
ಬೆಂಗಳೂರು: ‘ಕನ್ನಡ ಪುಸ್ತಕಗಳ ಪುಟವಾರು ದರ ಪರಿಷ್ಕರಣೆಗೆ ಸಂಬಂಧಿಸಿದ ಕಡತವನ್ನು ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಬೇಕು. ಅವರು ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗೆಗೆ ಅಪಾರ ಗೌರವ ಪ್ರೀತಿ ಹೊಂದಿರುವ ಕಾರಣ, ಆದಷ್ಟು ಬೇಗ ದರ ಪರಿಷ್ಕರಣೆಗೆ ಅನುಮೋದನೆ ಸಿಗುವ ಭರವಸೆಯಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಕನ್ನಡ ಲೇಖಕರ ಮತ್ತು ಪ್ರಕಾಶಕರ ಒಕ್ಕೂಟದ ಪ್ರತಿನಿಧಿಗಳೊಂದಿಗೆ ಬುಧವಾರ ಇಲ್ಲಿ ಸಭೆ ನಡೆಸಿದ ಅವರು, ಪುಸ್ತಕೋದ್ಯಮಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
‘2017ರಿಂದ ಪುಸ್ತಕಗಳ ಪುಟವಾರು ಬೆಲೆ ಪರಿಷ್ಕರಣೆ ನಡೆದಿಲ್ಲ. ಮುದ್ರಣ ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆ, ಸರಕು ಮತ್ತು ಸೇವಾ ತೆರಿಗೆ (ಜೆಎಸ್‌ಟಿ), ಸಾಗಾಣಿಕೆ ವೆಚ್ಚಗಳ ಹೊರೆಯಿಂದಾಗಿ ಪುಸ್ತಕಗಳ ಪುಟವಾರು ಬೆಲೆ ಪರಿಷ್ಕರಣೆ ಹಾಗೂ ಕೆಲವು ವಿಶೇಷ ಅಳತೆಯ ಪುಸ್ತಕಗಳಿಗೆ ಬೆಲೆ ನಿಗದಿ ಮಾಡಲು ಮನವಿ ಮಾಡಲಾಗಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಒಕ್ಕೂಟದ ಪ್ರತಿನಿಧಿಗಳು ಮನವಿ ಮಾಡಿದರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.
‘2022ರಿಂದ ಈವರೆಗೆ ಪ್ರಕಟವಾದ ಪುಸ್ತಕಗಳನ್ನು ಖರೀದಿಸಲು ಸಾರ್ವಜನಿಕ ಗ್ರಂಥಾಲಯ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ಪ್ರಕಾಶಕರು ಇದೇ ವೇಳೆ ಪ್ರಸ್ತಾಪಿಸಿದರು. 2022ರ ಪುಸ್ತಕಗಳ ಪಟ್ಟಿ ತಮ್ಮ ಬಳಿ ಇರುವುದಾಗಿ ತಿಳಿಸಿದ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ‘2023ರಿಂದ 2025ರವರೆಗಿನ ಪ್ರಕಟಿತ ಪುಸ್ತಕಗಳನ್ನು ಒಂದೇ ಹಂತದಲ್ಲಿ ಆಯ್ಕೆ ಮಾಡಿ, ಆರು ತಿಂಗಳ ಅವಧಿಯಲ್ಲಿ ಖರೀದಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
‘ಆಯಾ ವರ್ಷದ ಬಜೆಟ್ ಅನುಮೋದನೆಯನ್ನು ಸಾಧ್ಯವಾದಷ್ಟು ಬೇಗ ಮಾಡಿ ಕಳಿಸುವ ಜತೆಗೆ, ಸಮಯದ ಮಿತಿಯಲ್ಲಿ ಅನುಮೋದಿಸಲು ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.
‘ಈ ಭರವಸೆ ಹೊಸ ವರ್ಷಕ್ಕೆ ಸರ್ಕಾರ ನಮಗೆ ನೀಡಿದೆ ಕೊಡುಗೆ. ನಿಧಾನವಾಗಿಯಾದರೂ ಸರ್ಕಾರ ನಮ್ಮತ್ತ ನೋಡಿದ್ದಕ್ಕೆ ಇಡೀ ಕನ್ನಡ ಪುಸ್ತಕೋದ್ಯಮ ಹರ್ಷಿಸುತ್ತದೆ. ಈ ಭರವಸೆಗಳು ಸಾಕಾರವಾಗುವ ಮೂಲಕ ಪುಸ್ತಕೋದ್ಯಮ ಚೇತರಿಸಿಕೊಳ್ಳಲಿ’ ಎಂದು ಪ್ರಕಾಶಕ ಸೃಷ್ಟಿ ನಾಗೇಶ್ ಹೇಳಿದರು.
ಸಭೆಯಲ್ಲಿ ವಕೀಲ ಸಿ.ಎಸ್ .ದ್ವಾರಕಾನಾಥ್, ಕಲಾವಿದರಾದ ಎಂ.ಎಸ್. ಮೂರ್ತಿ, ಲೇಖಕಿ ಡಾ. ವಸುಂಧರಾ ಭೂಪತಿ, ಪ್ರಕಾಶಕರಾದ ಅವಿರತ ಹರೀಶ್, ಚಂದ್ರ ಕೀರ್ತಿ, ರಾಜೇಶ್ ಬಿ. ಹೊನ್ನೇನಹಳ್ಳಿ, ಧಾತ್ರಿ ಉಮೇಶ್, ಆರ್. ಪೂರ್ಣಿಮಾ, ಅಭಿನವ ರವಿಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.