ಬೆಂಗಳೂರು: ಅದಾನಿ ಗ್ರೂಪ್, ಎಲ್ ಆ್ಯಂಡ್ ಟಿ, ಟಾಟಾ ಪ್ರಾಜೆಕ್ಟ್ಸ್ ಸೇರಿದಂತೆ ದೇಶದ ಪ್ರಮುಖ ಹತ್ತು ಸಂಸ್ಥೆಗಳು ನಗರದಲ್ಲಿನ ಉದ್ದೇಶಿತ ಸುರಂಗ ರಸ್ತೆ ಯೋಜನೆಯ ಟೆಂಡರ್‌ನಲ್ಲಿ ಭಾಗವಹಿಸಲು ಆಸಕ್ತಿ ತೋರಿವೆ.
ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ನಿಯಮಿತ (ಬಿ–ಸ್ಮೈಲ್) ಹೆಬ್ಬಾಳ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ 16.75 ಕಿ.ಮೀ ಸುರಂಗ ರಸ್ತೆ ನಿರ್ಮಿಸಲು ಟೆಂಡರ್ ಆಹ್ವಾನಿಸಿದೆ. ಈ ಪ್ರಕ್ರಿಯೆಯಲ್ಲಿ ಸೋಮವಾರ ನಡೆದ ಪ್ರೀ–ಬಿಡ್ ಸಭೆಯಲ್ಲಿ, ಮೆಗಾ ಎಂಜಿನಿಯರಿಂಗ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್, ಐಟಿಡಿ ಸೆಮೆಂಟೇಷನ್ ಇಂಡಿಯಾ, ವಿಶ್ವ ಸಮುದ್ರ ಎಂಜಿನಿಯರಿಂಗ್ ಲಿಮಿಟೆಡ್, ಜಯಶಂಕರ್, ಸೀಗಲ್ ಇಂಡಿಯಾ, ಆಫ್‌ಕಾನ್ಸ್ ಇನ್‌ಫ್ರಾಸ್ಟ್ರಕ್ಚರ್, ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಪ್ರತಿನಿಧಿಗಳು ಭಾಗವಹಿಸಿದ್ದರು.
ನಿರ್ಮಾಣ, ಕಾರ್ಯಾಚರಣೆ, ವರ್ಗಾವಣೆ (ಬೂಟ್) ಆಧಾರದಲ್ಲಿ ಸುರಂಗ ರಸ್ತೆ ಯೋಜನೆಯನ್ನು ಕೈಗೊಳ್ಳುತ್ತಿರುವುದರಿಂದ, ಎಷ್ಟು ಸಂಸ್ಥೆಗಳು ಆಸಕ್ತಿ ವಹಿಸುತ್ತವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬೂಟ್ ಪ್ರಕಾರ, ಯೋಜನೆಯ ಶೇ 60ರಷ್ಟು ಮೊತ್ತವನ್ನು ಕಂಪನಿಗಳು ಭರಿಸಬೇಕು. ಅದು ಸುಮಾರು ₹10,619 ಕೋಟಿಯಾಗಲಿದ್ದು, ಬಿಡ್ ಸಲ್ಲಿಸುವ ಸಂದರ್ಭದಲ್ಲಿ ₹44 ಕೋಟಿಯನ್ನು ಠೇವಣಿಯನ್ನಾಗಿ ಇಡಬೇಕು. 30 ವರ್ಷಗಳ ಅವಧಿಗೆ ಟೋಲ್ ಅನ್ನು ಗುತ್ತಿಗೆದಾರ ಸಂಸ್ಥೆ ಸಂಗ್ರಹಿಸಬಹುದು.
ಒಂದೂವರೆ ಗಂಟೆ ನಡೆದ ಸಭೆಯಲ್ಲಿ, 200ಕ್ಕೂ ಹೆಚ್ಚು ಪ್ರಶ್ನೆಗಳನ್ನು ಪ್ರತಿನಿಧಿಗಳು ಕೇಳಿದರು ಎನ್ನಲಾಗಿದೆ.
‘ಅಗ್ರ ನಿರ್ಮಾಣ ಕಂಪನಿಗಳು ಅವರ ಪ್ರತಿನಿಧಿಗಳನ್ನು ಪ್ರೀ–ಬಿಡ್ ಸಭೆಗೆ ಕಳುಹಿಸಿದ್ದವು. ಬಿಡ್ ಸಲ್ಲಿಸುವ ದಿನವನ್ನು ವಿಸ್ತರಿಸಬೇಕು ಎಂದು ಕೆಲವರು ಮನವಿ ಮಾಡಿಕೊಂಡರು. ತ್ಯಾಜ್ಯ ವಿಲೇವಾರಿಗೆ ಭೂಮಿಯ ಬಗ್ಗೆಯೂ ಅವರು ಪ್ರಶ್ನಿಸಿದರು. ಅಂತಿಮ ಬಿಡ್‌ನಲ್ಲಿ ಹಲವು ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಬಿ–ಸ್ಮೈಲ್ ತಾಂತ್ರಿಕ ನಿರ್ದೇಶಕ ಬಿ.ಎಸ್. ಪ್ರಹ್ಲಾದ್ ತಿಳಿಸಿದರು.
ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದ ಸಂಸ್ಥೆಯವರೊಂದಿಗೆ ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತ ಕರೀಗೌಡ ಮಾತುಕತೆ ನಡೆಸಿದರು.
ಯೋಜನೆಯಂತೆ, ನಿರ್ಮಾಣ ಕಂಪನಿಗಳು ಒಟ್ಟು ಎಂಟು ಸುರಂಗ ಕೊರೆಯುವ ಯಂತ್ರಗಳನ್ನು (ಟಿಪಿಎಂ) ಅಳವಡಿಸಿಕೊಳ್ಳಬೇಕು. ಪ್ರತಿವರ್ಷ ಪ್ರತಿ ಯಂತ್ರ 2 ಕಿ.ಮೀ ಉದ್ದದ ಸುರಂಗ ಮಾರ್ಗ ಕೊರೆಯಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.