ADVERTISEMENT

ಇಟಲಿ, ಜಪಾನ್‌ ಕಾನ್ಸುಲೇಟ್‌ಗೆ ಬಾಂಬ್‌ ಬೆದರಿಕೆ ಸಂದೇಶ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 21:03 IST
Last Updated 5 ಫೆಬ್ರುವರಿ 2026, 21:03 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ನಗರದಲ್ಲಿರುವ ಇಟಲಿ ಹಾಗೂ ಜಪಾನ್‌ ಕಾನ್ಸುಲೇಟ್‌ ಕಚೇರಿಗಳಿಗೆ ಇ–ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಸಂದೇಶ ಬಂದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು.

ಇ–ಮೇಲ್ ಗಮನಿಸಿದ ಇಟಲಿ ಕಾನ್ಸುಲೇಟ್‌ ಕಚೇರಿ ಸಿಬ್ಬಂದಿ, ಹಲಸೂರು ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದರು.

ADVERTISEMENT

‘ಬಾಂಬ್‌ ಪತ್ತೆ ದಳ, ಬಾಂಬ್‌ ನಿಷ್ಕ್ರಿಯ ದಳ, ಶ್ವಾನ ದಳದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ, ಪರಿಶೀಲನೆ ನಡೆಸಲಾಯಿತು. ಯಾವುದೇ ಆರ್​ಡಿಎಕ್ಸ್ ಬಾಂಬ್​ ಪತ್ತೆ ಆಗಿಲ್ಲ. ಹುಸಿ ಬಾಂಬ್​ ಬೆದರಿಕೆ ಸಂದೇಶ ಎಂಬುದು ಕಂಡುಬಂದಿದೆ’ ಎಂದು ಪೊಲೀಸರು ತಿಳಿಸಿದರು.

ಇಟಲಿ ಕಾನ್ಸುಲೇಟ್‌ನ ಅಧಿಕಾರಿ ಗಿಯಾಂಡೊಮಿನಿಕೊ ಮಿಲಾನೊ ಅವರು ಭದ್ರತಾ ಸಿಬ್ಬಂದಿ ಕೊಸಿಮೊ ಸಿಸಿರಿಯೆಲ್ಲೊ ಅವರ ಮೂಲಕ ಕಳುಹಿಸಿದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. 

ರಮೇಶ್ ಎಂಬ ಹೆಸರಿನ ವ್ಯಕ್ತಿ ಇ–ಮೇಲ್‌ ಕಳುಹಿಸಿರುವುದು ಪತ್ತೆಯಾಗಿದೆ. ಕಚೇರಿ ಆವರಣದಲ್ಲಿ ಐದು ಆರ್‌ಡಿಎಕ್ಸ್ ಬಾಂಬ್ ಇಡಲಾಗಿದೆ. ಅವುಗಳು ಮಧ್ಯಾಹ್ನದ 1ರ ಸುಮಾರಿಗೆ ಸ್ಫೋಟ ಆಗಲಿವೆ.  ಸಿಬ್ಬಂದಿ 10 ಗಂಟೆಯ ಸುಮಾರಿಗೆ ಕಚೇರಿಯಿಂದ ಹೊರಕ್ಕೆ ಬಂದು ರಕ್ಷಿಸಿಕೊಳ್ಳಬೇಕು ಎಂಬುದಾಗಿ ಇ–ಮೇಲ್‌ನಲ್ಲಿ ಬರೆಯಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರದ ಕಬ್ಬನ್‌ ರಸ್ತೆಯಲ್ಲಿರುವ ಜಪಾನ್‌ ಕಾನ್ಸುಲೇಟ್‌ ಕಚೇರಿಗೂ ಬಾಂಬ್‌ ಬೆದರಿಕೆಯ ಇ–ಮೇಲ್‌ ಸಂದೇಶ ಬಂದಿತ್ತು ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಲ್ಲಿಗೂ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದರು. ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.