ADVERTISEMENT

ಸಮಾಜದ ನೋವಿಗೆ ಪುಸ್ತಕಗಳೇ ಮದ್ದು: ಎಚ್.ಎನ್. ಆರತಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 22:10 IST
Last Updated 20 ಜನವರಿ 2026, 22:10 IST
ದೂರದರ್ಶನದ ಕಾರ್ಯಕ್ರಮ ಮುಖ್ಯಸ್ಥೆ ಎಚ್.ಎನ್. ಆರತಿ ಮಾತನಾಡಿದರು. ಕಾನೂನು ತಜ್ಞ ವೈ.ಜಿ. ಮುರಳೀಧರನ್, ನವಕರ್ನಾಟಕ ಪ್ರಕಾಶನದ ಆಡಳಿತ ನಿರ್ದೇಶಕ ಸಿದ್ದನಗೌಡ ಪಾಟೀಲ್ ಮತ್ತು ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ ಇದ್ದಾರೆ.
ದೂರದರ್ಶನದ ಕಾರ್ಯಕ್ರಮ ಮುಖ್ಯಸ್ಥೆ ಎಚ್.ಎನ್. ಆರತಿ ಮಾತನಾಡಿದರು. ಕಾನೂನು ತಜ್ಞ ವೈ.ಜಿ. ಮುರಳೀಧರನ್, ನವಕರ್ನಾಟಕ ಪ್ರಕಾಶನದ ಆಡಳಿತ ನಿರ್ದೇಶಕ ಸಿದ್ದನಗೌಡ ಪಾಟೀಲ್ ಮತ್ತು ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ ಇದ್ದಾರೆ.   

ಬೆಂಗಳೂರು: ‘ಸಮಾಜದಲ್ಲಿ ವಿಷಮತೆ ಹೆಚ್ಚುತ್ತಿದ್ದು, ಪುಸ್ತಕಗಳು ಮಾತ್ರ ಇದಕ್ಕೆ ಮದ್ದಾಗಬಲ್ಲವು’ ಎಂದು ದೂರದರ್ಶನದ ಕಾರ್ಯಕ್ರಮ ಮುಖ್ಯಸ್ಥೆ ಎಚ್.ಎನ್. ಆರತಿ ಅಭಿಪ್ರಾಯಪಟ್ಟರು.

ಕರ್ನಾಟಕ ಪ್ರಕಾಶಕರ ಸಂಘ ಹಾಗೂ ಹೊಸತು ಮಾಸಿಕ ಪತ್ರಿಕೆಯ ಸಹಯೋಗದೊಂದಿಗೆ ನವಕರ್ನಾಟಕ ಪ್ರಕಾಶನದ ಹೊಸತು ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಕಾಶಕರ ಸಂಘದ ನೂತನ ಸಾಮಾಜಿಕ ಜಾಲತಾಣಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ನಾವೆಲ್ಲ ಪುಸ್ತಕ ಓದಿ ಬೆಳೆದವರು, ಅದು ನಮ್ಮಲ್ಲಿ ಸಂಸ್ಕೃತಿ ಬಿತ್ತಿತ್ತು’ ಎಂದು ತಿಳಿಸಿದರು.

‘ಇಂದಿನ ಕೆಸರೆರಚಾಟ, ಕಿತ್ತಾಟಗಳ ಮಧ್ಯೆ ಯುವಜನರಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸುವ ಜವಾಬ್ದಾರಿ ಹಾಗೂ ಅರಿವಿನ ಜಾಗೃತಿ ಮೂಡಿಸುವಲ್ಲಿ ಪುಸ್ತಕಗಳು ಹೇಗೆ ಮುಖ್ಯ ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ’ ಎಂದರು.

ADVERTISEMENT

ಕಾನೂನು ತಜ್ಞ ವೈ.ಜಿ. ಮುರಳೀಧರನ್ ಮಾತನಾಡಿ, ‘ಕನ್ನಡದಲ್ಲಿ ಪ್ರಕಟವಾಗುವ ಪುಸ್ತಕಗಳು, ಮಾರಾಟ ಮಳಿಗೆಗಳು, ಲೇಖಕರ ಪುಸ್ತಕಗಳ ಬಗ್ಗೆ ನಿಖರವಾದ ಮಾಹಿತಿ ಲಭ್ಯವಿಲ್ಲ. ಪುಸ್ತಕ ಮಾರಾಟ ಮಾತ್ರವಲ್ಲದೆ ಪುಸ್ತಕ ಸಂಸ್ಕೃತಿಯನ್ನು ಹುಟ್ಟುಹಾಕುವ ಕೆಲಸ ಇಂದಿನ ತುರ್ತು ಅಗತ್ಯ’ ಎಂದು ನುಡಿದರು.

ನವಕರ್ನಾಟಕ ಪ್ರಕಾಶನದ ಆಡಳಿತ ನಿರ್ದೇಶಕ ಸಿದ್ದನಗೌಡ ಪಾಟೀಲ್ ಮಾತನಾಡಿ, ‘ವೈಚಾರಿಕ ಜಾಗೃತಿ ಮೂಡಿಸಿ ಜನರ ಮನೋವಿಕಾಸಕ್ಕೆ ಕಾರಣವಾಗುವ ಪುಸ್ತಕಗಳು ಮತ್ತು ಜನಪ್ರಿಯತೆ ಹೆಸರಿನಲ್ಲಿ ಹುಸಿತನ ಪ್ರಚಾರ ಮಾಡುವ ಪುಸ್ತಕಗಳು ಪ್ರಚಲಿತದಲ್ಲಿವೆ. ಜನಪ್ರೀತಿಯ ಮೂಲಕ ಸಮಸಮಾಜ ನಿರ್ಮಾಣಕ್ಕೆ ಸಮುದಾಯದ ಉನ್ನತಿಗಾಗಿ ಪೂರಕವಾದ ಪುಸ್ತಕಗಳನ್ನು ಪ್ರಕಟಿಸುವುದು ಕಷ್ಟ ಮತ್ತು ಸವಾಲಿನ ಕೆಲಸ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಪ್ರಕಾಶಕರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ ಮಾತನಾಡಿ, ‘ಕರ್ನಾಟಕ ಸರ್ಕಾರ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಸಲ್ಲಿಸಿರುವ ಪುಸ್ತಕ ನೀತಿಯನ್ನು ಜಾರಿಗೆ ತರಬೇಕು. ತಮಿಳುನಾಡಿನ ಮಾದರಿಯಲ್ಲಿ ಸರ್ಕಾರ ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ಕನ್ನಡದ ಅತ್ಯುತ್ತಮ ಪುಸ್ತಕಗಳು ಜಗತ್ತಿನ ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಳ್ಳಲು ಕಾರ್ಯಯೋಜನೆಗಳನ್ನು ರೂಪಿಸಬೇಕು’ ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಪ್ರಕಾಶಕರ ಸಂಘದ ಉಪಾಧ್ಯಕ್ಷ ಯು. ಪ್ರೇಮ್‌ಚಂದ್, ಸಾಮಾಜಿಕ ಜಾಲತಾಣ ಸಂಚಾಲಕ ರಾಜೇಂದ್ರ ಪ್ರಸಾದ್, ಅಭಿನವ ಪ್ರಕಾಶನದ ಎನ್. ರವಿಕುಮಾರ್ ಹಾಗೂ ಬಹುರೂ‍ಪಿ ಪ್ರಕಾಶನದ ಜಿ.ಎನ್. ಮೋಹನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.