗಿನ ಹೊರ ವರ್ತುಲ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೆಗೆದುಕೊಳ್ಳಬೇಕಿರುವ ಸೂಕ್ತ ಕ್ರಮಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ಅವರು ಮಾತನಾಡಿದರು.
ರಸ್ತೆ ಗುಂಡಿಗಳನ್ನು ಮುಚ್ಚುವುದು, ರಸ್ತೆ ಮೇಲ್ಮೈ ದುರಸ್ತಿ, ಜಂಕ್ಷನ್‌ಗಳ ಅಭಿವೃದ್ಧಿ, ವೈಟ್ ಟಾಪಿಂಗ್ ಕಾಮಗಾರಿ, ರಸ್ತೆಗಳ ಮೇಲೆ ನೀರು ನಿಲ್ಲದಂತೆ ಕ್ರಮವಹಿಸಲು ಹಾಗೂ ಮೆಟ್ರೊ ಕಾಮಗಾರಿ ನಡೆಯುವ ಕಡೆ ರಸ್ತೆಗಳನ್ನು ಸುಸ್ಥಿತಿಯಲ್ಲಿಡಲು ಅಧಿಕಾರಿಗಳಿಗೆ ಸೂಚಿಸಿದರು.
‘ಮೆಟ್ರೊ, ಜಲಮಂಡಳಿ, ಬೆಸ್ಕಾಂ, ಜಲಮಂಡಳಿಯ ಕಾಮಗಾರಿ ನಡೆಯುತ್ತಿರುವ ಕಡೆ ರಸ್ತೆಗಳನ್ನು ಅವರೇ ಸುಸ್ಥಿತಿಯಲ್ಲಿಡಬೇಕು. ಆ ರಸ್ತೆಯಲ್ಲಿ ಮೇಲ್ಮೈ ಹಾಳಾಗಿದ್ದರೆ, ರಸ್ತೆ ಗುಂಡಿಗಳು ಬಿದ್ದಿದ್ದರೆ ಅವರೇ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಈ ಸಂಬಂಧ ವಿವಿಧ ಇಲಾಖೆಗಳು ಕಾಮಗಾರಿ ನಡೆಯುವ ರಸ್ತೆಗಳಲ್ಲಿ ಯಾವ ಇಲಾಖೆ ಕಾಮಗಾರಿ ನಡೆಸುತ್ತಿದೆ ಎಂಬ ನಾಮಫಲಕವನ್ನು ಅಳವಡಿಸಬೇಕು’ ಎಂದರು.
ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಜಲಾವೃತವಾಗುವುದನ್ನು ತಪ್ಪಿಸಬೇಕು. ಈ ಸಂಬಂಧ ರಾಜಕಾಲುವೆಗಳಲ್ಲಿ ನಿರಂತರವಾಗಿ ಹೂಳೆತ್ತಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಅಗರ ಕೆರೆ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಇಬ್ಲೂರು ಜಂಕ್ಷನ್ ಬಳಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಸ್ಕೈವಾಕ್ ನಿರ್ಮಾಣ ಮಾಡಬೇಕು. ಹೊರವರ್ತುಲ ರಸ್ತೆಯಲ್ಲಿ 20 ಸ್ಥಳಗಳಲ್ಲಿ ಸರ್ವೀಸ್ ರಸ್ತೆಯಿಂದ ಪ್ರಮುಖ ರಸ್ತೆಗೆ ಒಳಗೆ-ಹೊರಗೆ ಹೋಗಲು ವಿನ್ಯಾಸ ರೂಪಿಸಿದರೆ ಶೇ 30ರಿಂದ 40ರಷ್ಟು ಸಂಚಾರ ದಟ್ಟಣೆ ಕಡಿಮೆ ಆಗಲಿದೆ. ಈ ಸಂಬಂಧ ಪಾಲಿಕೆ ಹಾಗೂ ಸಂಚಾರಿ ವಿಭಾಗದ ಸಹಕಾರದೊಂದಿಗೆ ವಿನ್ಯಾಸ ರೂಪಿಸಿ ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಶಾಂತಲಾ ನಗರದ ಲಾಂಗ್ ಫೋರ್ಡ್ ರಸ್ತೆಯಲ್ಲಿ, ರಸ್ತೆ ಮೇಲ್ಮೈ ಹಾಳಾಗಿರುವುದನ್ನು ಗಮನಿಸಿ, ಅವರೇ ಮೊಬೈಲ್‌ನಲ್ಲಿ ಫೋಟೊ ತೆಗೆದು ಸಂಬಂಧಪಟ್ಟ ಅಧಿಕಾರಿಗೆ ಕಳುಹಿಸಿ ದುರಸ್ತಿ ಕಾರ್ಯ ಕೈಗೊಳ್ಳಲು ಹೇಳಿದರು.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್, ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್, ನಗರ ಪಾಲಿಕೆ ಆಯುಕ್ತರಾದ ಕೆ.ಎನ್ ರಮೇಶ್, ರಮೇಶ್ ಡಿ.ಎಸ್, ಪೊಮ್ಮಲ ಸುನೀಲ್ ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.