ಬೆಂಗಳೂರು: ಇಲ್ಲಿನ ದೊಡ್ಡ ಕಮ್ಮನಹಳ್ಳಿಯ ಮನೆಯೊಂದರಲ್ಲಿ ಪತ್ನಿ ಗೌರಿ ಅನಿಲ್ ಸಾಂಬೇಕರ್(32) ಅವರನ್ನು ಕೊಲೆ ಮಾಡಿ, ಮೃತದೇಹವನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿಟ್ಟಿದ್ದ ಪತಿ, ಆರೋಪಿ ರಾಕೇಶ್ ರಾಜೇಂದ್ರ ಕೇಲ್ದಾರ್ ಸಹ ಮಹಾರಾಷ್ಟ್ರದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ಪುಣೆಯ ಸಸೂನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲು ಹುಳಿಮಾವು ಠಾಣೆಯ ಪೊಲೀಸರು ಪುಣೆಗೆ ತೆರಳಿದ್ದಾರೆ. ಆರೋಪಿಯ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿದ ಬಳಿಕ ವಶಕ್ಕೆ ಪಡೆದುಕೊಂಡು, ಅಲ್ಲಿನ ನ್ಯಾಯಾಲಯಕ್ಕೆ ಹಾಜರು ಪಡಿಸಿ ಬೆಂಗಳೂರಿಗೆ ಕರೆತರಲಾವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿಯ ಅಪಾರ್ಟ್‌ಮೆಂಟ್ ಬಳಿಯ ಮನೆಯೊಂದರ ಮೂರನೇ ಮಹಡಿಯಲ್ಲಿ ಮಹಿಳೆಯ ಕೊಲೆ ನಡೆದಿರುವುದು ಗುರುವಾರ ರಾತ್ರಿ ಪೊಲೀಸರಿಗೆ ಗೊತ್ತಾಗಿತ್ತು. ಮನೆಯ ಬಾಗಿಲು ಒಡೆದು ಪರಿಶೀಲಿಸಿದಾಗ ಟ್ರಾಲಿ ಬ್ಯಾಗ್‌ನಲ್ಲಿ ಮೃತದೇಹ ಪತ್ತೆ ಆಗಿತ್ತು.
‘ಕೊಲೆಯಾದ ಗೌರಿ ಅವರ ತಂದೆ ಬೆಳಗಾವಿಯವರು. ಗೌರಿ ಅವರಿಗೆ ಐದು ವರ್ಷವಿದ್ದಾಗ ಅವರ ತಂದೆ ಮೃತಪಟ್ಟಿದ್ದರು. ನಂತರ, ಇಡೀ ಕುಟುಂಬ ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿಯೇ ನೆಲಸಿತ್ತು. ಸೋದರ ಮಾವನ ಮಗ ರಾಕೇಶ್‌ನನ್ನು ಗೌರಿ ಪ್ರೀತಿಸಿದ್ದರು. ಮದುವೆಗೆ ತಾಯಿ ಹಾಗೂ ಸಹೋದರ ಗಣೇಶ್ ವಿರೋಧ ವ್ಯಕ್ತಪಡಿಸಿದ್ದರು. ಮನೆಯವರ ವಿರೋಧದ ಮಧ್ಯೆ ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದ ರಾಕೇಶ್ ರಾಜೇಂದ್ರ ಕೇಲ್ದಾರ್‌ನನ್ನು ಗೌರಿ ಮದುವೆ ಆಗಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಮದುವೆಯಾದ ಆರಂಭದಲ್ಲೇ ಗಂಡನ ಮನೆಯವರಿಗೂ ಗೌರಿ ಅವರಿಗೂ ಹೊಂದಾಣಿಕೆಯ ಸಮಸ್ಯೆ ಆಗಿತ್ತು. ದಂಪತಿ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ್ದರು. ರಾಕೇಶ್ ಬಿ.ಕಾಂ ಪದವಿ ಪಡೆದಿದ್ದ. ಗೌರಿ ಸಮೂಹ ಸಂವಹನ ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದರು. ಒಂದು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ದೊಡ್ಡ ಕಮ್ಮನಹಳ್ಳಿಯಲ್ಲಿ ಬಾಡಿಗೆಗೆ ಮನೆ ಪಡೆದು ನೆಲಸಿದ್ದರು. ರಾಕೇಶ್‌ಗೆ ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಪತ್ನಿ ಕೆಲಸದ ಹುಡುಕಾಟದಲ್ಲಿದ್ದರು’ ಎಂದು ಮೂಲಗಳು ಹೇಳಿವೆ
ಗೌರಿ ಅವರು ಕೆಲಸಕ್ಕೆ ವಿವಿಧ ಕಂಪನಿಗಳಿಗೆ ಅರ್ಜಿ ಹಾಕಿದ್ದರು. ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. ಇದರಿಂದ ಬೇಸರಗೊಂಡು ಗಂಡನನ್ನೇ ದೂರಿದ್ದರು. ‘ಮತ್ತೆ ಮಹಾರಾಷ್ಟ್ರಕ್ಕೆ ವಾಪಸ್ ಹೋಗೋಣ’ ಎಂದು ಹೇಳಿದ್ದರು. ರಾಕೇಶ್ ಪತ್ನಿಯ ಮಾತು ಕೇಳಿರಲಿಲ್ಲ. ಇದೇ ವಿಚಾರಕ್ಕೆ ಮಾರ್ಚ್ 26ರಂದು ದಂಪತಿ ಮಧ್ಯೆ ಗಲಾಟೆ ನಡೆದಿತ್ತು. ಮೊದಲಿಗೆ ಪತ್ನಿಯ ಮೇಲೆ ರಾಕೇಶ್ ಹಲ್ಲೆ ನಡೆಸಿದ್ದ. ಕೋಪಗೊಂಡಿದ್ದ ಗೌರಿ ಅಡುಗೆ ಕೋಣೆಯಲ್ಲಿದ್ದ ಚಾಕುವನ್ನು ಪತಿಯತ್ತ ಎಸೆದಿದ್ದರು. ಅದೇ ಚಾಕು ತೆಗೆದುಕೊಂಡು ಗೌರಿಯ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದ. ಮೃತದೇಹವನ್ನು ಸಾಗಣೆ ಮಾಡಲು ಕಾಲು ಮುರಿದು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿದ್ದ. ಮನೆಯಿಂದ ಬ್ಯಾಗ್ ಅನ್ನು ಹೊರಕ್ಕೆ ಕೊಂಡೊಯ್ಯಲು ಮುಂದಾದ ವೇಳೆ ಹ್ಯಾಂಡಲ್ ತುಂಡಾಗಿತ್ತು. ಶೌಚಾಲಯದಲ್ಲಿ ಟ್ರಾಲಿ ಬ್ಯಾಗ್ ಅನ್ನು ಇಟ್ಟು ಕಾರಿನಲ್ಲಿ ಪರಾರಿ ಆಗಿದ್ದ’ ಎಂದು ಮೂಲಗಳು ತಿಳಿಸಿವೆ.
‘ಗುರುವಾರ ಮಧ್ಯಾಹ್ನ ಪುಣೆಗೆ ತಲುಪಿದ್ದ ಆರೋಪಿ, ಗೌರಿಯವರ ಅಣ್ಣನಿಗೆ ಕರೆ ಮಾಡಿ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಹೇಳಿದ್ದ. ನಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದ. ನಂತರ, ಮನೆ ಮಾಲೀಕರಿಗೂ ಕರೆ ಮಾಡಿ, ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದ. ಇದರಿಂದ ಗಾಬರಿಗೊಂಡಿದ್ದ ಮನೆಯ ಮಾಲೀಕರು, ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಶೌಚಾಲಯದಲ್ಲಿ ಮೃತದೇಹ ಪತ್ತೆಯಾಗಿತ್ತು’ ಎಂದು ಮೂಲಗಳು ಹೇಳಿವೆ.
ಮೃತದೇಹ ಎದುರು ಕುಳಿತಿದ್ದ ಆರೋಪಿ ಪತ್ನಿಯ ಕೊಲೆ ಮಾಡಿ ಕೆಲಹೊತ್ತು ಮೃತದೇಹ ಎದುರೇ ಆರೋಪಿ ಕುಳಿತಿದ್ದ. ಅದಾದ ಮೇಲೆ ಮೃತದೇಹ ವಿಲೇವಾರಿಗೆ ಪ್ರಯತ್ನಿಸಿದ್ದ ಎಂಬುದು ಗೊತ್ತಾಗಿದೆ.
ಕೃತ್ಯ ಎಸಗಿದ ಬಳಿಕ ಆರೋಪಿ ಮುಂಬೈಗೆ ತೆರಳಿದ್ದ. ಮುಂಬೈನ ಶಿರ್ವಾಲ್ ಪೊಲೀಸ್ ಠಾಣೆ ಸಮೀಪದಲ್ಲಿ ಅಸ್ವಸ್ಥನಾಗಿ ಬಿದ್ದಿದ್ದ. ಅಲ್ಲಿನ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಸತಾರದ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಗುರುವಾರ ತಡರಾತ್ರಿ ಪುಣೆಯ ಸಸೂನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಾಗಿ ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದ್ದಾರೆ. ರಾಕೇಶ್ ಪಿನಾಯಿಲ್ ಕುಡಿದು ಅಸ್ವಸ್ಥಗೊಂಡಿರುವ ಸಾಧ್ಯತೆಯಿದೆ. ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.