ADVERTISEMENT

ಬಿಎಂಟಿಸಿ: ದಿನಕ್ಕೆ ಕೋಟಿ ರೂ. ದಾಟಿದ ಯುಪಿಐ ಸ್ವೀಕೃತಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2025, 0:06 IST
Last Updated 3 ಏಪ್ರಿಲ್ 2025, 0:06 IST
ಬಿಎಂಟಿಸಿ ಬಸ್‌
ಬಿಎಂಟಿಸಿ ಬಸ್‌   

ಬೆಂಗಳೂರು: ಹವಾನಿಯಂತ್ರಿತ ಬಸ್‌ಗಳಿಗಷ್ಟೇ ಸೀಮಿತವಾಗಿದ್ದ ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್‌ ಪಡೆಯುವ ವ್ಯವಸ್ಥೆಯನ್ನು ಸಾಮಾನ್ಯ ಬಸ್‌ಗಳಿಗೂ ಅಳವಡಿಸಿದ ಬಳಿಕ ಯುಪಿಐಯಿಂದ ಪ್ರತಿದಿನ ಸಂಗ್ರಹವಾಗುವ ವರಮಾನ ₹1 ಕೋಟಿ ಮೀರಿದೆ.

ಕೋವಿಡ್‌ ಬಂದಾಗ ಅಂತರ ಕಾಪಾಡಿಕೊಳ್ಳಬೇಕು ಎಂಬ ಕಾರಣಕ್ಕೆ 2021ರ ಮೇ ತಿಂಗಳಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಯುಪಿಐ ಆಧಾರಿತ ಪಾವತಿ ವ್ಯವಸ್ಥೆ ಪರಿಚಯಿಸಲಾಗಿತ್ತು. ಆ ವರ್ಷ ದಿನಕ್ಕೆ ಸರಾಸರಿ ₹15 ಸಾವಿರ ಯುಪಿಐ ಮೂಲಕ ಬಿಎಂಟಿಸಿಗೆ ವರಮಾನ ಬಂದಿತ್ತು. ಆನಂತರ ಜನಸಂಚಾರ ಹೆಚ್ಚಾದ ಮೇಲೆ ಸಮಯದ ಕೊರತೆ, ನೆಟ್‌ವರ್ಕ್‌ ಸಮಸ್ಯೆ ಇನ್ನಿತರ ಕಾರಣಗಳಿಂದ ಸಾಮಾನ್ಯ ಬಸ್‌ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಯುಪಿಐ ಬಳಕೆಯಾಗಿರಲಿಲ್ಲ.

ದೇವನಹಳ್ಳಿಯಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಬನ್ನೇರುಘಟ್ಟ ಸಹಿತ ಪ್ರಮುಖ ಸ್ಥಳಗಳಿಗೆ ಸಂಚರಿಸುವ ಹವಾನಿಯಂತ್ರಿತ ಬಸ್‌ಗಳಲ್ಲಿ ಮಾತ್ರ ಯುಪಿಐ ಮೂಲಕ ಟಿಕೆಟ್‌ ದರ ಪಾವತಿಸುವ ವ್ಯವಸ್ಥೆ ಮುಂದುವರಿದಿತ್ತು.

ADVERTISEMENT

ಆಗಿನಿಂದಲೂ ಯುಪಿಐ ಮೂಲಕ ಟಿಕೆಟ್‌ ದರ ಪಾವತಿಸುವವರ ಸಂಖ್ಯೆ ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಾ ಬಂದಿತ್ತು. 2024ರ ಜನವರಿಯಲ್ಲಿ ದಿನಕ್ಕೆ ಸರಾಸರಿ ₹20.25 ಲಕ್ಷ ಯುಪಿಐ ಮೂಲಕ ಪಾವತಿಯಾಗಿದ್ದರೆ, 2024ರ ಡಿಸೆಂಬರ್‌ನಲ್ಲಿ ದಿನಕ್ಕೆ ಸರಾಸರಿ ₹33.12 ಲಕ್ಷಕ್ಕೆ ಏರಿತ್ತು. ಈ ವರ್ಷ ಜನವರಿ ಅಂತ್ಯದಲ್ಲಿ ಎಲ್ಲ ಬಸ್‌ಗಳಲ್ಲಿಯೂ ಈ ವ್ಯವಸ್ಥೆ ಆರಂಭವಾಯಿತು. ಪ್ರಸ್ತುತ, ಕ್ಯೂಆರ್‌ ಕೋಡ್‌ಗಳಿರುವ ಕರಪತ್ರವನ್ನು ಪ್ರತಿ ಬಸ್‌ನ ಒಳಗೆ ಏಳೆಂಟು ಕಡೆಗಳಲ್ಲಿ ಅಂಟಿಸಲಾಗಿದೆ.

ಈ ವರ್ಷ ಫೆಬ್ರುವರಿಯಲ್ಲಿ ದಿನಕ್ಕೆ ಸರಾಸರಿ ₹1.04 ಕೋಟಿ ವರಮಾನವು ಯುಪಿಐ ಮೂಲಕ ಸಂಗ್ರಹವಾಗಿತ್ತು. ಇದು ಟಿಕೆಟ್‌ ಮೂಲಕ ಸಂಗ್ರಹವಾಗುವ ಒಟ್ಟು ವರಮಾನದ ಶೇ 35ರಷ್ಟು ಆಗಿದೆ. ಮಾರ್ಚ್‌ನಲ್ಲಿ ದಿನಕ್ಕೆ ಸರಾಸರಿ ₹1.14 ಕೋಟಿ (ಶೇ 39.80) ಸಂಗ್ರಹವಾಗಿದೆ ಎಂದು ಬಿಎಂಟಿಸಿಯ ಸಂಚಾರ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಯುಪಿಐ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಟಿಕೆಟ್‌ ದರ ‍ಪಾವತಿಸುತ್ತಿರುವ ಬಿಎಂಟಿಸಿ ಪ್ರಯಾಣಿಕರು

ಸರಳಗೊಂಡ ವ್ಯವಸ್ಥೆ ಯುಪಿಐ ಪಾವತಿ ವಿಧಾನವನ್ನು ಅನುಸರಿಸುತ್ತಿರುವುದರಿಂದ ಟಿಕೆಟ್ ನೀಡಿ ಹಣ ಪಡೆದುಕೊಳ್ಳುವ ವ್ಯವಸ್ಥೆಯು ಸರಳಗೊಂಡಿದೆ. ವೇಗ ಪಡೆದುಕೊಂಡಿದೆ ಮತ್ತು ಪಾರದರ್ಶಕವಾಗಿದೆ. ಪ್ರಯಾಣಿಕರಿಗೆ ಸುಲಭ ಸುರಕ್ಷಿತ ಮತ್ತು ನಗದುರಹಿತ ಪಾವತಿ ಅನುಭವವನ್ನು ಬಿಎಂಟಿಸಿ ಒದಗಿಸಿದೆ. ಬಸ್‌ ನಿರ್ವಾಹಕರಿಗೂ ಚಿಲ್ಲರೆ ಸಮಸ್ಯೆಯ ಕಿರಿಕಿರಿ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಡಿಜಿಟಲ್‌ ಪಾವತಿಯನ್ನು ಇನ್ನಷ್ಟು ಪ್ರಯಾಣಿಕರು ಅಳವಡಿಸಿಕೊಳ್ಳುವ ವಿಶ್ವಾಸವಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.