ADVERTISEMENT

'ಹಿಂಸೆ ಬೇಡ, ಶಾಂತಿ ಬೇಕು'

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 13:06 IST
Last Updated 12 ಆಗಸ್ಟ್ 2020, 13:06 IST
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯ ಸುತ್ತಲೂ ವಾಹನಗಳು ಹಾನಿಗೊಂಡಿರುವ ದೃಶ್ಯ-ಪ್ರಜಾವಾಣಿ ಚಿತ್ರ/ಎಂಎಸ್ ಮಂಜುನಾಥ್
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯ ಸುತ್ತಲೂ ವಾಹನಗಳು ಹಾನಿಗೊಂಡಿರುವ ದೃಶ್ಯ-ಪ್ರಜಾವಾಣಿ ಚಿತ್ರ/ಎಂಎಸ್ ಮಂಜುನಾಥ್   

ಬೆಂಗಳೂರು: 'ಪ್ರವಾದಿ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಾಕಿರುವುದನ್ನು ಖಂಡಿಸುತ್ತೇವೆ. ಆದರೆ, ಕಿಡಿಗೇಡಿತನಕ್ಕೆ ಉತ್ತರವಾಗಿ ಹಿಂಸಾ ಕೃತ್ಯ ನಡೆಸಿರುವುದು ಖಂಡನೀಯ' ಎಂದು ಬಂಡಾಯ ಸಾಹಿತ್ಯ ಸಂಘಟನೆ ಹೇಳಿದೆ.

ಅವಹೇಳನಕಾರಿ ಪೋಸ್ಟ್‌ಗೆ ಪ್ರಜಾಸತ್ತಾತ್ಮಕ ಹಾಗೂ ಕಾನೂನಾತ್ಮಕ ವಿಧಾನದಲ್ಲಿ ಉತ್ತರಿಸಬೇಕೇ ಹೊರತು ಕಾನೂನನ್ನು ಕೈಗೆತ್ತಿಕೊಂಡು ಜೀವಹಾನಿ ಮತ್ತು ಸಾರ್ವಜನಿಕ ಆಸ್ತಿ ನಾಶ ಮಾಡುವುದನ್ನು ಯಾವ ಧರ್ಮವೂ ಒಪ್ಪುವುದಿಲ್ಲ. ಪ್ರವಾದಿಯವರನ್ನು ಒಳಗೊಂಡಂತೆ ಎಲ್ಲ ಧಾರ್ಮಿಕ ದಾರ್ಶನಿಕರು ಹಿಂಸೆಯ ವಿರೋಧಿಗಳೂ ಶಾಂತಿಪ್ರಿಯರೂ ಆಗಿದ್ದರೆಂಬ ಸತ್ಯವನ್ನು ಎಲ್ಲರೂ ಮನಗಾಣಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಹಿತ್ಯ ಬರಗೂರು ರಾಮಚಂದ್ರಪ್ಪ, ಡಾ.ಕೆ.ಮರುಳಸಿದ್ಧಪ್ಪ, ಜಸ್ಟೀಸ್‌ ಗೋಪಾಲಗೌಡ, ಬೋಳುವಾರು ಮಹಮದ್, ಜಸ್ಟೀಸ್‌ ನಾಗಮೋಹನದಾಸ್‌ ಸೇರಿದಂತೆ ಹಲವರು 'ಹಿಂಸೆ ಬೇಡ, ಶಾಂತಿ ಬೇಕು' ಎಂಬುದು ನಮ್ಮೆಲ್ಲರ ಆದರ್ಶವಾಗಬೇಕು ಎಂದು ಪ್ರಕಟಣೆಯ ಮೂಲಕ ಸಂದೇಶ ರವಾನಿಸಿದ್ದಾರೆ. ಕೃತ್ಯಕ್ಕೆ ಪ್ರಚೋದನೆ ನೀಡಿದ ಮತ್ತು ಕೃತ್ಯವೆಸಗಿದ ಎಲ್ಲರ ಮೇಲೂ ಕ್ರಮಕೈಗೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ADVERTISEMENT

'ದುರುದ್ದೇಶದಿಂದ ಒಬ್ಬ ಪ್ರವಾದಿ ಮೊಹಮ್ಮದ್‌ ಅವರ ವಿರುದ್ಧ ಅವಹೇಳನಕಾರಿ, ಪ್ರಚೋದನಾತ್ಮಕ ಪೋಸ್ಟ್ ಹಾಕಿದರೆ; ಅದನ್ನು ನಿಭಾಯಿಸಲು ಸೈಬರ್‌ ಕಾನೂನು ಇದೆ. ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮಾಡಬಹುದಿತ್ತು. ಆದರೆ, ಏಕಾಏಕಿ ಸಾವಿರಾರು ಸಂಖ್ಯೆಯಲ್ಲಿ ರಸ್ತೆಗಿಳಿದು ಕಾನೂನನ್ನು ಕೈಗೆತ್ತಿಕೊಂಡು, ಭೀಕರ ವಾತಾವರಣ ಸೃಷ್ಟಿಸುವುದು ಖಂಡನೀಯ. ಶಾಂತಿ ಮತ್ತು ಸಹಬಾಳ್ವೆ ಪ್ರವಾದಿಯ ಮೂಲ ಮಂತ್ರ, ಅದನ್ನು ಸಮುದಾಯ ಪಾಲಿಸಬೇಕು' ಎಂದು ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಪ್ರಕಟಣೆಯ ಮೂಲಕ ಆಗ್ರಹಿಸಿದೆ.

ಇನ್ನಷ್ಟು ಓದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.