ADVERTISEMENT

ಬಿಎಲ್‌ಡಿಸಿ ಫ್ಯಾನ್ ಬಳಸಿ, ವಿದ್ಯುತ್‌ ಉಳಿಸಿ: ಬೆಸ್ಕಾಂ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2025, 15:49 IST
Last Updated 27 ಫೆಬ್ರುವರಿ 2025, 15:49 IST
<div class="paragraphs"><p>ಬೆಸ್ಕಾಂ</p></div>

ಬೆಸ್ಕಾಂ

   

ಬೆಂಗಳೂರು: ಇಂಧನ ದಕ್ಷತೆ ಹೆಚ್ಚಿಸಲು, ಕಡಿಮೆ ವಿದ್ಯುತ್‌ ಬಳಸುವ ಬಿಎಲ್‌ಡಿಸಿ ಫ್ಯಾನ್‌ ಅನ್ನು ಬೆಸ್ಕಾಂ ಗುರುವಾರ ಬಿಡುಗಡೆ ಮಾಡಿದೆ.

ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ), ಕರ್ನಾಟಕ ನವೀಕರಿಸಬಹುದಾದ ಇಂಧನಗಳ ಅಭಿವೃದ್ಧಿ ನಿಗಮ (ಕ್ರೆಡಲ್) ಸಹಭಾಗಿತ್ವದಲ್ಲಿ ಬೆಸ್ಕಾಂನ ಬೇಡಿಕೆ ನಿರ್ವಹಣಾ ವಿಭಾಗದ (ಡಿಎಸ್‌ಎಂ) ವತಿಯಿಂದ ಬಿಎಲ್‌ಡಿಸಿ ಸೀಲಿಂಗ್ ಫ್ಯಾನ್ ಅನ್ನು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಎನ್‌.ಶಿವಶಂಕರ್‌ ಅನಾವರಣಗೊಳಿಸಿದರು.

ADVERTISEMENT

ಎನ್‌.ಶಿವಶಂಕರ್‌ ಮಾತನಾಡಿ, ‘ಬೇಸಿಗೆ ಆರಂಭದಲ್ಲೇ ಬಿಎಲ್‌ಡಿಸಿ ಫ್ಯಾನ್‌ಗಳನ್ನು ಬಿಡುಗಡೆ ಮಾಡಿ, ಬಳಕೆಗೆ ಗ್ರಾಹಕರನ್ನು ಉತ್ತೇಜಿಸಲಾಗುತ್ತಿದೆ. ಸಾಮಾನ್ಯ ಫ್ಯಾನ್‌ಗಳಿಗಿಂತ ಅತಿ ಕಡಿಮೆ ವಿದ್ಯುತ್ ಬಳಕೆಯಾಗುವಂತೆ ಈ ಫ್ಯಾನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಗ್ರಾಹಕರ ವಿದ್ಯುತ್ ವೆಚ್ಚವನ್ನೂ ಕಡಿಮೆ ಮಾಡಲಿದೆ. ಸುಸ್ಥಿರ ಹಾಗೂ ಇಂಧನ ದಕ್ಷತೆಯ ಭವಿಷ್ಯಕ್ಕೆ ಇದು ಮಹತ್ವದ ಹೆಜ್ಜೆ’ ಎಂದರು.

‘ಬಿಇಇ, ಕ್ರೆಡಲ್, ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್‌ಸಿ) ಹಾಗೂ ಇನ್ನಿತರ ಪಾಲುದಾರರ ಪ್ರೋತ್ಸಾಹದಿಂದ ಈ ಉತ್ಪನ್ನ ಹೊರಬಂದಿದೆ. ವಿದ್ಯುತ್ ಬಳಕೆಯಲ್ಲಿ ಜಾಗೃತಿ ಹಾಗೂ ಸುಸ್ಥಿರ ನಾಳೆಗಾಗಿ, ನಾವು ಒಂದಾಗಿ ನಡೆಯಬೇಕಿದೆ’ ಎಂದು ಹೇಳಿದರು.

ಕ್ರೆಡಲ್ ವ್ಯವಸ್ಥಾಪಕ ನಿರ್ದೆಶಕ ಕೆ.ಪಿ.ರುದ್ರಪ್ಪಯ್ಯ ಮಾತನಾಡಿ, ‘ಒಂದು ಯುನಿಟ್ ವಿದ್ಯುತ್‌ ಉಳಿಸಿದರೆ, ಎರಡು ಯುನಿಟ್ ವಿದ್ಯುತ್‌ ಉತ್ಪಾದಿಸಿದಂತೆ’ ಎಂದರು.

ಪಿಡಬ್ಲ್ಯುಸಿ ಭಾರತದ ಕ್ಲೀನ್ ಎನರ್ಜಿ ವಿಭಾಗದ ಮುಖ್ಯಸ್ಥ ರಾಜೀವ್ ರಲ್ಹಾನ್ ಮಾತನಾಡಿ, ‘ಹಳೆಯ ತಂತ್ರಜ್ಞಾನದ ಫ್ಯಾನ್‌ಗಳಿಗೆ ಹೋಲಿಸಿದರೆ ಬಿಎಲ್‌ಡಿಸಿ ಫ್ಯಾನ್ ಬಳಕೆಯಿಂದ ಶೇಕಡ 50ರಷ್ಟು ವಿದ್ಯುತ್ ಉಳಿತಾಯವಾಗಲಿದೆ’ ಎಂದು ತಿಳಿಸಿದರು.

ಇಇಎಸ್‌ಎಲ್ ರಾಜ್ಯ ಮುಖ್ಯಸ್ಥ ದೀಪಕ್ ಸಹನಿ, ಬೆಸ್ಕಾಂ ತಾಂತ್ರಿಕ ನಿರ್ದೇಶಕ ಎಚ್‌.ಜೆ. ರಮೇಶ್‌, ಬೆಸ್ಕಾಂ ಡಿಎಸ್‌ಎಂ ಪ್ರಧಾನ ವ್ಯವಸ್ಥಾಪಕ ರಮೇಶ್ ವಿ.ಎಸ್., ಪಿಎಂಎಸ್ ನಿರ್ದೇಶಕ ಅಮೇಯ ಸುಬೋಧ್ ಉದ್ಘಾಂವ್ಕರ್ ಉಪಸ್ಥಿತರಿದ್ದರು.

ಬೆಸ್ಕಾಂ ಅಧಿಕೃತ ಜಾಲತಾಣದಲ್ಲಿನ ಇಇಎಸ್‌ಎಲ್‌ ಲಿಂಕ್ https://eeslmart.in/fan? affiliateid=13285 ಅಥವಾ ವೆಬ್‌ಸೈಟ್‌: eeslmart.in ಮೂಲಕ ಆನ್‌ಲೈನ್‌ನಲ್ಲಿ ಫ್ಯಾನ್ ಖರೀದಿಸಬಹುದಾಗಿದೆ. 5 ಸ್ಟಾರ್ ಪ್ರಮಾಣೀಕೃತ ಬಿ‌ಎಲ್‌ಡಿಸಿ ಸೀಲಿಂಗ್ ಫ್ಯಾನ್ ದರ ₹2,699 ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.