ಬೆಂಗಳೂರು: ಈಶ ಫೌಂಡೇಶನ್ ಪ್ರವಾಸಿ ಪ್ಯಾಕೇಜ್‌ಗೆ ವರ್ಷ ತುಂಬಿದ್ದು, ಬಿಎಂಟಿಸಿ ₹2.55 ಕೋಟಿ ವರಮಾನ ಗಳಿಸಿದೆ. ಇದೇ ಮಾದರಿಯಲ್ಲಿ ಬೆಂಗಳೂರು ದರ್ಶಿನಿಯನ್ನು ಬೆಳೆಸಬೇಕಿದೆ.
ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದನ್ನು ಕಂಡು ಬಿಎಂಟಿಸಿ 2024ರ ಮಾರ್ಚ್ 8ರಂದು ‘ಈಶ ಫೌಂಡೇಶನ್’ ಹೆಸರಿನಡಿ ಪ್ರವಾಸಿ ಪ್ಯಾಕೇಜ್ ಆರಂಭಿಸಿತ್ತು. ರಜಾದಿನಗಳು ಮತ್ತು ವಾರಾಂತ್ಯ ದಿನಗಳಲ್ಲಿ ಹವಾನಿಯಂತ್ರಿತ ಬಸ್‌ಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ಯೋಜನೆ ಇದಾಗಿದೆ.
ಬೆಳಿಗ್ಗೆ 11ರಿಂದ 12ರ ಒಳಗೆ ಬಸ್‌ಗಳು ಮೆಜೆಸ್ಟಿಕ್‌ನಿಂದ ಹೊರಡುತ್ತವೆ. ಭೋಗ ನಂದೀಶ್ವರ ದೇವಸ್ಥಾನ, ಕಣಿವೆ ಬಸವಣ್ಣ ದೇವಸ್ಥಾನ, ಸರ್.ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ ಮತ್ತು ಸಮಾಧಿ, ರಂಗಸ್ಥಳ ರಂಗನಾಥ ಸ್ವಾಮಿ ದೇವಸ್ಥಾನ ಮತ್ತು ಈಶ ಫೌಂಡೇಷನ್‌ಗೆ ಭೇಟಿ ನೀಡಿ ರಾತ್ರಿ 9.30ಕ್ಕೆ ಮೆಜೆಸ್ಟಿಕ್‌ಗೆ ವಾಪಸ್ ಆಗುತ್ತವೆ.
ಒಂದು ವರ್ಷದಲ್ಲಿ 1271 ಟ್ರಿಪ್‌ಗಳಾಗಿದ್ದು, 50 ಸಾವಿರಕ್ಕೂ ಅಧಿಕ ಪ್ರವಾಸಿಗರು ಈ ಪ್ಯಾಕೇಜ್‌ನಲ್ಲಿ ಓಡಾಡಿದ್ದಾರೆ. ಮಾರ್ಚ್‌ನಲ್ಲಿ 49 ಟ್ರಿಪ್‌ಗಳಾಗಿದ್ದರೆ, ಜೂನ್‌ನಲ್ಲಿ ಅತಿ ಹೆಚ್ಚು 176 ಟ್ರಿಪ್‌ಗಳಾಗಿದ್ದು, 29,515 ಜನರು ಪ್ರಯಾಣಿಸಿದ್ದರು.
‘ಈಶ ಫೌಂಡೇಶನ್ ಪ್ರವಾಸಿ ಪ್ಯಾಕೇಜ್ ಚೆನ್ನಾಗಿದೆ. ಆದರೆ, ಶಿವರಾತ್ರಿ ಅಥವಾ ಬೇರೆ ಹಬ್ಬಗಳ ಸಮಯದಲ್ಲಿ ವಿಪರೀತ ಜನಸಂದಣಿ ಇರುತ್ತದೆ. ಭಕ್ತಿಯಿಂದ ತೆರಳುವವರು ಆ ಸಮಯದಲ್ಲಿ ಹೋಗಲಿ. ಪ್ರವಾಸವನ್ನು ಆನಂದಿಸಲು ಹೋಗುವುದಿದ್ದರೆ ಹಬ್ಬದ ದಿನಗಳನ್ನು ಬಿಟ್ಟು ಬೇರೆ ದಿನಗಳಲ್ಲಿ ಹೋಗುವುದು ಉತ್ತಮ’ ಎಂದು ಪ್ರವಾಸಿಗರಾದ ಪ್ರಶಾಂತ್ ಸಲಹೆ ನೀಡಿದರು.
‘ನಾನು ಕಳೆದ ವರ್ಷ ಶಿವರಾತ್ರಿ ಸಮಯದಲ್ಲಿ ಹೋಗಿ ಸಿಕ್ಕಿ ಹಾಕಿಕೊಂಡಿದ್ದೆ. ವಾಹನಗಳೆಲ್ಲ ರಸ್ತೆಯಲ್ಲೇ ಸಿಲುಕಿಕೊಂಡು ಹೊರಬರುವುದೇ ಹರಸಾಹಸವಾಗಿತ್ತು. ರಾತ್ರಿ 9.30ಕ್ಕೆ ಮೆಜೆಸ್ಟಿಕ್‌ಗೆ ವಾಪಸ್ಸಾಗಬೇಕಿದ್ದ ಬಸ್ ಮರುದಿನ ಮುಂಜಾನೆ 5ಕ್ಕೆ ತಲುಪಿತ್ತು. ಪ್ರವಾಸದ ಖುಷಿ ಸಿಕ್ಕಿರಲಿಲ್ಲ. ಅದಕ್ಕಾಗಿ ಮತ್ತೊಂದು ಬಾರಿ ಹಬ್ಬವಲ್ಲದ ದಿನದಲ್ಲಿ ಹೋಗಿದ್ದೆ. ಅದರ ಖುಷಿಯೇ ಬೇರೆ’ ಎಂದು ಅವರು ವಿವರಿಸಿದರು.
‘ಈ ಪ್ಯಾಕೇಜ್‌ನಲ್ಲಿ ಪ್ರತಿ ತಿಂಗಳು 15 ಸಾವಿರದಿಂದ 20 ಸಾವಿರದಷ್ಟು ಜನರು ಪ್ರಯಾಣಿಸುತ್ತಿದ್ದಾರೆ. ಹಬ್ಬಗಳಿರುವ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆ ಸಹಜವಾಗಿ ಅಧಿಕವಾಗಿರುತ್ತದೆ. ವಿವರಗಳಿಗೆ ಬಿಎಂಟಿಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಪ್ರಯಾಣ ದರ ₹550 ಆಗಿದ್ದು, www.ksrtc.in ಮೂಲಕ ಟಿಕೆಟ್ ಬುಕ್ ಮಾಡಬಹುದು. ಇಲ್ಲದೇ ಇದ್ದರೆ ಕೆಂಪೇಗೌಡ ಬಸ್‌ನಿಲ್ದಾಣದಲ್ಲಿ ಟಿಕೆಟ್ ಪಡೆದು ಪ್ರಯಾಣಿಸಬಹುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
‘ದರ್ಶಿನಿ’ಗೆ ಬೇಕಿದೆ ಪ್ರಚಾರ
ನಗರದ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಬಿಎಂಟಿಸಿಯ ಯೋಜನೆ ‘ಬೆಂಗಳೂರು ದರ್ಶಿನಿ’ ಅಷ್ಟಾಗಿ ಪ್ರಚಾರಗೊಳ್ಳದೇ ಇರುವುದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆ ಇದೆ. ಯೋಜನೆಗೆ ಪ್ರಚಾರ ನೀಡಿ ಪ್ರವಾಸಿಗರನ್ನು ಸೆಳೆಯಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಂಟಿಸಿ 2015ರಲ್ಲಿ ಈ ಯೋಜನೆಯನ್ನು ಆರಂಭಿಸಿತ್ತು. ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಿಗ್ಗೆ ಹೊರಟು ಸಂಜೆ ವಾಪಸ್ ಆಗುವ ಈ ಯೋಜನೆಗೆ ಜನರಿಂದ ಉತ್ತಮ ಸ್ಪಂದನೆ ದೊರಕಿತ್ತು. ಕೋವಿಡ್ ಕಾರಣದಿಂದ ಒಂದೂವರೆ ವರ್ಷ ಬೆಂಗಳೂರು ದರ್ಶಿನಿ ಸ್ಥಗಿತವಾಗಿತ್ತು. ಆನಂತರ ಆರಂಭಗೊಂಡರೂ ಅಷ್ಟಾಗಿ ಪ್ರಚಾರವಾಗಿಲ್ಲ. ದರ್ಶಿನಿಯಲ್ಲಿ ಪ್ರಯಾಣಿಸುವವರ ಸಂಖ್ಯೆ ಸಾವಿರದ ಗಡಿಯಲ್ಲೇ ಇದೆ. ಕೆಎಸ್ಆರ್‌ಟಿಸಿ ವತಿಯಿಂದ ಮೈಸೂರಿನಲ್ಲಿ ನಡೆಯುತ್ತಿರುವ ದರ್ಶಿನಿ ಟ್ರಿಪ್‌ಗಳಿಗೆ ಉತ್ತಮ ಸ್ಪಂದನ ಇದೆ. ಮೈಸೂರು ಐತಿಹಾಸಿಕ ಜಿಲ್ಲೆ. ಬೆಂಗಳೂರು ಪಕ್ಕಾ ವ್ಯಾವಹಾರಿಕ ಕೇಂದ್ರ. ಹಾಗಾಗಿ ಮೈಸೂರಿನಲ್ಲಿ ದರ್ಶಿನಿ ಟ್ರಿಪ್‌ನಲ್ಲಿ ಪ್ರಯಾಣಿಸುವ ಪ್ರವಾಸಿಗರಷ್ಟು ಇಲ್ಲಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ ಪ್ರಚಾರದ ಮೂಲಕ ಈಗಿರುವುದಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಿಸಲು ಸಾಧ್ಯವಿದೆ’ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.