ಬೆಂಗಳೂರು: ಬುಕರ್ ಪ್ರಶಸ್ತಿ ಪಡೆದಿರುವ ಬಾನು ಮುಷ್ತಾಕ್ ಅವರ ಸಿದ್ಧಾಂತ, ನಡೆಯ ಬಗ್ಗೆ ಭಿನ್ನಾಭಿಪ್ರಾಯ, ವ್ಯತ್ಯಾಸಗಳಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಬೇಕಿತ್ತು ಎಂದು ಸಾಹಿತಿ ಹಂ.ಪ. ನಾಗರಾಜಯ್ಯ ತಿಳಿಸಿದರು.
ಕನ್ನಡ ಜನಶಕ್ತಿ ಕೇಂದ್ರ ನೀಡುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು ಬುಧವಾರ ಸ್ವೀಕರಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿ ದೇಶಕ್ಕೆ ಪ್ರಧಾನಿ. ಸಾಹಿತ್ಯಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಬಂದಾಗ ಅವರು ಅಭಿನಂದಿಸಬೇಕಿತ್ತು ಎಂದು ಸಾಹಿತಿಗಳು ಬಯಸುವುದು ಸಹಜ. ಬಾಬಾಬುಡನ್‌ಗಿರಿ ಹೋರಾಟದಲ್ಲಿ ಬಾನು ಭಾಗವಹಿಸಿದ್ದು, ಅವರಿಗೆ ಇಷ್ಟವಾಗಿಲ್ಲ ಎಂದಿದ್ದರೆ ಸಿದ್ದಾಂತಕ್ಕೆ ಸಹಮತ ಇಲ್ಲ ಎಂದು ಹೇಳಿಯೇ ಸಾಹಿತ್ಯ ಸಾಧನೆಗೆ ಅಭಿನಂದಿಸಬಹುದಿತ್ತು ಎಂದರು.
ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಹಿ.ಚಿ. ಬೋರಲಿಂಗಯ್ಯ ಮಾತನಾಡಿ, ‘ಕನ್ನಡವು ತಮಿಳಿನಿಂದ ಹುಟ್ಟಿತು ಎಂದು ಕಮಲ್ ಹಾಸನ್ ಅವರು ನೀಡಿದ ಹೇಳಿಕೆಗೆ ಸಹಜವಾಗಿಯೇ ವಿರೋಧ ಬಂದಿತ್ತು. ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಗಳಾದವು. ಆದರೆ, ಕನ್ನಡವು ಸಂಸ್ಕೃತದಿಂದ ಹುಟ್ಟಿತು ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಎಸ್.ಎಲ್. ಬೈರಪ್ಪ ಹೇಳಿದಾಗ ಯಾವುದೇ ವಿರೋಧಗಳು ಬಾರದೇ ಇದ್ದಿದ್ದು ವಿಪರ್ಯಾಸ. ಕನ್ನಡವು ತಮಿಳು ಅಥವಾ ಸಂಸ್ಕೃತದಿಂದ ಹುಟ್ಟಿಲ್ಲ. ಆದಿದ್ರಾವಿಡ ಎಂಬ ಬೃಹತ್ ವೃಕ್ಷದಿಂದ ಹುಟ್ಟಿದೆ’ ಎಂದು ಹೇಳಿದರು.
ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಮಾತನಾಡಿ, ‘ಹಂಪನಾ ಅವರು ಜೈನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಜಾಗತಿಕ ವಾಣಿಯಾಗಿದ್ದಾರೆ. ವೈಯಕ್ತಿಕ ಚಾರಿತ್ರ್ಯ ಭಂಗ, ಸಿದ್ಧಾಂತದ ಹೆಸರಲ್ಲಿ ಜನರನ್ನು ಉದ್ರೇಕಿಸುವ, ಪಂಥಗಳ ಹೆಸರಲ್ಲಿ ಆರೋಪ–ಪ್ರತ್ಯಾರೋಪ ಮಾಡುವ ಈಗಿನ ಕಾಲದಲ್ಲಿ ಅವೆಲ್ಲದರಿಂದ ದೂರ ಇದ್ದು, ಆಳವಾದ ಅಧ್ಯಯನ, ಗಾಢವಾದ ಸಂಶೋಧನೆ, ಬದುಕಿನ ಬಗ್ಗೆ ಬರಹಳನ್ನು ಮಾಡಿದ ಸಾರಸ್ವತ ಲೋಕದ ಸಂಶೋಧನಾ ಯೋಗಿ ಹಂಪನಾ’ ಎಂದು ಬಣ್ಣಿಸಿದರು.
ಕನ್ನಡ ಜನಶಕ್ತಿ ಕೇಂದ್ರದ ಸಿ.ಕೆ. ರಾಮೇಗೌಡ ಮಾತನಾಡಿ, ‘ಕನ್ನಡದ ಬೆಳವಣಿಗೆಗಾಗಿ ನಾಲ್ವಡಿಯವರು ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಿದ್ದರು. ಗೊ.ರು.ಚ. ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಒಂದು ರೂಪಾಯಿ ಭತ್ಯೆಯನ್ನೂ ಪಡೆಯದೇ ಕೆಲಸ ಮಾಡಿದ್ದರು. ಈಗಿನ ಅಧ್ಯಕ್ಷರು ತಿಂಗಳಿಗೆ ₹ 1.95 ಲಕ್ಷ, ವರ್ಷಕ್ಕೆ ₹ 22.93 ಲಕ್ಷ ಭತ್ಯೆ ಪಡೆದಿರುವುದು ಪರಿಷತ್ತಿನ ಲೆಕ್ಕಪತ್ರದಲ್ಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜನಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.