ಬೆಂಗಳೂರು: ‘ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಮುಚ್ಚಬೇಕೆಂಬ ಸಂಸದ ತೇಜಸ್ವಿ ಸೂರ್ಯ ಹಾಗೂ ಉದ್ಯಮಿ ಮೋಹನ್ ದಾಸ್ ಪೈ ಅವರ ಚಿಂತನೆ ಆಘಾತಕಾರಿಯಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಇತ್ತೀಚೆಗೆ ವಿಚಾರಸಂಕಿರಣವೊಂದರಲ್ಲಿ ತೇಜಸ್ವಿ ಸೂರ್ಯ ಮತ್ತು ಮೋಹನ್ ದಾಸ್ ಪೈ ಅವರು ‘ನೋ ಮೋರ್ ಬಿಎಂಟಿಸಿ’, ‘ನೋ ಮೋರ್ ಮೊನಾಪಲಿ’ (ಬಿಎಂಟಿಸಿ ಬೇಕಿಲ್ಲ, ಏಕಸ್ವಾಮ್ಯವೂ ಬೇಕಿಲ್ಲ) ಎಂದು ಮಾತನಾಡಿರುವುದು ಖಂಡನೀಯ’ ಎಂದರು.
‘ಕಾರ್ಖಾನೆ, ಕಂಪನಿಗಳಿಗೆ ಬಾಡಿಗೆ ಆಧಾರದಲ್ಲಿ ಕಾರು, ಶಟಲ್ ಬಸ್, ಇತರೆ ಸಾರಿಗೆ ಸಂಬಂಧಿತ ವ್ಯವಸ್ಥೆ ಕಲ್ಪಿಸುವ ‘ಮೊವೆಲ್ನ್‌ಸಿಂಕ್’ ಎಂಬ ಸಂಸ್ಥೆ ಹಮ್ಮಿಕೊಂಡಿದ್ದ ವಿಚಾರಸಂಕಿರಣದಲ್ಲಿ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನೇ ಮುಚ್ಚಿಬಿಡಬೇಕು ಎಂಬ ಅರ್ಥದಲ್ಲಿ ಅವರಿಬ್ಬರೂ ಮಾತನಾಡಿದ್ದಾರೆ’ ಎಂದರು.
‘ಬೆಂಗಳೂರಿನಲ್ಲಿ 1.44 ಕೋಟಿ ಜನಸಂಖ್ಯೆಯಿದೆ. ಈ ಪೈಕಿ, ಮೂರನೇ ಒಂದರಷ್ಟು ಅಂದರೆ, 48 ಲಕ್ಷ ಮಂದಿ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುತ್ತಾರೆ. ಕಾರ್ಮಿಕರು, ಉದ್ಯೋಗಸ್ಥರು, ಬಡವರು, ದುರ್ಬಲರು, ಮಧ್ಯಮ ವರ್ಗದವರು ಸಾರಿಗೆ ಬಸ್‌ಗಳಲ್ಲಿ ಹೆಚ್ಚು ಸಂಚರಿಸುತ್ತಾರೆ. ಸ್ಥಿತಿವಂತರ ಪೈಕಿ ಶೇ 10ರಿಂದ 20ರಷ್ಟು ಮಂದಿ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುತ್ತಾರೆ. ಶಕ್ತಿ ಯೋಜನೆಯಡಿ 570 ಕೋಟಿ ಸುತ್ತುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಸೇವೆ ಪಡೆದಿದ್ದಾರೆ. ಶಕ್ತಿ ಯೋಜನೆಯ ನಂತರ ಬೆಂಗಳೂರಿನಲ್ಲಿ ಶೇ 23, ಹುಬ್ಬಳ್ಳಿ- ಧಾರವಾಡದಲ್ಲಿ ಶೇ 21ರಷ್ಟು ಉದ್ಯೋಗಿಗಳ ಸಂಖ್ಯೆ ಹೆಚ್ಚಳವಾಗಿದೆ ಎಂಬುದಾಗಿ ಅಧ್ಯಯನ ವರದಿ ಹೇಳಿದೆ’ ಎಂದರು.
‘ಸರ್ಕಾರಿ ಸಾರಿಗೆ ವ್ಯವಸ್ಥೆಗೆ ಜನಪ್ರತಿನಿಧಿಗಳು ಬೆಂಬಲ ನೀಡಬೇಕು. ಆದರೆ, ತೇಜಸ್ವಿ ಸೂರ್ಯ ಅವರು ಖಾಸಗಿ ಕಂಪನಿಗಳ ಪರ ಮಾತನಾಡುತ್ತಿರುವುದು ಖಂಡನೀಯ. ತೇಜಸ್ವಿ ಸೂರ್ಯ, ಮೋಹನ್ ದಾಸ್ ಪೈ ಅವರು ಬಂಡವಾಳಶಾಹಿಗಳಿಗೆ ಬೆಂಬಲ ನೀಡುತ್ತಿದ್ದಾರೆ. ಇದು ಸಾರಿಗೆ ಸಂಸ್ಥೆಗಳಲ್ಲಿರುವ 1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ, ಅವರ ಕುಟುಂಬದವರನ್ನು ಬೀದಿಪಾಲು ಮಾಡುವ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ದೇಶದಲ್ಲಿ ಸರಾಸರಿ 1000 ಮಂದಿಗೆ 1.2 ಬಸ್ ವ್ಯವಸ್ಥೆ ಇದೆ. ಕರ್ನಾಟಕದಲ್ಲಿಇದು 3. 81ರಷ್ಟಿದೆ. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಒಡಿಶಾದಲ್ಲಿ ಪ್ರತಿ 1000 ಮಂದಿಗೆ ಇರುವ ಬಸ್‌ಗಳ ಸಂಖ್ಯೆ ಕಡಿಮೆ. ಹೀಗಾಗಿ, ಈ ರಾಜ್ಯಗಳಲ್ಲಿ ಸಾರಿಗೆ ವ್ಯವಸ್ಥೆ ಬಲಪಡಿಸುವ ಬಗ್ಗೆ ತೇಜಸ್ವಿ ಸೂರ್ಯ ಮತ್ತು ಮೋಹನ್ ದಾಸ್ ಪೈ ಅವರು ಪ್ರಧಾನಿಗೆ ಸಲಹೆ ನೀಡಲಿ’ ಎಂದೂ ಅವರು ಹೇಳಿದರು.
ಬಿಜೆಪಿ ತನ್ನ ಅವಧಿಯಲ್ಲಿ ಒಂದೂ ಬಸ್ ಖರೀದಿಸಿಲ್ಲ. ನಮ್ಮ ಪಕ್ಷ ಅಧಿಕಾರ ವಹಿಸಿಕೊಂಡ ಬಳಿಕ 5800 ಬಸ್‌ಗಳನ್ನು ಖರೀದಿಸಿದ್ದು 10 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆರಾಮಲಿಂಗಾ ರೆಡ್ಡಿ ಸಾರಿಗೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.