ADVERTISEMENT

ಭಾರತೀಯ ವಿದ್ಯಾಭವನದಲ್ಲಿ ಮಾರ್ಚ್‌ 12ರಿಂದ ಬೊಂಬೆ ಹಬ್ಬ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 2:18 IST
Last Updated 24 ಫೆಬ್ರುವರಿ 2023, 2:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಇನ್ಫೊಸಿಸ್ ಪ್ರತಿಷ್ಠಾನದ ಸಹಯೋಗದಲ್ಲಿ ಭಾರತೀಯ ವಿದ್ಯಾಭವನವು ಮಾರ್ಚ್ 12ರಿಂದ ಮಾರ್ಚ್ 18ರವರೆಗೆ ‘ನವರಸಗಳು’ ಶೀರ್ಷಿಕೆಯಡಿ ಬೊಂಬೆ ಹಬ್ಬ ಹಮ್ಮಿಕೊಂಡಿದೆ.

ರೇಸ್‌ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದ ಇ.ಎಸ್.ವಿ. ಸಭಾಂಗಣದಲ್ಲಿ ಏಳು ದಿನಗಳ ಬೊಂಬೆ ಹಬ್ಬ ನಡೆಯಲಿದೆ. ಬೊಂಬೆ ಉತ್ಸವವನ್ನು ವಿದ್ವಾಂಸ ಶತಾವಧಾನಿ ಆರ್. ಗಣೇಶ್ ಉದ್ಘಾಟಿಸಲಿದ್ದಾರೆ.

ಪ್ರತಿದಿನ ಎಂ.ಆರ್. ಶ್ರೀನಿವಾಸ್, ರಂಗಪುತ್ಥಳಿ ಕಲಾವಿದರಿಂದ ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಬೊಂಬೆ ಪ್ರದರ್ಶನ, ಕಲಾವಿದ ಜಿ.ಎಸ್.ಬಿ. ಅಗ್ನಿಹೋತ್ರಿ ಅವರಿಂದ ‘ಕಲಾಶಿಬಿರ’ ಹಾಗೂ ಎನ್. ಶ್ರೀದೇವಿ ಅವರಿಂದ ಬೊಂಬೆ ಅಂಚೆಚೀಟಿಗಳ ಪ್ರದರ್ಶನ ನಡೆಯಲಿದೆ. ‌

ADVERTISEMENT

ಬೆಳಿಗ್ಗೆ 11ರಿಂದ ಸಂಜೆ 6 ಗಂಟೆಯವರೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಇರಲಿದೆ.

ಮಾರ್ಚ್ 12ರಂದು ಬೆಳಿಗ್ಗೆ 11.30ಕ್ಕೆ ಧಾತು ಪಪೆಟ್ ಥಿಯೇಟರ್ ‘ಬೊಂಬೆಗಳ ಕಾವ್ಯಾಭಿವ್ಯಕ್ತಿ’ಯನ್ನು ಪ್ರಸ್ತುತಪಡಿಸಲಿದೆ. ಸಂಜೆ 5ಕ್ಕೆ ಸುಚಿತ್ರ ಫಿಲ್ಮ್ ಸೊಸೈಟಿ ಬೊಂಬೆಗಳನ್ನು ಕುರಿತ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಿದೆ. 13ರಂದು ಸಂಜೆ 5.30ಕ್ಕೆ ಚೂಡಾಮಣಿ ನಂದಗೋಪಾಲ್ ಅವರಿಂದ ‘ಚಿತ್ರಕಲೆ ಮತ್ತು ಶಿಲ್ಪಗಳಲ್ಲಿ ನವರಸಗಳ ಅಭಿವ್ಯಕ್ತಿ’ ವಿಷಯದ ಮೇಲೆ ಉಪನ್ಯಾಸ, ಸಂಜೆ 6ಕ್ಕೆ ‘ಲಂಕಾ ದಹನ’ ಬೊಂಬೆಯಾಟ ನಡೆಯಲಿದೆ. 14ರಂದು ಸಂಜೆ 5.30ಕ್ಕೆ ಲಲಿತಾ ಶ್ರೀನಿವಾಸನ್ ಅವರಿಂದ ‘ಸಾಂಪ್ರದಾಯಿಕ ನೃತ್ಯಗಳಲ್ಲಿ ನವರಸಗಳ ಅಭಿವ್ಯಕ್ತಿ’ ವಿಷಯದ ಮೆಲೆ ಉಪನ್ಯಾಸ, ಸಂಜೆ 6ಕ್ಕೆ ವೀರಾಭಿಮನ್ಯು ಸೂತ್ರದಬೊಂಬೆ ರಂಗಪ್ರಸ್ತುತಿ ನಡೆಯಲಿವೆ.

15ರಂದು ಸಂಜೆ 5.30ಕ್ಕೆ ಎಚ್.ಎಸ್. ವೆಂಕಟೇಶಮೂರ್ತಿ ಅವರಿಂದ ‘ಸಾಹಿತ್ಯದಲ್ಲಿ ನವರಸಗಳ ಅಭಿವ್ಯಕ್ತಿ’ ವಿಷಯದ ಮೇಲೆ ಉಪನ್ಯಾಸ, ಸಂಜೆ 6ಕ್ಕೆ ‘ಇಂದ್ರಜಿತು ಕಾಳಗ’ ತೊಗಲು ಬೊಂಬೆಯಾಟ, 16ರಂದು ಸಂಜೆ 5.30ಕ್ಕೆ ಟಿ.ಎಸ್. ಸತ್ಯವತಿ ಅವರಿಂದ ‘ಶಾಸ್ತ್ರೀಯ ಸಂಗೀತದಲ್ಲಿ ನವರಸಗಳ ಅಭಿವ್ಯಕ್ತಿ’ ಎಂಬ ವಿಷಯದ ಮೇಲೆ ಉಪನ್ಯಾಸ, ಸಂಜೆ 6ಕ್ಕೆ ‘ಗಿರಿಜಾ ಕಲ್ಯಾಣ’ ಸೂತ್ರದ ಬೊಂಬೆಯಾಟ ನಡೆಯಲಿದೆ.

17ರಂದು ಸಂಜೆ 5.30ಕ್ಕೆ ಬಿ.ವಿ. ರಾಜಾರಾಂ ಅವರಿಂದ ‘ರಂಗ ಪ್ರಯೋಗಗಳಲ್ಲಿ ನವರಸಗಳ ಅಭಿವ್ಯಕ್ತಿ’ ವಿಷಯದ ಮೇಲೆ ಉಪನ್ಯಾಸ, ಸಂಜೆ 6ಕ್ಕೆ ‘ಬೊಂಬೆ ವಿಭಾವ’ ಬೊಂಬೆ ರಂಗ ಪ್ರಸ್ತುತಿ, 18ರಂದು ಸಂಜೆ 5.30ಕ್ಕೆ ಟಿ.ಎಸ್. ನಾಗಾಭರಣ ಅವರು ‘ಸಿನಿಮಾಗಳಲ್ಲಿ ನವರಸಗಳ ಅಭಿವ್ಯಕ್ತಿ’ ವಿಷಯದ ಮೇಲೆ ಉಪನ್ಯಾಸ ಹಾಗೂ ಸಂಜೆ 6ಕ್ಕೆ ‘ದೇವಿ ಮಹಾತ್ಮೆ’ ಯಕ್ಷಬೊಂಬೆಯಾಟ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.