DK ಶಿವಕುಮಾರ್
ಬೆಂಗಳೂರು: ‘ನಗರ ಪಾಲಿಕೆಗಳ ವಾರ್ಡ್ ಮಟ್ಟದ ರಸ್ತೆಗಳ ಅಭಿವೃದ್ಧಿಗಾಗಿ ₹1,100 ಕೋಟಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಈ ಅನುದಾನವನ್ನು ರಸ್ತೆಗಳ ಸುಧಾರಣೆಗೆ ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರು ನಗರದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
‘ಇದುವರೆಗೂ 13 ಸಾವಿರ ಗುಂಡಿಗಳನ್ನು ಮುಚ್ಚಲಾಗಿದೆ. ಪ್ರತಿ ಗುಂಡಿ ಮುಚ್ಚಿರುವುದಕ್ಕೆ ಫೋಟೊ, ವಿಡಿಯೊ ದಾಖಲೆ ಮಾಡಿಸಲಾಗಿದೆ. ಅಧಿಕಾರಿಗಳು ಸರ್ಕಾರದ ಆದೇಶ ಪಾಲನೆ ಮಾಡಿ ಗುಂಡಿ ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ. ಇದರ ಜೊತೆಗೆ 550 ಕಿ.ಮೀ ಉದ್ದದ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ₹1,100 ಕೋಟಿ ವೆಚ್ಚದ ಕಾರ್ಯಯೋಜನೆ ಸಿದ್ಧಪಡಿಸಲು ಸೂಚನೆ ನೀಡಿದ್ದೇನೆ’ ಎಂದು ಮಾಹಿತಿ ನೀಡಿದರು.
‘ಮುಖ್ಯ ರಸ್ತೆಗಳ ಜಂಕ್ಷನ್‌ನಲ್ಲಿ ಕಾಂಕ್ರೀಟ್ ಹಾಕಲು 26 ದಿನಗಳ ಅಗತ್ಯವಿದ್ದು, ಸಂಚಾರ ನಿಯಂತ್ರಣದ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಬೆಂಗಳೂರು ರಸ್ತೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ರಸ್ತೆಗುಂಡಿ ಮುಚ್ಚುವುದಕ್ಕಾಗಿ ₹750 ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ’ ಎಂದರು.
‘ದೇಶದಲ್ಲಿ ಯಾವುದೇ ರಾಜ್ಯದ ಮಂತ್ರಿ ರಸ್ತೆಯಲ್ಲಿ ಗುಂಡಿ ಕಂಡರೆ ಮಾಹಿತಿ ನೀಡಿ ಎಂದು ಸಾರ್ವಜನಿಕರಿಗೆ ಕರೆ ನೀಡಿರಲಿಲ್ಲ. ಆದರೆ, ನಾನು ಇದಕ್ಕಾಗಿ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಿ, ಪೊಲೀಸರ ಸಹಕಾರದಲ್ಲಿ ರಸ್ತೆಗುಂಡಿ ಮುಚ್ಚಲಾಗುತ್ತಿದೆ. ಇಂತಹ ಪ್ರಯತ್ನ ನಡೆದಿರುವುದು ಕರ್ನಾಟಕದಲ್ಲಿ ಮಾತ್ರ. ಬೆಂಗಳೂರು ಜಾಗತಿಕ ನಗರ. ಹೀಗಾಗಿ ಎಲ್ಲರೂ ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಮಾತ್ರ ಪ್ರಚಾರ ಮಾಡುತ್ತಿದ್ದಾರೆ’ ಎಂದರು.
ಕಸ ಹಾಕಿರುವವನನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿ: ‘ಜಯಮಹಲ್ ರಸ್ತೆಯಲ್ಲಿ ಯಾರೋ ಒಂದು ಲೋಡ್ ಕಸ ಸುರಿದಿದ್ದಾರೆ. ಸೋಮವಾರ ಇರಲಿಲ್ಲ. ರಾತ್ರೋರಾತ್ರಿ ಬಂದು ಯಾರೋ ಸುರಿದಿದ್ದಾರೆ. ಕಸ ಸುರಿದವರು ಯಾರು ಎಂದು ಸಿಸಿಟಿವಿಯಲ್ಲಿ ಪತ್ತೆ ಮಾಡಿ ಅವರ ವಿರುದ್ಧ ಪ್ರಕರಣ ದಾಖಲಿಸಿ, ವಾಹನವನ್ನು ಸೀಜ್ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.