ADVERTISEMENT

ಬೆಂಗಳೂರು | ಅತಿ ದಟ್ಟಣೆ ಕಾರಿಡಾರ್‌ ಹೆಸರಿನಲ್ಲಿ ಲೂಟಿಗೆ ಯತ್ನ: ಕಾಂಗ್ರೆಸ್ ಆರೋಪ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 16:42 IST
Last Updated 3 ಡಿಸೆಂಬರ್ 2021, 16:42 IST
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 12 ಅತಿ ದಟ್ಟಣೆಯ ಕಾರಿಡಾರ್‌ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಹೆಸರಿನಲ್ಲಿ ಬಿಜೆಪಿ ಸರ್ಕಾರ ನೂರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಮಾಜಿ ಮೇಯರ್‌ಗಳೊಂದಿಗೆ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ‘191 ಕಿ.ಮೀ. ಉದ್ದ ರಸ್ತೆಗಳನ್ನು ₹1,120 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಮತ್ತು ಐದು ವರ್ಷಗಳ ನಿರ್ವಹಣೆಗೆ ಹೆಚ್ಚುವರಿಯಾಗಿ ₹787 ಕೋಟಿ ನಿಗದಿಪಡಿಸುವ ಪ್ರಸ್ತಾವವನ್ನು ಹಿಂದೆ ತಡೆ ಹಿಡಿಯಲಾಗಿತ್ತು. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಢೀರನೆ ಕಡತಗಳನ್ನು ತರಿಸಿಕೊಂಡಿದ್ದು, ಅನುಮೋದನೆ ನೀಡಲು ಹೊರಟಿದ್ದಾರೆ’ ಎಂದರು.

ರಸ್ತೆ ನಿರ್ಮಿಸಿದ ಗುತ್ತಿಗೆದಾರರೇ ಕನಿಷ್ಠ ಎರಡು ವರ್ಷಗಳವರೆಗೆ ನಿರ್ವಹಣೆಯನ್ನೂ ಮಾಡಬೇಕೆನ್ನುವ ನೀತಿ ದೇಶದಲ್ಲಿ ಜಾರಿಯಲ್ಲಿದೆ. ಆದರೆ, ಬಿಬಿಎಂಪಿಯ 12 ಅತಿ ದಟ್ಟಣೆ ಕಾರಿಡಾರ್‌ಗಳ ವಿಚಾರದಲ್ಲಿ ಈ ನಿಯಮ ಅನ್ವಯವಾಗುತ್ತಿಲ್ಲ. ರಸ್ತೆ ನಿರ್ಮಾಣಕ್ಕೆ ಅನುದಾನ ನೀಡುವುದರ ಜತೆಗೆ ನಿರ್ವಹಣೆಗೂ ಪ್ರತ್ಯೇಕ ಹಣ ಒದಗಿಸಲಾಗುತ್ತಿದೆ. ಇದರ ಹಿಂದೆ ದೊಡ್ಡ ಅವ್ಯವಹಾರ ಇದೆ ಎಂದು ದೂರಿದರು.

ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ ಕಾಮಗಾರಿಯನ್ನು ಪಾಲಿಕೆಯ ಬದಲಿಗೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಡಿಸಿಎಲ್‌) ನೀಡಲಾಗಿದೆ. ಕಳಪೆ ಕಾಮಗಾರಿಯ ಕಾರಣಕ್ಕಾಗಿ ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿರುವ ಗುತ್ತಿಗೆದಾರರಿಗೆ ಈ ಕಾಮಗಾರಿಗಳ ಗುತ್ತಿಗೆ ನೀಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಕೆಆರ್‌ಡಿಸಿಎಲ್‌ಗೆ ಪ್ರತಿ ವರ್ಷ ₹ 150 ಕೋಟಿ ನಿಡುವುದು ಸರಿಯಲ್ಲ. ಈ ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ ಪೋಲು ಅನುದಾನವನ್ನು ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚಲು ಬಳಸಬೇಕು ಎಂದು ಆಗ್ರಹಿಸಿದರು.

ಅವೈಜ್ಞಾನಿಕವಾಗಿ ವಾರ್ಡ್‌ ವಿಂಗಡಣೆ: ಬಿಬಿಎಂಪಿ ಆಡಳಿತ ನಿರ್ವಹಣೆಗಾಗಿ ರೂಪಿಸಿರುವ ಪ್ರತ್ಯೇಕ ಕಾಯ್ದೆಯ ಪ್ರಕಾರ, ಪಾಲಿಕೆಯ ವಾರ್ಡ್‌ಗಳ ಗರಿಷ್ಠ ಮಿತಿಯನ್ನು 243ಕ್ಕೆ ಏರಿಕೆ ಮಾಡಲು ಸರ್ಕಾರ ಈಗ ಮುಂದಾಗಿದೆ. ವಾರ್ಡ್‌ಗಳ ಪುನರ್ ವಿಂಗಡಣೆ ಆಯೋಗ ರಚಿಸಲಾಗಿದೆ.‌ ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ವಾರ್ಡ್‌ಗಳ ಪುನರ್‌ ವಿಂಗಡಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ದೂರಿದರು.

ಬೆಂಗಳೂರು ನಗರದ ಉಸ್ತುವಾರಿ ಮುಖ್ಯಮಂತ್ರಿ ಬಳಿಯಲ್ಲೇ ಇದೆ. ನಗರದ ಅಭಿವೃದ್ಧಿ ಕುರಿತು ಚರ್ಚಿಸಲು ಮುಖ್ಯಮಂತ್ರಿಯವರು ಈವರೆಗೂ ಸಮಯ ಮೀಸಲಿಟ್ಟಿಲ್ಲ. ಎರಡು ಬಾರಿ ನಗರ ಪ್ರದಕ್ಷಿಣೆ ನಡೆಸಿರುವುದರ ಹೊರತಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಅವರಿಗೆ ಸಾಧ್ಯವಾಗದೇ ಇದ್ದರೆ ಬೆಂಗಳೂರು ನಗರದ ಉಸ್ತುವಾರಿಗೆ ಬೇರೊಬ್ಬ ಸಚಿವರನ್ನು ನಿಯೋಜಿಸಲಿ ಎಂದು ಆಗ್ರಹಿಸಿದರು.

ವಿಧಾನ ಪರಿಷತ್‌ ಸದಸ್ಯ ಪಿ.ಆರ್‌. ರಮೇಶ್, ಮಾಜಿ ಮೇಯರ್‌ಗಳಾದ ಎಂ.ರಾಮಚಂದ್ರಪ್ಪ, ಜಿ. ಪದ್ಮಾವತಿ, ಬಿ.ಎನ್‌.ಮಂಜುನಾಥ್‌ ರೆಡ್ಡಿ, ಆರ್.ಸಂಪತ್‌ ರಾಜ್‌, ಕೆ.ಚಂದ್ರಶೇಖರ್‌, ಗಂಗಾಂಬಿಕಾ ಮಲ್ಲಿಕಾರ್ಜುನ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.