ADVERTISEMENT

ಸುರಂಗ ರಸ್ತೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 15:55 IST
Last Updated 26 ಅಕ್ಟೋಬರ್ 2025, 15:55 IST
ಕಬ್ಬನ್‌ ಪಾರ್ಕ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾರ್ವಜನಿಕರೊಂದಿಗೆ ಸಂವಾದದಲ್ಲಿ ಅಂಗವಿಕಲರೊಬ್ಬರು ಡಿ.ಕೆ. ಶಿವಕುಮಾರ್‌ ಅವರಿಗೆ ಅಹವಾಲು ಸಲ್ಲಿಸಿದರು
ಕಬ್ಬನ್‌ ಪಾರ್ಕ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾರ್ವಜನಿಕರೊಂದಿಗೆ ಸಂವಾದದಲ್ಲಿ ಅಂಗವಿಕಲರೊಬ್ಬರು ಡಿ.ಕೆ. ಶಿವಕುಮಾರ್‌ ಅವರಿಗೆ ಅಹವಾಲು ಸಲ್ಲಿಸಿದರು   

ಬೆಂಗಳೂರು: ‘ಸುರಂಗ ರಸ್ತೆ ಯೋಜನೆಯಿಂದ ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆ ದೇವರು ತಡೆಯಬೇಕು ಅಷ್ಟೇ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು. 

ಕಬ್ಬನ್‌ ಪಾರ್ಕ್‌ನಲ್ಲಿ ಭಾನುವಾರ ನಡೆದ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸುರಂಗ ರಸ್ತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಗರಿಕರೊಬ್ಬರು ನನ್ನನ್ನು ಅಡ್ಡ ಹಾಕಿ ಯಾವುದೇ ಕಾರಣಕ್ಕೂ ಸುರಂಗ ಯೋಜನೆ ನಿಲ್ಲಬಾರದು ಎಂದು ಒತ್ತಾಯಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಹೊರತಾಗಿ ಯಾರೂ ವಿರೋಧ ಮಾಡುತ್ತಿಲ್ಲ. ಟೀಕೆ ಮಾಡುವುದನ್ನು ನಾನು ವಿರೋಧ ಮಾಡುತ್ತಿಲ್ಲ. ಪರ್ಯಾಯ ಮಾರ್ಗಗಳ ಬಗ್ಗೆಯೂ ತಿಳಿಸಬೇಕು. ಅವರ ಸಲಹೆಗಳು ಚೆನ್ನಾಗಿದ್ದರೆ ಅದನ್ನೂ ಪರಿಗಣಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಸಾರ್ವಜನಿಕರ ಪರವಾಗಿ ಭೇಟಿ ಮಾಡುವುದಾಗಿ ತೇಜಸ್ವಿ ಸೂರ್ಯ ಹೇಳಿದ್ದಾರೆ. ಮಂಗಳವಾರ ಭೇಟಿಗೆ ಸಮಯ ನೀಡಿದ್ದೇನೆ. ಅವರ ಸಲಹೆಗಳು ಸೂಕ್ತವಾಗಿದ್ದರೆ ಅವನ್ನೂ ಸ್ವೀಕರಿಸಲಾಗುವುದು’ ಎಂದು ಹೇಳಿದರು.

ಮೆಟ್ರೊ ಕೆಂಪು ಮಾರ್ಗ: ‘ನಮ್ಮ ಮೆಟ್ರೊ ಕೆಂಪು ಮಾರ್ಗಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಬಿಎಂಆರ್‌ಸಿಎಲ್ ವಿಸ್ತೃತ ಯೋಜನಾ ವರದಿ ತಯಾರಿಸಿದೆ. ಜನರ ಅನುಕೂಲಕ್ಕಾಗಿ ಮೆಟ್ರೊ ಮಾರ್ಗ ವಿಸ್ತರಣೆ ಮಾಡಲೇಬೇಕು. ಜೊತೆಗೆ ಡಬಲ್ ಡೆಕರ್‌ ಮಾಡಬೇಕು. ಕೇಂದ್ರ ಸಚಿವರು ಅ. 30ರಂದು ಬೆಂಗಳೂರಿಗೆ ಬರಲಿದ್ದಾರೆ. ಅವರಿಗೂ ಈ ಬಗ್ಗೆ ಮನವಿ ಸಲ್ಲಿಸಲಾಗುವುದು’ ಎಂದು ಹೇಳಿದರು.

ಕುಗ್ಗಿದ ಪಾರ್ಕ್‌: ‘330 ಎಕರೆ‌ ವಿಸ್ತೀರ್ಣದ ಕಬ್ಬನ್ ಪಾರ್ಕ್ ಈಗ 196 ಎಕರೆಗೆ ಕುಗ್ಗಿದೆ. ಪಾರ್ಕಿನ ಒಳಗೆ ಇರುವ ಎಲ್ಲಾ ಗುತ್ತಿಗೆ ಕಟ್ಟಡಗಳನ್ನು ತೆರವುಗೊಳಿಸಬೇಕು, ವಾಣಿಜ್ಯೀಕರಣ ಮಾಡಬೇಡಿ’ ಎಂದು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ನಾಗರಿಕರೊಬ್ಬರು ಮನವಿ ಸಲ್ಲಿಸಿದರು.

‘ಉದ್ಯಮಿಗಳೂ ನಮ್ಮವರೇ’: ‘ಉದ್ಯಮಿಗಳು ನಮ್ಮ ಸಹೋದರ, ಸಹೋದರಿಯರು. ಬೆಂಗಳೂರು ನಿಮ್ಮ ನಗರ, ಇದರ ಘನತೆಗೆ ಗಾಸಿ ಮಾಡಬೇಡಿ ಎಂದು ಹೇಳಿದ್ದೇನೆ. ನಮ್ಮನ್ನು ಟೀಕೆ ಮಾಡಿದವರನ್ನು ದೂರ ಮಾಡಲು ಆಗುವುದಿಲ್ಲ. ಅವರ ಸಲಹೆ ಸೂಚನೆಗಳನ್ನು ನಾವು ಕೇಳಬೇಕು’ ಎಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.

‘ನೀವು ಟೀಕೆ‌ ಮಾಡಿದರೆ ಈ ನಗರದ ಬಗ್ಗೆ ಅಂತರರಾಷ್ಟ್ರೀಯ ಸುದ್ದಿಯಾಗುತ್ತದೆ‌ ಎಂದು ಅವರಿಗೆ ಹೇಳಿದ್ದೇನೆ. ಮೋಹನ್‌ದಾಸ್ ಪೈ, ಕಿರಣ್ ಮಜುಂದಾರ್ ಷಾ ಮತ್ತಿತರರ ಜೊತೆ ಮಾತುಕತೆ ನಡೆಸಲಾಯಿತು. ಎಲ್ಲರೂ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಅತ್ಯುತ್ತಮ ಸಲಹೆಗಳನ್ನು ನೀಡಿದ್ದಾರೆ. ಅವರನ್ನು ಮುಖ್ಯ ಸಲಹಾ ಸಮಿತಿಗೂ ಸೇರಿಸಲಾಗಿದೆ’ ಎಂದು ಹೇಳಿದರು.

ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಅಕ್ರಮವಾಗಿ ಯಾರೇ ಅಳವಡಿಸಿದರೂ ತೆರವುಗೊಳಿಸಲಾಗುವುದು. ಪ್ರಕರಣ ದಾಖಲಿಸಲಾಗುವುದು
ಡಿ.ಕೆ. ಶಿವಕುಮಾರ್‌ ಉಪ ಮುಖ್ಯಮಂತ್ರಿ

‘ಕುಮಾರಸ್ವಾಮಿ ಖಾಲಿ ಟ್ರಂಕ್‌’

‘ಬೆಂಗಳೂರಿನ ‘ಬಿ’ ಖಾತಾ ಆಸ್ತಿಗಳನ್ನು ‘ಎ’ ಖಾತಾಗೆ ಪರಿವರ್ತನೆ ಮಾಡುತ್ತಿರುವ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡುತ್ತಿರುವ ಕುಮಾರಸ್ವಾಮಿ ಖಾಲಿ ಟ್ರಂಕ್’ ಎಂದು ಡಿ.ಕೆ. ಶಿವಕುಮಾರ್‌ ಕುಟುಕಿದರು. ‘ಖಾತೆ ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಲೂಟಿ ಮಾಡಿದ ಹಣ ಜೇಬಿನಲ್ಲಿದ್ದರೆ ಎತ್ತಿಕೊಂಡು ಹೋಗಲಿ’ ಎಂದು ತಿರುಗೇಟು ನೀಡಿದರು. ‘ಎ’ ಖಾತೆ ‘ಬಿ’ ಖಾತೆ ಬಗ್ಗೆ ಕೇವಲ ಟೀಕೆ ಮಾತ್ರ. ಅದರಲ್ಲಿ ಯಾವುದೇ ಸಲಹೆ ಸೂಚನೆಗಳಿಲ್ಲ. ‘ಬಿ’ ಖಾತೆಗಳನ್ನು ಬಿಜೆಪಿ ಅವಧಿಯಲ್ಲಿ ಮಾಡಲಾಯಿತು. ಇದನ್ನು ಮಾಡಲು ಹೇಳಿದವರು ಯಾರು’ ಎಂದು ಪ್ರಶ್ನಿಸಿದರು.

ಹೈಕೋರ್ಟ್ ಸ್ಥಳಾಂತರಕ್ಕೆ ಸ್ಥಳ ಪರಿಶೀಲನೆ

‘ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ಕಾರ್ಯಕ್ರಮಕ್ಕೆ ಹೋದ ಸಂದರ್ಭದಲ್ಲಿ ಹೈಕೋರ್ಟ್ ಸ್ಥಳಾಂತರಕ್ಕೆ 15-20 ಎಕರೆ ಜಾಗ ನೀಡಿ ಎಂದು ವಕೀಲರು ಮುಖ್ಯ ನ್ಯಾಯಮೂರ್ತಿಯವರು ಮನವಿ ಮಾಡಿದ್ದರು. ಸರ್ಕಾರದ ಮುಂದೆಯೂ ಈ ಬಗ್ಗೆ ಚರ್ಚೆ ನಡೆಸಲಾಗುವುದು. ನ್ಯಾಯಾಲಯದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹತ್ತಿರದಲ್ಲಿ ಎಲ್ಲಿ ಸ್ಥಳಾವಕಾಶ ಇದೆ ಎಂದು ಪರಿಶೀಲನೆ ಮಾಡಲಾಗುವುದು’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ‘ಹಳೆಯ ಐತಿಹಾಸಿಕ ಕಟ್ಟಡವಾದ ಕಾರಣಕ್ಕೆ ಅದನ್ನು ಏನೂ ಮಾಡಲು ಸಾಧ್ಯವಿಲ್ಲ. ಆದರೆ ಸ್ಥಳವಾಕಾಶ ಚಿಕ್ಕದಿದೆ. ನಗರದ ಹೊರಗೆ ಹೈಕೋರ್ಟ್‌ ಸ್ಥಾಪಿಸಲು ಸಾಧ್ಯವಿಲ್ಲ’ ಎಂದರು. ‘ಒಂದಷ್ಟು ಜನ ವಕೀಲರು ಭೇಟಿ ಮಾಡಿ ರೇಸ್ ಕೋರ್ಸ್ ಜಾಗ ಬಳಸಿಕೊಳ್ಳುವ ಬಗ್ಗೆ ತಿಳಿಸಿದರು. ಒಂದಷ್ಟು ಕಾನೂನಾತ್ಮಕ ತೊಡಕುಗಳು ಇರುವ ಕಾರಣಕ್ಕೆ ಈ ಬಗ್ಗೆ ಆನಂತರ ಆಲೋಚನೆ ಮಾಡೋಣ ಎಂದು ತಿಳಿಸಿದ್ದೇನೆ’ ಎಂದು ಹೇಳಿದರು.

ಕಬ್ಬನ್‌ ಪಾರ್ಕ್‌ ಅಭಿವೃದ್ಧಿಗೆ ₹5 ಕೋಟಿ

‘ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಬಿಡಿಎಯಿಂದ ₹5 ಕೋಟಿ ಅನುದಾನ ನೀಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ‘ಕಬ್ಬನ್ ಉದ್ಯಾನದ ಉನ್ನತೀಕರಣಕ್ಕೆ ಹಣ ಬಿಡುಗಡೆ ಮಾಡುವಂತೆ ನಾಗರಿಕರು ಮನವಿ ಮಾಡಿದ್ದಾರೆ. ಅವರ ಮನವಿಯಂತೆ ಮಿಕ್ಕ ಅನುದಾನವನ್ನು ತೋಟಗಾರಿಕೆ ಇಲಾಖೆಯಿಂದ ನೀಡುವಂತೆ ವ್ಯವಸ್ಥೆ ಮಾಡಲಾಗುವುದು. ಈ ಉದ್ಯಾನದ ಆವರಣದಲ್ಲಿ ಯಾವುದೇ ರೀತಿಯ ನಿರ್ಮಾಣ ಕೆಲಸಗಳಿಗೆ ಸರ್ಕಾರ ಆಸ್ಪದ ನೀಡುವುದಿಲ್ಲ. ಇವುಗಳ ರಕ್ಷಣೆಗೆ ಏನು ಕೆಲಸ ಮಾಡಬೇಕೋ ಅದನ್ನು ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.