ADVERTISEMENT

ಹಠ ಬಿದ್ದು ಕೆಲಸ ಮಾಡಿಸುತ್ತಿದ್ದ ಭೀಮಣ್ಣ ಖಂಡ್ರೆ: ಮಲ್ಲಿಕಾರ್ಜುನ ಖರ್ಗೆ

ನುಡಿನಮನ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 0:30 IST
Last Updated 15 ಫೆಬ್ರುವರಿ 2026, 0:30 IST
ಭೀಮಣ್ಣ ಖಂಡ್ರೆ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಬಿ.ಎಸ್. ಯಡಿಯೂರಪ್ಪ, ಶಿವಮೂರ್ತಿ ಶಿವಾಚಾರ್ಯ, ಬಸವಲಿಂಗ ಪಟ್ಟದ್ದೇವರು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಈಶ್ವರ ಬಿ ಖಂಡ್ರೆ ಪುಷ್ಪನಮನ ಸಲ್ಲಿಸಿದರು. ಪ್ರಜಾವಾಣಿ ಚಿತ್ರ
ಭೀಮಣ್ಣ ಖಂಡ್ರೆ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಬಿ.ಎಸ್. ಯಡಿಯೂರಪ್ಪ, ಶಿವಮೂರ್ತಿ ಶಿವಾಚಾರ್ಯ, ಬಸವಲಿಂಗ ಪಟ್ಟದ್ದೇವರು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಈಶ್ವರ ಬಿ ಖಂಡ್ರೆ ಪುಷ್ಪನಮನ ಸಲ್ಲಿಸಿದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹಿಡಿದ ಕೆಲಸವನ್ನು ಹಠ ಹಿಡಿದು ಮಾಡಿಸುವ ಛಾತಿ ಇದ್ದ ಭೀಮಣ್ಣ ಖಂಡ್ರೆ ಅವರು ಜನರಿಗಾಗಿ ಬದುಕಿದವರು. ಸಮಾಜದ ಏಳಿಗೆಗಾಗಿ ದುಡಿದವರು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ವೀರಶೈವ ಲಿಂಗಾಯತ ಮಹಾಸಭಾ ಮತ್ತು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನನಗೆ 1957ರಿಂದಲೇ ಭೀಮಣ್ಣ ಖಂಡ್ರೆ ಅವರ ಪರಿಚಿತರಾಗಿದ್ದರು. ನಮ್ಮ ಅನೇಕ ವಿಚಾರಗಳು ಹೊಂದಿಕೆಯಾಗುತ್ತಿದ್ದವು.‌ ಹೀಗಾಗಿ ಅದೇ ವಿಶ್ವಾಸ ಕೊನೆಯವರೆಗೂ ಉಳಿದಿತ್ತು. ಅವರು ನಂಬಿಕೆ ಇಟ್ಟಿದ್ದ ಸಿದ್ಧಾಂತದ ಮೇಲೆ ನಾವೂ ನಂಬಿಕೆ ಇಟ್ಟಿದ್ದೇವೆ’ ಎಂದು ನೆನಪು ಮಾಡಿಕೊಂಡರು.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ಬಸವಾದಿ ಶರಣರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು 102 ವರ್ಷ ಸಾಮಾಜಿಕ ಚಿಂತನೆಯೊಂದಿಗೆ ಸಾರ್ಥಕ ಜೀವನವನ್ನು ಭೀಮಣ್ಣ ಖಂಡ್ರೆ ನಡೆಸಿದ್ದರು. ಮಹಾತ್ಮಾ ಗಾಂಧೀಜಿಯವರಿಂದ ಪ್ರಭಾವಿತರಾಗಿ ಸ್ವಾತಂತ್ರ‍್ಯ ಹೋರಾಟದಲ್ಲಿ ಸಕ್ರಿಯರಾಗಿ ‍ಪಾಲ್ಗೊಂಡಿದ್ದರು. ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಿದ್ದರು’ ಎಂದು ಸ್ಮರಿಸಿದರು.

ಹೈದ್ರಾಬಾದ್ ಕರ್ನಾಟಕ ವಿಮೋಚನೆ ಮತ್ತು ಏಕೀಕರಣದ ಚಳವಳಿಯಲ್ಲಿ ಭಾಗವಹಿಸಿ, ಜನಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು. ಕರ್ನಾಟಕ ಏಕೀಕರಣ ಹೋರಾಟದಲ್ಲಿಯೂ ಸಕ್ರಿಯರಾಗಿದ್ದರು. 1972ರ ಬರಗಾಲದ ಪರಿಸ್ಥಿಯಲ್ಲಿ ಬೀಜ ಚಳವಳಿ ಕೈಗೊಳ್ಳುವ ಮೂಲಕ ರೈತರಿಗೆ ನೆರವಾಗಿದ್ದರು. ಕಿಸಾನ್ ರ‍್ಯಾಲಿಗಳನ್ನು ಆಯೋಜಿಸಿ, ರೈತರ ಸಮಸ್ಯೆಗಳನ್ನು ಕೇಂದ್ರದ ಗಮನಕ್ಕೆ ತಂದಿದ್ದರು ಎಂದು ಹೇಳಿದರು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಭೀಮಣ್ಣ ಖಂಡ್ರೆ ವ್ಯಕ್ತಿಯಲ್ಲ, ಸಮಾಜದ ಶಕ್ತಿಯಾಗಿದ್ದರು. ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ ಮತ್ತು ಔದ್ಯಮಿಕ ಕ್ಷೇತ್ರಕ್ಕೆ ಅವರ ಕೊಡುಗೆ ದೊಡ್ಡದು’ ಎಂದು ತಿಳಿಸಿದರು.

ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಫಲಾಹಾರ ಮಾಡುತ್ತಾ ಶತಾಯುಷಿಗಳಾಗಿ ಬದುಕಿದ್ದ ಭೀಮಣ್ಣ ಖಂಡ್ರೆ ಯೋಗಿಯಂತಿದ್ದರು. ಅವರು ರಾಜೀ ಮಾಡಿಕೊಂಡಿದ್ದರೆ ಮುಖ್ಯಮಂತ್ರಿಯೇ ಆಗಿರುತ್ತಿದ್ದರು. ಅವರು ಎಂದೂ ರಾಜೀ ಮಾಡಿಕೊಂಡವರಲ್ಲ. ಹೀಗಾಗಿಯೇ ತಮ್ಮ ಗುರುಗಳು ಅವರಿಗೆ ಲೋಕನಾಯಕ ಎಂದು ಬಿರುದು ನೀಡಿದ್ದರು’ ಎಂದರು.

ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸರ್ಕಾರ ಪ್ರಶಸ್ತಿ ನೀಡುವುದು ಸಾಮಾನ್ಯ ಆದರೆ, ಜನರೇ ನೀಡುವ ಪ್ರಶಸ್ತಿ ಅಪರೂಪದ್ದು. ಕರ್ನಾಟಕದ ಲೋಕನಾಯಕ ಎಂದು ಜನರಿಂದ ಪ್ರಶಸ್ತಿ ಪಡೆದ ಭೀಮಣ್ಣ ಖಂಡ್ರೆ ಹಿರಿಮೆ ಅಸಾಧಾರಣವಾದ್ದು’ ಎಂದು ಹೇಳಿದರು.

ಭೀಮಣ್ಣ ಖಂಡ್ರೆ ನಡೆದು ಬಂದ ಹಾದಿಯನ್ನು ಅವರ ಮಗ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಈಶ್ವರ ಖಂಡ್ರೆ ವಿವರಿಸಿದರು. ವಿವಿಧ ಸ್ವಾಮೀಜಿಗಳು, ಸಚಿವರು, ಶಾಸಕರು, ಅಧಿಕಾರಿಗಳು, ಸಮುದಾಯದ ಮುಖಂಡರು ಭಾಗವಹಿಸಿದ್ದರು.

ಭೀಮಣ್ಣ ಖಂಡ್ರೆ ಅವರು 1000 ಬಾಲಕಿಯರ ವಸತಿ ನಿಲಯ ಕಟ್ಟುವ ಕನಸು ಕಂಡಿದ್ದರು. ಇದಕ್ಕೆ ಬಿಡಿಎ ವತಿಯಿಂದ ಬೆಂಗಳೂರಿನಲ್ಲಿ ಜಾಗ ನೀಡಲಾಗುವುದು.
ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ
ಶಾಸಕರ ಭವನದಲ್ಲಿ ಕೊಠಡಿ ಸಿಗದಿದ್ದಾಗ ಮುಖ್ಯಮಂತ್ರಿ ಕುರ್ಚಿಯಲ್ಲೇ ಭೀಮಣ್ಣ ಖಂಡ್ರೆ ಕುಳಿತಿದ್ದರು. ಕೊಠಡಿ ನೀಡಲಾಗಿದೆ ಎಂದು ಘೋಷಿಸಿದ ಬಳಿಕವೇ ಎದ್ದಿದ್ದರು. ಯಾರಿಗೂ ಅಂಜುತ್ತಿರಲಿಲ್ಲ
ಬಸವರಾಜ ಹೊರಟ್ಟಿ ವಿಧಾನಪರಿಷತ್ ಸಭಾಪತಿ
ಜನಪರ ಕಾಳಜಿ ಇದ್ದ ಭೀಮಣ್ಣ ಖಂಡ್ರೆ ಅವರ ಬದುಕು ಅವಿಸ್ಮರಣೀಯ ಅಧ್ಯಾಯ. ಅವರ ಅಗಲಿಕೆಯಿಂದ ಸಮಾಜ ಒಬ್ಬ ಹಿರಿಯ ಮುತ್ಸದ್ದಿಯ ಮಾರ್ಗದರ್ಶನವನ್ನು ಕಳೆದುಕೊಂಡಿದ್ದೆವು
ಬಿ.ಎಸ್. ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.