ADVERTISEMENT

ಭೂತಕೋಲ: ಎಫ್‌ಐಆರ್‌ ರದ್ದು ಕೋರಿ ಚೇತನ್‌ ಸಲ್ಲಿಸಿದ್ದ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 4:16 IST
Last Updated 24 ನವೆಂಬರ್ 2022, 4:16 IST
 ಚೇತನ್‌
ಚೇತನ್‌   

ಬೆಂಗಳೂರು: ‘ಕಾಂತಾರ ಚಲನಚಿತ್ರದಲ್ಲಿನ ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ಹೇಳಿರುವುದು ನಿಜವಲ್ಲ’ ಎಂಬ ನಟ ಚೇತನ್ಟ್ವೀಟ್‌ ಆಕ್ಷೇಪಿಸಿ ದಾಖಲಿಸಲಾಗಿರುವ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

‘ನನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಬೇಕು’ ಎಂದು ಕೋರಿ ಚೇತನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಚೇತನ್‌, ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದರಿಂದ ಯಾರಿಗೂ ತೊಂದರೆಯಾಗಿಲ್ಲ ಅಥವಾ ಸಮಾಜದಲ್ಲಿ ಅಶಾಂತಿಯೂ ಉಂಟಾಗಿಲ್ಲ. ಆದರೂ, ಅವರ ವಿರುದ್ಧ ಎಫ್‌ಐಆರ್ ದಾಖಲಿಸ‌ಲಾಗಿದ್ದು, ಅದನ್ನು ರದ್ದುಗೊಳಿಸಬೇಕು’ ಎಂದು ಕೋರಿದರು.

ADVERTISEMENT

ಇದಕ್ಕೆ ಬಲವಾದ ಆಕ್ಷೇಪವ್ಯಕ್ತಪಡಿಸಿದ ಸರ್ಕಾರಿ ವಕೀಲರು, ‘ಅರ್ಜಿದಾರರು ಉದ್ದೇಶಪೂರ್ವಕ ವಾಗಿಯೇ ಹೇಳಿಕೆ ನೀಡಿ ವಿವಾದ ಎಬ್ಬಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಈ ಹಂತದಲ್ಲಿ ಎಫ್‌ಐಆರ್ ರದ್ದುಗೊಳಿಸಬಾರದು. ಅರ್ಜಿ ವಜಾಗೊಳಿಸಿ ತನಿಖೆ ಎದುರಿಸುವಂತೆ ಆದೇಶಿಸಬೇಕು’ ಎಂದು ಮನವಿ ಮಾಡಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಪ್ರಕರಣ ಇನ್ನೂ ತನಿಖಾ ಹಂತದಲ್ಲಿ ಇರುವಾಗ ಕೋರ್ಟ್ ಹಸ್ತಕ್ಷೇಪ ಮಾಡಬಾರದು’ ಎಂಬ ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ಚೇತನ್‌ ಅರ್ಜಿಯನ್ನು ತಿರಸ್ಕರಿಸಿತು.

ಪ್ರಕರಣವೇನು?: ಕಾಂತಾರದ ಯಶಸ್ಸಿಗೆ ಪ್ರತಿಕ್ರಿಯಿಸುತ್ತಾ ಚೇತನ್ ಕಳೆದ ಅಕ್ಟೋಬರ್ 18ರಂದು ಟ್ವೀಟ್‌ ಮಾಡುವ ಮೂಲಕ, ‘ಪಂಬದ, ಪರವರ, ನಲಿಕೆ ಬಹುಜನ ಸಂಪ್ರದಾಯಗಳು. ಹಿಂದೂ ಧರ್ಮಕ್ಕಿಂತ ಹಿಂದಿನಿಂದಲೂ ಇವೆ. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆ ಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ’ ಎಂದು ಟ್ವೀಟ್‌ ಮಾಡಿದ್ದರು.

‘ಈ ಟ್ವೀಟ್‌ ಅವಹೇಳನಕಾರಿಯಾಗಿದೆ’ ಎಂದು ಆರೋಪಿಸಿ ಬಜರಂಗದ ದಳ ಕಾರ್ಯಕರ್ತ ಶಿವಕುಮಾರ್ ಅಕ್ಟೋಬರ್ 22ರಂದು ಶೇಷಾದ್ರಿಪುರ ಠಾಣೆಯಲ್ಲಿ ದೂರು ದಾಖಲಿಸಿ, ‘ಚೇತನ್‌, ಕಾಂತಾರ ಚಿತ್ರದಲ್ಲಿನ ದೈವದ ಬಗೆಗಿನ ನಂಬಿಕೆ ಕುರಿತು ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸಿದ್ದಾರೆ.

ಆದ್ದರಿಂದ ಭಾರತೀಯ ದಂಡ ಸಂಹಿತೆ–1860ರ ಕಲಂ 505ರ ಅಡಿ ಎಫ್‌ಐಆರ್‌ ದಾಖಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.