ADVERTISEMENT

ಬಿಟ್‌ ಕಾಯಿನ್‌: ಸಂದೀಪ್‌ ಪಾಟೀಲ ವಿಚಾರಣೆ

ಎರಡನೇ ಬಾರಿಗೆ ವಿಚಾರಣೆಗೆ ಹಾಜರಾದ ಐಪಿಎಸ್ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 14 ಮೇ 2024, 23:30 IST
Last Updated 14 ಮೇ 2024, 23:30 IST
ಸಂದೀಪ್‌ ಪಾಟೀಲ
ಸಂದೀಪ್‌ ಪಾಟೀಲ   

ಬೆಂಗಳೂರು: ಬಿಟ್‌ ಕಾಯಿನ್‌ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಯ ವಿಶೇಷ ತನಿಖಾದಳದ (ಎಸ್‌ಐಟಿ) ಅಧಿಕಾರಿಗಳು, ಐಪಿಎಸ್‌ ಅಧಿಕಾರಿ ಸಂದೀಪ್‌ ಪಾಟೀಲ ಅವರನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಿದರು.

ಹಿಂದೆಯೂ ಸಂದೀಪ್‌ ಪಾಟೀಲ ಅವರನ್ನು ವಿಚಾರಣೆ ನಡೆಸಿದ್ದ ಎಸ್‌ಐಟಿ, ಮತ್ತೆ ವಿಚಾರಣೆ ಹಾಜರಾಗುವಂತೆ ನೋಟಿಸ್‌ ಜಾರಿಗೊಳಿಸಿತ್ತು. ಸಂದೀಪ್‌ ಪಾಟೀಲ ಅವರನ್ನು ಮಂಗಳವಾರ, ಎಸ್‌ಐಟಿ ಮುಖ್ಯಸ್ಥ ಮನೀಶ್ ಕರ್ಬೀಕರ್‌ ಅವರು ಒಂದು ತಾಸು ವಿಚಾರಣೆ ನಡೆಸಿದರು.

ಕೆ.ಜಿ.ನಗರ, ಅಶೋಕನಗರ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ನಾಲ್ಕು ಪ್ರಕರಣಗಳ ಪೈಕಿ ಎರಡು ಪ್ರಕರಣಗಳಲ್ಲಿ ಹಿಂದೆ ಸಂದೀಪ್ ಪಾಟೀಲ ಹೇಳಿಕೆ ದಾಖಲಿಸಲಾಗಿತ್ತು. ಈಗ ಉಳಿದ ಪ್ರಕರಣಗಳಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಪ್ರಮುಖ ಆರೋಪಿ ಕೃಷ್ಣ ಅಲಿಯಾಸ್ ಶ್ರೀಕಿ, ಮೂವರು ಇನ್‌ಸ್ಪೆಕ್ಟರ್‌ಗಳು, ಖಾಸಗಿ ಸೈಬರ್ ಲ್ಯಾಬ್ ಮಾಲೀಕ ಸೇರಿ ಐವರನ್ನು ಬಂಧಿಸಲಾಗಿದೆ. ಡಿವೈಎಸ್ಪಿ ಶ್ರೀಧರ್ ಪೂಜಾರ್‌ ತಲೆಮರೆಸಿಕೊಂಡಿದ್ದು ಶೋಧ ಮುಂದುವರಿದಿದೆ’ ಎಂದು ಮೂಲಗಳು ಹೇಳಿವೆ.

ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಪುತ್ರನನ್ನು ಅಧಿಕಾರಿಗಳು ಸೋಮವಾರ ವಿಚಾರಣೆ ನಡೆಸಿದ್ದರು. ಶ್ರೀಕಿಯ ಸ್ನೇಹಿತನೂ ಆಗಿರುವ ಅಧಿಕಾರಿಯ ಪುತ್ರ ಇತ್ತೀಚೆಗೆ ₹ 47 ಲಕ್ಷ ಬೆಲೆ ಬಾಳುವ ಐಷಾರಾಮಿ ಕಾರು ಖರೀದಿಸಿದ್ದ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.