
ಬೆಂಗಳೂರು: ‘ರೈಲ್ವೆ ಕಂಟೊನ್ಮೆಂಟ್ ಕಾಲೊನಿಯಲ್ಲಿ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿಲ್ಲ’ ಎಂದು ಹೈಗ್ರೌಂಡ್ಸ್ ಪೊಲೀಸರು ತಿಳಿಸಿದ್ದಾರೆ.
ರೈಲ್ವೆ ಕಂಟೊನ್ಮೆಂಟ್ ಕಾಲೊನಿಯಲ್ಲಿ 371 ಮರಗಳ ಪ್ರದೇಶವನ್ನು ಜೀವವೈವಿಧ್ಯ ಪಾರಂಪರಿಕ ತಾಣ ಎಂದು ಹೊರಡಿಸಿದ್ದ ಅಧಿಸೂಚನೆಯನ್ನು ಅರಣ್ಯ ಇಲಾಖೆ ವಾಪಸ್ ಪಡೆದ ನಂತರ, ಜೆಸಿಬಿಗಳು ಮರಗಳನ್ನು ತೆರವು ಮಾಡುತ್ತಿವೆ ಎಂದು ಹೇಳಲಾಗಿದೆ.
ಕಾಲೊನಿಯಲ್ಲಿ ಜೆಸಿಬಿ ಬಂದಿರುವುದನ್ನು ಗಮನಿಸಿದ ಪರಿಸರ ಕಾರ್ಯಕರ್ತರು, ‘ನಮ್ಮನ್ನು ಒಳಗೆ ಬಿಡುತ್ತಿಲ್ಲ. ದಯವಿಟ್ಟು ಇಲ್ಲೇನಾಗುತ್ತಿದೆ ಎಂಬುದರ ಮಾಹಿತಿ ನೀಡಿ’ ಎಂದು ಹೈಗ್ರೌಂಡ್ಸ್ ಪೊಲೀಸರ ಮೊರೆ ಹೋಗಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ, ಮರಗಳನ್ನು ಕಡಿಯಲು ಅನುಮತಿ ನೀಡಿಲ್ಲ. ಸಣ್ಣ ಮರಗಳನ್ನು ತೆರವು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ ಎಂದು ಪರಿಸರ ಕಾರ್ಯಕರ್ತರು ಮಾಹಿತಿ ನೀಡಿದರು.
ಕಂಟೊನ್ಮೆಂಟ್ ಕಾಲೊನಿಯಲ್ಲಿ 371 ಮರಗಳಿರುವ 8.61 ಎಕರೆ ಪ್ರದೇಶವನ್ನು ‘ಜೀವವೈವಿಧ್ಯ ಪಾರಂಪರಿಕ ತಾಣ’ ಎಂದು ಘೋಷಿಸಿ, 2025ರ ಸೆಪ್ಟೆಂಬರ್ 10ರಂದು ಅಧಿಸೂಚಿಸಲಾಗಿತ್ತು. ಈ ಆದೇಶವನ್ನು ಯಾವುದೇ ಕಾರಣ ನೀಡದೆ ಡಿ.6ರಂದು ಅರಣ್ಯ ಇಲಾಖೆಯು ಹಿಂಪಡೆದಿದೆ.
ಕಾನೂನು ತೊಡಕು: ‘ರೈಲು ಭೂ ಅಭಿವೃದ್ಧಿ ಪ್ರಾಧಿಕಾರ (ಆರ್‌ಎಲ್‌ಡಿಎ) 8.61 ಎಕರೆ ಭೂಮಿಯನ್ನು 60 ವರ್ಷಕ್ಕೆ ಬಾಗ್ಮನೆ ಟೆಕ್ಸ್‌ವರ್ಥ್ ಅವರಿಗೆ ಗುತ್ತಿಗೆಗೆ ನೀಡಿದೆ. ಅವರು ವಾಣಿಜ್ಯ ಸಂಕೀರ್ಣ ನಿರ್ಮಿಸಲು 368 ಮರಗಳನ್ನು ಕಡಿಯಲು ಮುಂದಾದಾಗ ಪರಿಸರಕ್ಕಾಗಿ ನಾವು ಸಂಘಟನೆ ಸೇರಿದಂತೆ ಪರಿಸರ ಕಾರ್ಯಕರ್ತರು ಹೋರಾಟ ನಡೆಸಿದರು. ಇದಕ್ಕೆ ಸ್ಪಂದಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ಜೀವವೈವಿಧ್ಯ ಮಂಡಳಿಯಿಂದ ಪ್ರದೇಶವನ್ನು ‘ಜೀವವೈವಿಧ್ಯ ಪಾರಂಪರಿಕ ತಾಣ’ ಎಂದು ಘೋಷಿಸಿದ್ದರು.
ಆರ್‌ಎಲ್‌ಡಿಎ ಅವರು ಅರಣ್ಯ ಇಲಾಖೆಗೆ ಪತ್ರ ಬರೆದು, ‘ರೈಲ್ವೆ ಕಾಯ್ದೆಯ ಪ್ರಕಾರ, ರೈಲ್ವೆ ಭೂಮಿಯನ್ನು ರಾಜ್ಯ ಸರ್ಕಾರ ಪಡೆಯಲು ಅಥವಾ ಅದನ್ನು ಸಂರಕ್ಷಿಸುವಂತೆ ಅಧಿಸೂಚನೆ ಮಾಡಲು ಬರುವುದಿಲ್ಲ. ರೈಲ್ವೆ ಯೋಜನೆಗಳಿಗೆ ಇಲ್ಲಿ ಕಟ್ಟಡ ನಿರ್ಮಾಣ ಅಗತ್ಯವಾಗಿದ್ದು, ಯೋಜನೆ ಮುಂದುವರಿಯಬೇಕಾಗಿದೆ. ಜೀವವೈವಿಧ್ಯ ಪಾರಂಪರಿಕ ತಾಣ ಎಂದು ನೀವು ಘೋಷಿಸಲು ಬರುವುದಿಲ್ಲ ಎಂದು ರೈಲ್ವೆ ಕಾಯ್ದೆಯನ್ನು ಉಲ್ಲೇಖಿಸಿದ್ದರು.
‘ಇದರಿಂದ ವಿಚಲಿತರಾದ ಅರಣ್ಯ ಇಲಾಖೆ ಅಧಿಕಾರಿಗಳು, ಯಾವುದೇ ವಿವರಣೆ ನೀಡದೆ, ಅರಣ್ಯ ಸಚಿವರಿಗೆ ಮಾಹಿತಿಯನ್ನೂ ನೀಡದೆ ‘ಜೀವವೈವಿಧ್ಯ ಪಾರಂಪರಿಕ ತಾಣ’ದ ಅಧಿಸೂಚನೆಯನ್ನು ವಾಪಸ್ ಪಡೆದಿದ್ದಾರೆ. ‘ರೈಲ್ವೆ ಸಚಿವಾಲಯದೊಂದಿಗೆ ಮಾತುಕತೆ ನಡೆಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದೂ ಹೇಳದೆ ಎಲ್ಲ ಹಾದಿಗಳೂ ಮುಚ್ಚಿದ ಹಾಗೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ವರ್ತಿಸಿದ್ದಾರೆ’ ಎಂದು ಪರಿಸರ ಕಾರ್ಯಕರ್ತರು ದೂರಿದ್ದಾರೆ.
‘371 ಮರಗಳನ್ನು ಕಡಿತ ಮಾಡದೆ ಸ್ಥಳಾಂತರ ಮಾಡಲು ಪ್ರಯತ್ನಿಸಲಾಗುತ್ತದೆ ಎಂದು ಆರ್‌ಎಲ್‌ಡಿಎ ಪತ್ರದಲ್ಲಿ ತಿಳಿಸಿದೆ. ಆದರೆ, ಅದನ್ನು ಸ್ಥಳಾಂತರ ಮಾಡುವುದು ಸಾಧ್ಯವಿಲ್ಲ. ಅರಣ್ಯ ಸಚಿವರು ರೈಲ್ವೆ ಸಚಿವರು ಹಾಗೂ ಸಚಿವಾಲಯದೊಂದಿಗೆ ಮಾತುಕತೆ ನಡೆಸಿ, 371 ಮರಗಳನ್ನು ಉಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಪರಿಸರಕ್ಕಾಗಿ ನಾವು ಸಂಘಟನೆಯ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಆಗ್ರಹಿಸಿದರು.
‘ಅರಣ್ಯ ಇಲಾಖೆಯ ಅಧಿಕಾರಿಗಳು ಏನೂ ಗೊತ್ತಿಲ್ಲದೆ ಅಧಿಸೂಚನೆ ಮಾಡಿದ್ದಾರೆ ಎಂಬುದು ಸುಳ್ಳು. ರಾಜಕೀಯ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾಗೆ ಮಣಿದು ವರ್ತಿಸುತ್ತಿದ್ದಾರೆ. ಸಚಿವರು ಹಾಗೂ ಮುಖ್ಯಮಂತ್ರಿಯವರು ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.