ADVERTISEMENT

262 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2023, 16:14 IST
Last Updated 3 ಅಕ್ಟೋಬರ್ 2023, 16:14 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಬೆಂಗಳೂರು ವಿಭಾಗದಿಂದ ಸಂಚರಿಸುವ 264 ರೈಲುಗಳ ವೇಳಾಪಟ್ಟಿ ಪರಿಷ್ಕರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ (ಆಡಳಿತ) ಕುಸುಮಾ ಹರಿಪ್ರಸಾದ್ ತಿಳಿಸಿದರು.

ರೈಲುಗಳ ಆಗಮನ ಮತ್ತು ನಿರ್ಗಮನದ ನೂತನ ವೇಳಾಪಟ್ಟಿ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬೆಂಗಳೂರು ವಿಭಾಗದಿಂದ ದೈನಂದಿನ, ವಾರದ ಹಾಗೂ ಎರಡು-ಮೂರು ವಾರಕ್ಕೊಮ್ಮೆ ಒಟ್ಟು 396 ರೈಲು ಸಂಚರಿಸುತ್ತವೆ. ಅದರಲ್ಲಿ 264 ರೈಲುಗಳ ವೇಳಾಪಟ್ಟಿ ಪರಿಷ್ಕರಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

205 ಎಕ್ಸ್‌ಪ್ರೆಸ್‌ ಹಾಗೂ 59 ಲೋಕಲ್ ರೈಲು ಸಂಚಾರದ ಸಮಯ ಬದಲಾವಣೆ ಮಾಡಲಾಗಿದೆ. ಅನಗತ್ಯ ವಿಳಂಬ ತಡೆಯಲು ಇಲಾಖೆ ಮುಂದಾಗಿದೆ ಎಂದು ಮಾಹಿತಿ ನೀಡಿದರು.

ಕೆಎಸ್‍ಆರ್ ಬೆಂಗಳೂರು-ಧಾರವಾಡ ಹಾಗೂ ಧಾರವಾಡ–ಬೆಂಗಳೂರು ಕೆಎಸ್‍ಆರ್ ವಂದೇಭಾರತ್ ಎಕ್ಸ್‌ಪ್ರೆಸ್‌, ಕಾಚಿಗುಡ-ಯಶವಂತಪುರ ಹಾಗೂ ಯಶವಂತಪುರ-ಕಾಚಿಗುಡ ವಂದೇಭಾರತ್ ಎಕ್ಸ್‌ಪ್ರೆಸ್‌ ಸೇರಿದಂತೆ ನೈರುತ್ಯ ರೈಲ್ವೆಯಿಂದ ಒಟ್ಟು 4 ಜೋಡಿ ಹೊಸ ರೈಲುಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.

ಎಸ್‍ಎಂವಿಟಿ–ಮುರುಡೇಶ್ವರ ಹಾಗೂ ಮುರುಡೇಶ್ವರ–ಎಸ್‍ಎಂವಿಟಿ ಬೆಂಗಳೂರು ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ವಾರದ ಆರು ದಿನಗಳ ಬದಲಾಗಿ 7 ದಿನಗಳು ಸಂಚರಿಸಲಿದೆ. ಇನ್ನು ಮೈಸೂರು-ಸೊಲ್ಲಾಪುರ ರೈಲು ಸಂಚಾರವನ್ನು ಪಾಂಡವಪುರದವರೆಗೆ ಹಾಗೂ ಬೆಂಗಳೂರು–ಮಂಗಳೂರು ರೈಲು ಸಂಚಾರವನ್ನು ಮುರುಡೇಶ್ವರದವರೆಗೆ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್‌ಗೆ ಅರಸಾಳು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಲಾಗಿದೆ. ಎಸ್‍ಎಸ್‍ಎಸ್‌ ಹುಬ್ಬಳ್ಳಿ–ಕೆಎಸ್‍ಆರ್ ಹಾಗೂ ಬೆಂಗಳೂರು–ಎಸ್‍ಎಸ್‍ಎಸ್ ಹುಬ್ಬಳ್ಳಿ ಮಾರ್ಗದ 07339/07340 ರೈಲುಗಳಿಗೆ 8 ಬೋಗಿಯನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.