
ಬೆಂಗಳೂರು: ಬಿಹಾರದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮತದಾನ ನಮಾಡಲು ತೆರಳುವವರಿಗೆ ಮೂರು ದಿನ ರಜೆ ನೀಡಲು ಅವರು ಕೆಲಸ ಮಾಡುವ ಸಂಸ್ಥೆಗಳಿಗೆ ಸೂಚನೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬ್ಯಾಟರಾಯನಪುರದ ಕಾಫಿ ಬೋರ್ಡ್ ಲೇಔಟ್‌ನಲ್ಲಿ ಬಿಹಾರದ ಬೆಂಗಳೂರು ನಿವಾಸಿಗಳ ಸಂಘದ ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಬಿಹಾರದ ಅಭಿವೃದ್ಧಿಗಾಗಿ ಮಹಾಘಟಬಂಧನ್‌ಗೆ ಮತ ನೀಡಿ. ನಿಮ್ಮ ಸಂಬಂಧಿಕರಿಗೂ ಈ ಬಗ್ಗೆ ತಿಳಿಸಿ. ನಿಮ್ಮ ರಾಜ್ಯದ ಅಭಿವೃದ್ಧಿಗಾಗಿ ಮತ ಚಲಾವಣೆ ಮಾಡಬೇಕು. ಮತವನ್ನು ವ್ಯರ್ಥ ಮಾಡಬಾರದು’ ಎಂದು ಮನವಿ ಮಾಡಿದರು.
‘ಬಿಹಾರದಲ್ಲಿ ಲಕ್ಷಾಂತರ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕಲಾಗಿದೆ. ನಿಮ್ಮ ಊರಿನಲ್ಲಿರುವವರ ಬದುಕನ್ನು ಉಳಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ನೀವು ಇಲ್ಲಿ ಬದುಕು ಕಟ್ಟಿಕೊಂಡಿರಬಹುದು. ನಿಮ್ಮ ಮತ ಅಲ್ಲಿರಬಹುದು. ಅಥವಾ ನಿಮ್ಮ ಸಂಬಂಧಿಕರು ಅಲ್ಲಿರಬಹುದು. ಮತದಾನ ಮಾಡಲು ಊರಿಗೆ ತೆರಳಿ. ಅದಕ್ಕಾಗಿ ಮೂರು ದಿನ ರಜೆ ನೀಡುವಂತೆ ನೀವು ಕೆಲಸ ನಿರ್ವಹಿಸುವ ಸಂಸ್ಥೆಗಳು, ಗುತ್ತಿಗೆದಾರರಿಗೆ ಹಾಗೂ ಕ್ರೆಡಾಯ್ ಸಂಸ್ಥೆಗೆ ಸೂಚಿಸುತ್ತೇನೆ’ ಎಂದರು.
‘ಈ ಮೊದಲಿನಂತೆ ನಿತೀಶ್ ಕುಮಾರ್ ಅವರ ಕೈಯಲ್ಲಿ ಬಿಹಾರವಿಲ್ಲ. ಅವರು ರಾಜಕೀಯದ ಕೊನೆಗಾಲದಲ್ಲಿದ್ದಾರೆ. ಬಿಹಾರದ ಅಭಿವೃದ್ಧಿಗೆ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಮಾಡಬೇಕು. ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಬೇಕು’ ಎಂದು ಕೋರಿದರು.
‘ಬಿಹಾರದವರು ಇಲ್ಲದಿದ್ದರೆ ಬೆಂಗಳೂರಿನಲ್ಲಿ ಅತ್ಯುತ್ತಮ ಕಟ್ಟಡಗಳನ್ನು ನಿರ್ಮಾಣ ಮಾಡಲು ಸಾಧ್ಯವಿರುತ್ತಿರಲಿಲ್ಲ. ನಿಮ್ಮ ಸಂಘದ ಸಮುದಾಯ ಭವನಕ್ಕೆ ನಿವೇಶನ ನೀಡಲಾಗುವುದು. ಸಂಘ ಸಂಸ್ಥೆಗಳಿಗೆ ನಿವೇಶನ ಒದಗಿಸಲು ಒಂದು ತಿಂಗಳ ಒಳಗೆ ಅಧಿಸೂಚನೆ ಹೊರಡಿಸಲಾಗುವುದು’ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಅವರು ಕನ್ನಡದಲ್ಲಿ ಮಾಡಿದ ಭಾಷಣವನ್ನು ತರ್ಜುಮೆ ಮಾಡಲು ತಿಳಿಸಿದಾಗ ‘ನಾವು ಬಿಹಾರಿಗಳಲ್ಲ, ಕನ್ನಡದ ಬಿಹಾರಿಗಳು. ಕರ್ನಾಟಕ ರಾಜ್ಯೋತ್ಸವ ಆಚರಿಸಿದ್ದೇವೆ’ ಎಂದು ಸಭೆಯಲ್ಲಿದ್ದವರು ತಿಳಿಸಿ ಅಚ್ಚರಿ ಮೂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.