ADVERTISEMENT

ಯುವತಿ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆ: ಚಲಿಸುತ್ತಿದ್ದ ರೈಲಿಗೆ ತಳ್ಳಿ ಕೊಲೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 14:17 IST
Last Updated 8 ಸೆಪ್ಟೆಂಬರ್ 2025, 14:17 IST
ಇಸ್ಮಾಯಿಲ್‌ 
ಇಸ್ಮಾಯಿಲ್‌    

ಬೆಂಗಳೂರು: ಚಲಿಸುತ್ತಿದ್ದ ರೈಲಿಗೆ ಸ್ನೇಹಿತನನ್ನು ತಳ್ಳಿ ಕೊಲೆ ಮಾಡಿದ್ದ ಆರೋಪಿಯನ್ನು ಬೈಯಪ್ಪನಹಳ್ಳಿ ರೈಲ್ವೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪುನೀತ್ ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ಪ್ರತಾಪ್‌ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ರೈಲ್ವೆ ಪೊಲೀಸರು ಹೇಳಿದರು.

ವಿಜಯಪುರದ ಇಸ್ಮಾಯಿಲ್‌ ಪಟವೇಗಾರ್ (20) ಎಂಬುವರನ್ನು ಚಲಿಸುತ್ತಿದ್ದ ರೈಲಿಗೆ ತಳ್ಳಿ ಆರೋಪಿಗಳು ಕೊಲೆ ಮಾಡಿದ್ದರು. ಬಳಿಕ, ಮೃತದೇಹವನ್ನು ಹಳಿಯ ಮೇಲೆ ಎಸೆದು ಪರಾರಿ ಆಗಿದ್ದರು ಎಂದು ರೈಲ್ವೆ ಪೊಲೀಸರು ಹೇಳಿದರು.

ADVERTISEMENT

‘ಇಸ್ಮಾಯಿಲ್ ಹಾಗೂ ಪುನೀತ್ ಸ್ನೇಹಿತರಾಗಿದ್ದರು. ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡು ಒಂದೇ ಪೇಯಿಂಗ್‌ ಗೆಸ್ಟ್‌ನಲ್ಲಿ ನೆಲಸಿದ್ದರು. ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಆರೋಪಿ ಪುನೀತ್‌, ಇಸ್ಮಾಯಿಲ್‌ಗೆ ಇತ್ತೀಚೆಗೆ ಪರಿಚಯಿಸಿದ್ದ. ಆಕೆಯ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ ಇಸ್ಮಾಯಿಲ್ ಹೆಚ್ಚು ಮಾತನಾಡಲು ಆರಂಭಿಸಿದ್ದ. ಇದು ಪುನೀತ್‌ಗೆ ಸಿಟ್ಟು ತರಿಸಿತ್ತು’ ಎಂದು ರೈಲ್ವೆ ಪೊಲೀಸ್‌ ಮೂಲಗಳು ತಿಳಿಸಿವೆ.

‘ಯುವತಿಯ ಜತೆಗೆ ಇಸ್ಮಾಯಿಲ್‌ ಮಾತನಾಡುತ್ತಿರುವ ವಿಚಾರವು ಪ್ರತಾಪ್‌ಗೂ ಗೊತ್ತಾಗಿ, ಪ್ರಶ್ನಿಸಿದ್ದರು. ಆರೋಪಿಗಳಿಬ್ಬರು ಇಸ್ಮಾಯಿಲ್‌ ಜತೆಗೆ ಗಲಾಟೆ ಮಾಡಿದ್ದರು. ಸೆ.7ರಂದು ಪುನೀತ್ ಹಾಗೂ ಪ್ರತಾಪ್ ಮದ್ಯಪಾನ ಮಾಡುತ್ತಾ ಕುಳಿತಿದ್ದರು. ಅದೇ ವೇಳೆ ಅಲ್ಲಿಗೆ ಇಸ್ಮಾಯಿಲ್ ಬಂದಾಗ ಮತ್ತೆ ಗಲಾಟೆ ಆರಂಭವಾಗಿತ್ತು. ಆಗ ಚಲಿಸುತ್ತಿದ್ದ ರೈಲಿಗೆ ಇಸ್ಮಾಯಿಲ್‌ ಅವರನ್ನು ತಳ್ಳಿದ್ದರು. ನಂತರ, ಮೃತದೇಹವನ್ನು ರೈಲ್ವೆ ಹಳಿ ಮೇಲೆ ಎಸೆದು ಪರಾರಿ ಆಗಿದ್ದರು’ ಎಂದು ಮೂಲಗಳು ತಿಳಿಸಿವೆ.

ಕಥೆ ಸಿದ್ಧ ಪಡಿಸಿಕೊಂಡಿದ್ದ ಆರೋಪಿಗಳು: ‘ಒಂದು ವೇಳೆ ಪೊಲೀಸರಿಗೆ ಮಾಹಿತಿ ಗೊತ್ತಾಗಿ, ವಶಕ್ಕೆ ಪಡೆದುಕೊಂಡರೆ ‘ರೀಲ್ಸ್‌’ ಕಥೆ ಸಿದ್ಧ ಪಡಿಸಿಕೊಂಡಿದ್ದರು. ರೀಲ್ಸ್ ಮಾಡಲು ಹೋಗಿ ಚಲಿಸುತ್ತಿದ್ದ ರೈಲು ಡಿಕ್ಕಿಯಾಗಿ ಇಸ್ಮಾಯಿಲ್ ಮೃತಪಟ್ಟಿದ್ದಾನೆ ಎಂಬುದಾಗಿ ಹೇಳಲು ಯೋಜನೆ ರೂಪಿಸಿಕೊಂಡಿದ್ದರು. ವಿಚಾರಣೆ ವೇಳೆ ಆರೋಪಿಗಳು ಈ ಸಂಗತಿಯನ್ನು ಬಾಯ್ಬಿಟ್ಟಿದ್ದಾರೆ’ ಎಂದು ರೈಲ್ವೆ ಪೊಲೀಸರು ಹೇಳಿದರು.

‘ದೊಡ್ಡನೆಕ್ಕುಂದಿಯ ರೈಲ್ವೆ ಹಳಿ ಬಳಿ ಶವ ಪತ್ತೆಯಾಗಿತ್ತು. ರೈಲ್ವೆ ಸಿಬ್ಬಂದಿ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ, ಪರಿಶೀಲಿಸಿ ತನಿಖೆ ನಡೆಸಲಾಯಿತು. ಜೇಬಿನಲ್ಲಿದ್ದ ಕೆಲವು ಗುರುತಿನ ಚೀಟಿಗಳಲ್ಲಿ ಆರೋಪಿಯ ಹೆಸರು ಹಾಗೂ ವಿಳಾಸ ಇತ್ತು. ಕೊಲೆಯಾದ ವ್ಯಕ್ತಿ ವಿಜಯಪುರದ ಇಸ್ಮಾಯಿಲ್ ಪಟವೇಗಾರ್ ಎಂಬುದು ಗೊತ್ತಾಗಿತ್ತು. ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಯಿತು’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳು ಮತ್ತು ಇಸ್ಮಾಯಿಲ್ ಪಿ.ಜಿಯಲ್ಲಿ ಒಂದೇ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಆರೋಪಿಯ ಪ್ರೇಯಸಿಯ ಮೊಬೈಲ್ ನಂಬರ್ ಪಡೆದು ಇಸ್ಮಾಯಿಲ್ ಮಾತನಾಡಿದ್ದ. ಇದರಿಂದ ಪಿ.ಜಿಯಲ್ಲಿ ಗಲಾಟೆ ಶುರುವಾಗಿತ್ತು. ಬಳಿಕ ಚಲಿಸುತ್ತಿದ್ದ ರೈಲಿಗೆ ತಳ್ಳಿ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ರೈಲ್ವೆ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.