ADVERTISEMENT

ಬಿಟ್‌ ಕಾಯಿನ್ ಅಕ್ರಮ: ಮಾಹಿತಿ ನೀಡದ ಕಂಪನಿಗಳು- ಲಭ್ಯವಾಗದ ‘ಬಿಟಿಸಿ ಲಾ‌ಗ್’

₹ 2,956 ಕೋಟಿ ಮೌಲ್ಯದ ಬಿಟ್‌ ಕಾಯಿನ್ ಅಕ್ರಮ: ಒಬ್ಬರನ್ನೂ ಬಂಧಿಸದ ಎಸ್‌ಐಟಿ

ಸಂತೋಷ ಜಿಗಳಿಕೊಪ್ಪ
Published 15 ಏಪ್ರಿಲ್ 2024, 0:40 IST
Last Updated 15 ಏಪ್ರಿಲ್ 2024, 0:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಹೆಚ್ಚು ಸದ್ದು ಮಾಡಿದ್ದ ಬಿಟ್ ಕಾಯಿನ್ (ಬಿಟಿಸಿ) ಅಕ್ರಮ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ 10 ತಿಂಗಳಾಗಿದ್ದು, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ದೋಚಿದ್ದವರು ಯಾರು ? ಎಂಬುದರ ಬಗ್ಗೆ ನಿಖರ ಮಾಹಿತಿ ಇದುವರೆಗೂ ಪತ್ತೆಯಾಗಿಲ್ಲ. ಬಿಟ್ ಕಾಯಿನ್ ವಹಿವಾಟಿನ ವಿವರ ಕೋರಿ ಹಲವು ಕಂಪನಿಗಳಿಗೆ ಪತ್ರ ಬರೆದರೂ ಮಾಹಿತಿ ಸಿಗದಿದ್ದರಿಂದ ಎಸ್‌ಐಟಿ ತನಿಖೆಗೆ ಹಿನ್ನೆಡೆ ಉಂಟಾಗಿದೆ.

ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ್ದ ಬಿಟ್‌ ಕಾಯಿನ್‌ ಅಕ್ರಮ ಪ್ರಕರಣದಲ್ಲಿ ಕೆಲ ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿರುವ ಆರೋಪ ವ್ಯಕ್ತವಾಗಿತ್ತು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯಿಂದ ಹಲವರು ಬಿಟ್ ಕಾಯಿನ್ ದೋಚಿರುವ ಬಗ್ಗೆ ಚರ್ಚೆಯಾಗಿತ್ತು. ಇದೇ ಕಾರಣಕ್ಕೆ ಪ್ರಕರಣದ ತನಿಖೆಗಾಗಿ ಕಾಂಗ್ರೆದ್ ಸರ್ಕಾರ, 2023ರ ಜುಲೈ 3ರಂದು ಎಸ್‌ಐಟಿ ರಚಿಸಿದೆ.

ಶ್ರೀಕಿ ಹಾಗೂ ಇತರರ ವಿರುದ್ಧ ಕೆಂಪೇಗೌಡ ನಗರ, ಕಾಟನ್‌ಪೇಟೆ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳ ತನಿಖೆ ನಡೆಸಿದ್ದ ಇನ್‌ಸ್ಪೆಕ್ಟರ್‌ಗಳಾದ ಲಕ್ಷ್ಮಿಕಾಂತಯ್ಯ, ಚಂದ್ರಾಧರ್, ಶ್ರೀಧರ್ ಕೆ. ಪೂಜಾರ್ ಹಾಗೂ ಸಹಾಯ ಮಾಡಿದ್ದ ಇನ್‌ಸ್ಪೆಕ್ಟರ್ ಡಿ.ಎಂ. ಪ್ರಶಾಂತ್‌ ಬಾಬು, ಸೈಬರ್ ತಜ್ಞ ಕೆ.ಎಸ್. ಸಂತೋಷ್‌ಕುಮಾರ್ ವಿರುದ್ಧವೂ ಸಾಕ್ಷ್ಯ ನಾಶ ಆರೋಪದಡಿ ಸಿಐಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಶಾಂತ್ ಬಾಬು ಹಾಗೂ ಸಂತೋಷ್‌ಕುಮಾರ್‌ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ADVERTISEMENT

ಒಬ್ಬರನ್ನೂ ಬಂಧಿಸದ ಎಸ್‌ಐಟಿ: ‘ಬಿಟ್ ಕಾಯಿನ್ ಅಕ್ರಮ ಪ್ರಕರಣದಲ್ಲಿ ಎಸ್‌ಐಟಿ ಇದುವರೆಗೂ ಯಾರೊಬ್ಬರನ್ನೂ ಬಂಧಿಸಿಲ್ಲ. ಅಪರಾಧಿಕ ಸಂಚು ಹಾಗೂ ಸಾಕ್ಷ್ಯ ನಾಶ ಆರೋಪದಡಿ ಪ್ರಶಾಂತ್‌ ಬಾಬು ಹಾಗೂ ಸಂತೋಷ್‌ಕುಮಾರ್‌ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಶ್ರೀಧರ್ ಪೂಜಾರ ಹಾಗೂ ಇತರರ ಬಂಧನಕ್ಕೂ ಕ್ರಮ ಕೈಗೊಂಡಿದ್ದಾರೆ. ಬಿಟ್ ಕಾಯಿನ್ ಅಕ್ರಮ ಪ್ರಕರಣದಲ್ಲಿ ವಿಚಾರಣೆ ಮಾತ್ರ ಎಸ್‌ಐಟಿ ಮಾಡುತ್ತಿದೆ’ ಎಂದು ಪೊಲೀಸ್ ಇಲಾಖೆಯ ಮೂಲಗಳು ಹೇಳಿವೆ.

‘ಶ್ರೀಕಿ ವಿರುದ್ಧದ ಪ್ರಕರಣಗಳ ತನಿಖೆಯಲ್ಲಾದ ಲೋಪ ಹಾಗೂ ಇತರೆ ಆರೋಪಗಳು ತನಿಖಾಧಿಕಾರಿಗಳ ಮೇಲಿವೆ. ಹೀಗಾಗಿ, ಸಿಐಡಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ಎಸ್‌ಐಟಿಗೆ ಸದ್ಯಕ್ಕೆ ಹಸ್ತಾಂತರಿಸಿಲ್ಲ. ಮುಂದಿನ ದಿನಗಳಲ್ಲಿ ಹಸ್ತಾಂತರ ಆಗಬಹುದು’ ಎಂದು ತಿಳಿಸಿವೆ.

5,000ಕ್ಕೂ ಹೆಚ್ಚು ಬಿಟಿಸಿ ವರ್ಗಾವಣೆ: ‘ಶ್ರೀಕಿ ಕಡೆಯಿಂದ ಬೇರೆ ಬೇರೆ ಖಾತೆಗಳಿಗೆ 5,000ಕ್ಕೂ ಹೆಚ್ಚು ಬಿಟ್ ಕಾಯಿನ್‌ಗಳು (ಸದ್ಯದ ಮಾರುಕಟ್ಟೆ ಮೌಲ್ಯ ₹ 2,956 ಕೋಟಿ) ವರ್ಗಾವಣೆ ಆಗಿರುವ ಬಗ್ಗೆ ಮಾಹಿತಿ ಇದೆ. ಆದರೆ, ಪುರಾವೆ ಇಲ್ಲ’ ಎಂದು ಮೂಲಗಳು ಹೇಳಿವೆ.

‘ಬಿಟ್ ಕಾಯಿನ್ ಏನು ? ವರ್ಗಾವಣೆ ಹೇಗೆ ? ಎಂಬುದನ್ನು ತಿಳಿಯಲು ಎರಡು ತಿಂಗಳು ಬೇಕಾಯಿತು. ನಂತರ, ಪ್ರಮುಖ ಆರೋಪಿ ಶ್ರೀಕಿ ಹಾಗೂ ಪೊಲೀಸ್ ಅಧಿಕಾರಿಗಳನ್ನು ವಿಚಾರಣೆ ನಡೆಸಲಾಯಿತು. ಇವರ ಹೇಳಿಕೆ ಪರಿಶೀಲಿಸಿದಾಗ, ₹ 5,000ಕ್ಕೂ ಹೆಚ್ಚು ಬಿಟ್‌ ಕಾಯಿನ್ ಅಕ್ರಮ ನಡೆದಿರುವುದು ಗೊತ್ತಾಗಿದೆ. ಜೊತೆಗೆ, ತನಿಖೆ ಮುಂದುವರಿದಂತೆ ಬಿಟ್‌ ಕಾಯಿನ್ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.

ಲಾಗ್ ವಿವರ ನೀಡದ ಕಂಪನಿಗಳು: ‘ಬಿಟ್ ಕಾಯಿನ್ ವಿನಿಮಯ ನಡೆಸುವ ಅಂತರರಾಷ್ಟ್ರೀಯ ಕಂಪನಿಗಳ ಆನ್‌ಲೈನ್ ವೇದಿಕೆಗಳ ಮೂಲಕ ಬಿಟ್‌ ಕಾಯಿನ್ ವ್ಯವಹಾರ ನಡೆದಿದೆ. ಶ್ರೀಕಿ ಹಾಗೂ ಇತರರು, ಆನ್‌ಲೈನ್ ವೇದಿಕೆ ಮೂಲಕ ವ್ಯವಹಾರ ನಡೆಸಿದ್ದಾರೆ. ಈ ವ್ಯವಹಾರದ ‘ಲಾಗ್ (ಆನ್‌ಲೈನ್ ವೇದಿಕೆಯಲ್ಲಿ ನಡೆಸಿದ್ದ ಎಲ್ಲ ವ್ಯವಹಾರಗಳ ದತ್ತಾಂಶ)’ ಮಾಹಿತಿ ನೀಡುವಂತೆ ಕೋರಿ ಅಂತರರಾಷ್ಟ್ರೀಯ ಮಟ್ಟದ 25ಕ್ಕೂ ಹೆಚ್ಚು ಕಂಪನಿಗಳಿಗೆ ಕೇಂದ್ರದ ತನಿಖಾ ಸಂಸ್ಥೆಗಳ ಮಧ್ಯಸ್ಥಿಕೆಯಲ್ಲಿ ಪತ್ರ ಬರೆಯಲಾಗಿದೆ’ ಎಂದು ಮೂಲಗಳು ಹೇಳಿವೆ.

‘ಅಮೆಜಾನ್, ಬಿಟ್ ಫಿನೆಕ್ಸ್, ಬಿಟ್‌ಕ್ಲಬ್ ನೆಟ್‌ವರ್ಕ್‌, ಬಿಟ್‌ ಫ್ಲೇಯರ್, ಬಿಟ್‌ ಕಾಯಿನ್ ಟಾಲ್ಕ್ ಡಾಟ್ ಒಆರ್‌ಜಿ, ಬಿಟ್‌ ಸೆಂಟ್ರಲ್, ಸ್ಲಸ್ ‍ಪೂಲ್ ಸೇರಿದಂತೆ 25 ಕಂಪನಿಗಳಿಂದ ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ, ಆರೋಪಿ ಯಾರು ಎಂಬುದನ್ನು ನಿಖರವಾಗಿ ಹೇಳುವ ಪುರಾವೆ ಎಸ್‌ಐಟಿ ಬಳಿ ಇಲ್ಲ. ಕಂಪನಿಗಳಿಂದ ಉತ್ತರ ಬಂದ ಬಳಿಕವೇ ಪುರಾವೆ ಆಧರಿಸಿ ತನಿಖೆ ಮುಂದುವರಿಯಲಿದೆ’ ಎಂದು ತಿಳಿಸಿವೆ.

‘ಅಳಿಸಿರುವ ತಾಂತ್ರಿಕ ಸಾಕ್ಷ್ಯ’

‘ಬಿಟ್ ಕಾಯಿನ್ ಅಕ್ರಮ ಹಲವು ವರ್ಷಗಳ ಹಳೆಯದ್ದು. ಬಹುತೇಕ ಕಂಪನಿಗಳು ವ್ಯವಹಾರಗಳ ತಾಂತ್ರಿಕ ಸಾಕ್ಷ್ಯಗಳನ್ನು ಬಹಳ ವರ್ಷ ನಿರ್ವಹಣೆ ಮಾಡುವುದಿಲ್ಲ. ಪ್ರತಿ ವರ್ಷವೂ ದತ್ತಾಂಶಗಳನ್ನು ಅಳಿಸಿ ಹಾಕಿರುವ ಸಾಧ್ಯತೆಯಿದೆ. ಹೀಗಾಗಿ ಕಂಪನಿಗಳು ಉತ್ತರ ನೀಡುತ್ತಿಲ್ಲ. ತಾಂತ್ರಿಕ ಸಾಕ್ಷ್ಯಗಳು ಇದ್ದರೆ ಮಾತ್ರ ತನಿಖೆ ಸಮರ್ಪಕವಾಗಿ ಮುಂದುವರಿಯಲಿದೆ. ಇಲ್ಲದಿದ್ದರೆ ತನಿಖೆ ನಡೆಸುವುದು ದೊಡ್ಡ ಸವಾಲು’ ಎಂದು ಮೂಲಗಳು ಹೇಳಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.