ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಪೊಲೀಸರು, ಮೊದಲನೇ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಜುಲೈ 15ರಂದು ಭಾರತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಕ್ಲು ಶಿವ ಹತ್ಯೆ ನಡೆದ ಬಳಿಕ ಜಗದೀಶ್ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ, ದೆಹಲಿಗೆ ಬರುತ್ತಿದ್ಧಂತೆ ಸಿಐಡಿ ಅಧಿಕಾರಿಗಳು ಬಂಧಿಸಿ, ಬೆಂಗಳೂರಿಗೆ ಕರೆತಂದರು. ನಂತರ ಆರೋಪಿಯನ್ನು 5ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, 10 ದಿನ ತಮ್ಮ ವಶಕ್ಕೆ ಪಡೆದಿದ್ದಾರೆ.
ಸಿಐಡಿ ಎಸ್ಪಿ ವೆಂಕಟೇಶ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಬಿಕ್ಲು ಶಿವ ಹಾಗೂ ಜಗದೀಶ್ ನಡುವಿನ ವೈಷಮ್ಯ, ಕಿತ್ತಗನೂರು ಜಮೀನಿನ ಗಲಾಟೆ, ಹಳೆ ಪ್ರಕರಣಗಳು ಹಾಗೂ ಶಾಸಕ ಬೈರತಿ ಬಸವರಾಜ್ ಜೊತೆಗಿನ ಸಂಪರ್ಕದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ಅಲ್ಲದೇ ಹಲವು ಬಾರಿ ಶಾಸಕರ ಜೊತೆ ಕಾಣಿಸಿಕೊಂಡಿರುವುದು, ಕುಂಭಮೇಳದಲ್ಲೂ ಶಾಸಕರ ಜೊತೆಯಲ್ಲಿ ಇರುವುದು, ಬೈರತಿ ಬಸವರಾಜ್ ಪರಿಚಿತರಾದದ್ದು ಹೇಗೆ ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಬೈರತಿ ಬಸವರಾಜ್‌ಗೂ ತನಗೂ ಆತ್ಮೀಯತೆ ಇಲ್ಲ. ಕ್ಷೇತ್ರದ ಶಾಸಕರಾದ ಕಾರಣ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಕುಂಭಮೇಳಕ್ಕೆ ಹೋಗಿದ್ದಾಗ ಸಿಕ್ಕಿದ್ರು, ಹಾಗಾಗಿ ಅವರ ಜತೆ ಫೋಟೊ ತೆಗೆಸಿಕೊಂಡಿದ್ದೆ. ಶಿವನ ಕೊಲೆಗೂ ತನಗೂ ಸಂಬಂಧವಿಲ್ಲ’ ಎಂದು ಪ್ರಾಥಮಿಕ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಶಿವ ಹತ್ಯೆಯಲ್ಲಿ ಜಗ್ಗನ ಪಾತ್ರದ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಸಾಕ್ಷಿಗಳನ್ನು ಮುಂದಿಟ್ಟು ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ. ಆತನ ಹೇಳಿಕೆಗಳನ್ನು ಆಧರಿಸಿ, ಪ್ರಕರಣದ ಐದನೇ ಆರೋಪಿ, ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಮತ್ತೊಮ್ಮೆ ವಿಚಾರಣೆ ನಡೆಸುವ ಬಗ್ಗೆ ನಿರ್ಧರಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.
ಬೈರತಿ ಬಸವರಾಜ್ ಅವರನ್ನು ಭಾರತಿನಗರ ಠಾಣೆಯ ಪೊಲೀಸರು ಎರಡು ಬಾರಿ ವಿಚಾರಣೆ ನಡೆಸಿದ್ದರು. ನಂತರ, ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.