ADVERTISEMENT

ದಶಕದ ಹಾದಿ ಕ್ರಮಿಸಿದ ‘ನಮ್ಮ ಮೆಟ್ರೊ’: 10 ವರ್ಷಗಳ ಪಯಣ ಏನು ಹೇಳುತ್ತದೆ?

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 3:03 IST
Last Updated 21 ಅಕ್ಟೋಬರ್ 2021, 3:03 IST
   

ಬೆಂಗಳೂರು: ನಗರದ ಸಂಚಾರ ಸೌಕರ್ಯಕ್ಕೆ ಹೊಸ ದಿಸೆ ತೋರಿದ ‘ನಮ್ಮ ಮೆಟ್ರೊ’ ವಾಣಿಜ್ಯ ಕಾರ್ಯಾಚರಣೆಯು ಬುಧವಾರಕ್ಕೆ ಹತ್ತು ವರ್ಷ ಪೂರ್ಣಗೊಳಿಸಿತು. ಈ 10 ವರ್ಷಗಳ ಪಯಣದಲ್ಲಿ 60.5 ಕೋಟಿ ಪ್ರಯಾಣಿಕರು ಮೆಟ್ರೊ ಬಳಸಿದ್ದಾರೆ.

ಮಹಾತ್ಮ ಗಾಂಧಿ ರಸ್ತೆ– ಬೈಯಪ್ಪನಹಳ್ಳಿವರೆಗಿನ 6.7 ಕಿ.ಮೀ ಉದ್ದದ ಎತ್ತರಿಸಿದ ಮಾರ್ಗದಲ್ಲಿ2011 ಅ.20ರಂದು ‘ನಮ್ಮ ಮೆಟ್ರೊ’ ವಾಣಿಜ್ಯ ಸಂಚಾರ ಆರಂಭವಾಗಿತ್ತು. ಆರು ನಿಲ್ದಾಣಗಳನ್ನು ಈ ಮಾರ್ಗವು ಹೊಂದಿತ್ತು. ಅದಾದ ಬಳಿಕ ಒಟ್ಟು ಆರು ವಿಸ್ತರಿತ ಮಾರ್ಗಗಳು ಲೋಕಾರ್ಪಣೆಗೊಂಡಿವೆ. ಈಗ ಮೆಟ್ರೊ ಜಾಲದ ವಾಣಿಜ್ಯ ಕಾರ್ಯಾಚರಣೆ ಈವರೆಗೆ 56 ಕಿ.ಮೀವರೆಗೆ ವಿಸ್ತರಣೆಗೊಂಡಿದೆ. ಮೆಜೆಸ್ಟಿಕ್‌ನ ಇಂಟರ್‌ ಚೇಂಜ್‌ ನಿಲ್ದಾಣವೂ ಸೇರಿ ಒಟ್ಟು 74 ನಿಲ್ದಾಣಗಳು ಕಾರ್ಯಾಚರಿಸುತ್ತಿವೆ.

ಹತ್ತು ವರ್ಷಗಳ ವಾಣಿಜ್ಯ ಕಾರ್ಯಾಚರಣೆ ಪೂರ್ಣಗೊಳಿಸಿದ ಸಂಭ್ರಮವನ್ನು ಹಂಚಿಕೊಂಡ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌, ‘ನಾವು ನಗರದ ಸಾರಿಗೆ ವ್ಯವಸ್ಥೆ ಸುಧಾರಣೆಗಾಗಿ ಇನ್ನೂ ಸಾಕಷ್ಟು ಕೆಲಸ ಮಾಡಬೇಕಾಗಿದೆ. ಸದ್ಯ 56 ಕಿ.ಮೀ ಮಾರ್ಗದಲ್ಲಿ ಮಾತ್ರ ಮೆಟ್ರೊ ಸಂಚಾರ ಸಾಧ್ಯವಾಗಿದೆ. ‘ನಮ್ಮ ಮೆಟ್ರೊ’ ಯೋಜನೆಯ 2, 2ಎ, 2ಬಿ ಹಂತಗಳಲ್ಲಿ ಮೆಟ್ರೊ ಜಾಲವನ್ನು 175 ಕಿ.ಮೀ.ವರೆಗೆ ವಿಸ್ತರಣೆಗೊಳ್ಳಲಿದೆ. ಇವುಗಳ ಕಾಮಗಾರಿಗಳನ್ನು 2024ರ ಗಡುವಿನ ಒಳಗೆ ಪೂರ್ಣಗೊಳಿಸಲು ನಗರದ ಜನರ ಹಾಗೂ ಉದ್ಯೋಗಿಗಳ ಸಹಕಾರವೂ ಅಗತ್ಯ’ ಎಂದರು.

ADVERTISEMENT

‘ನುರಿತ ಸಿಬ್ಬಂದಿ ಪಡೆಯೇ ಸಂಸ್ಥೆಯ ಯಶಸ್ಸು’

‘ಪ್ರಯಾಣಿಕರ ನಿರೀಕ್ಷೆಗಳಿಗೆ ತಕ್ಕಂತೆ ಸೇವೆ ಒದಗಿಸುವ ನುರಿತ ಸಿಬ್ಬಂದಿ ವರ್ಗವನ್ನು ಸಜ್ಜುಗೊಳಿಸುವುದು ದೊಡ್ಡ ಸವಾಲಾಗಿತ್ತು. ಇಂದು ನಮ್ಮ ಮೆಟ್ರೊ ಸಮಯ ಪರಿಪಾಲನೆಯಲ್ಲಿ ಶೇ 99.5ರಷ್ಟು ಸಾಧನೆ ಮಾಡಿದೆ. ಯಾವುದೇ ಅವಘಡಗಳಿಗೆ ಅವಕಾಶ ನೀಡದಂತೆ ಸೇವೆ ಮುಂದುವರಿಸುವ ಮೂಲಕ ಈ ಸವಾಲನ್ನು ಮೆಟ್ಟಿನಿಂತಿದೆ’ ಎಂದು ನಿಗಮದ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಕಾರ್ಯಕಾರಿ ನಿರ್ದೇಶಕ ಎ.ಎಸ್‌.ಶಂಕರ್‌ ತಿಳಿಸಿದರು.

‘ಮೆಟ್ರೊ ರೈಲಿನ ಮೂರು ಬೋಗಿಗಳ ಸಂಖ್ಯೆ ಮೂರಕ್ಕೆ ಸೀಮಿತವಾಗಿದ್ದಾಗ ದಟ್ಟಣೆ ಅವಧಿಯಲ್ಲಿ ಪ್ರತಿ ಒಂದೂವರೆ ನಿಮಿಷಕ್ಕೊಂದು ರೈಲು ಓಡಿಸಿದ್ದೇವೆ. ಆಗ ಪ್ರಯಾಣಿಕರ ದಟ್ಟಣೆಯ ಒತ್ತಡವನ್ನು ನಿರ್ವಹಿಸುವಾಗ ಅತ್ಯಂತ ಕ್ಲಿಷ್ಟಕರ ದಿನಗಳನ್ನು ಎದುರಿಸಿದ್ದೇವೆ. ನಿಲ್ದಾಣಗಳನ್ನು ದೇಶ ಬೇರೆ ಯಾವುದೇ ಮೆಟ್ರೊ ಸಂಸ್ಥೆಗಳಿಗಿಂತಲೂ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ ತೃಪ್ತಿ ನಮಗಿದೆ’ ಎಂದರು.

‘ಬಿಐಇಸಿ, ವೈಟ್‌ಫೀಲ್ಡ್‌ಗೆ ಮುಂದಿನ ವರ್ಷ ಮೆಟ್ರೊ’

ನಾಗಸಂದ್ರದಿಂದ ಬೆಂಗಳೂರು ಅಂತರರಾಷ್ಟ್ರಿಯ ವಸ್ತು ಪ್ರದರ್ಶನ ಕೇಂದ್ರದ (ಬಿಐಇಸಿ) ವರೆಗಿನ 3.77 ಕಿ.ಮೀ ಉದ್ದದ ರೀಚ್‌ 3 ಸಿ ಮಾರ್ಗ ಮತ್ತು ಬೈಯಪ್ಪನಹಳ್ಳಿ– ವೈಟ್‌ಫೀಲ್ಡ್‌ವರೆಗಿನ 15.20 ಕಿ.ಮೀ ಉದ್ದದ ಮಾರ್ಗದ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ.

‘ಬಿಐಇಸಿವರೆಗಿನ ರೀಚ್‌– 3ಸಿ ವಿಸ್ತರಿತ ಮಾರ್ಗವು 2022ರ ಸೆಪ್ಟೆಂಬರ್‌ನಲ್ಲಿ ಹಾಗೂ ವೈಟ್‌ಫೀಲ್ದ್‌ವರೆಗಿನ ವಿಸ್ತರಿತ ಮಾರ್ಗವನ್ನು 2022ರ ಡಿಸೆಂಬರ್‌ ಒಳಗೆ ಲೋಕಾರ್ಪಣೆಗೊಳಿಸುವ ಉದ್ದೇಶ ಹೊಂದಿದ್ದೇವೆ. ಎರಡನೇ ಹಂತದ ವಿಸ್ತರಣೆಯ ಎಲ್ಲ ಕಾಮಗಾರಿಗಳನ್ನು 2024ರ ಒಳಗೆ ಪೂರ್ಣಗೊಳಿಸುವ ಗುರಿ ನಿಗದಿಪಡಿಸಿದ್ದೇವೆ’ ಎಂದು ಅಂಜುಮ್‌ ಪರ್ವೇಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಮೆಟ್ರೊಮೂರನೇ ಹಂತದಲ್ಲಿ ಹೊರವರ್ತುಲ ರಸ್ತೆಯಲ್ಲಿ ಮೆಟ್ರೊ ಮಾರ್ಗ ನಿರ್ಮಿಸುವ ಉದ್ದೇಶವಿದೆ. ಇದರ ಸಮಗ್ರ ಯೋಜನಾ ವರದಿ ತಯಾರಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಕುರಿತ ಸರ್ವೆ ಕಾರ್ಯಗಳು ನಡೆಯುತ್ತಿವೆ’ ಎಂದು ಮಾಹಿತಿ ನೀಡಿದರು.

ಸದ್ಯ ಹೊರವರ್ತುಲ ರಸ್ತೆಯಲ್ಲಿ ಸದ್ಯ ಸಿಲ್ಕ್‌ಬೋರ್ಡ್‌– ಕೆ.ಆರ್‌.ಪುರ– ಹೆಬ್ಬಾಳವರೆಗೆ ಮೆಟ್ರೊ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಹೊರ ವರ್ತುಲ ರಸ್ತೆಯ ಇನ್ನುಳಿದ ಭಾಗದ ಮೆಟ್ರೊ ಮಾರ್ಗಕ್ಕೆ ಇನ್ನಷ್ಟೇ ಮಂಜೂರಾತಿ ಸಿಗಬೇಕಿದೆ.

***

ಹತ್ತು ವರ್ಷಗಳಲ್ಲಿ ನಮ್ಮ ಮೆಟ್ರೊ ಬೆಂಗಳೂರಿನ ಹೆಮ್ಮೆಯಾಗಿ ರೂಪುಗೊಂಡಿದೆ. ಮೆಟ್ರೊ ಮಾರ್ಗಕ್ಕೆ ಜಾಗ ಬಿಟ್ಟುಕೊಟ್ಟವರಿಗೆ, ಸಹಕರಿಸಿದ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗೆ ಧನ್ಯವಾದ
–ಅಂಜುಂ ಪರ್ವೇಜ್‌, ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್‌ಸಿಎಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.