ADVERTISEMENT

ತಂತ್ರಜ್ಞಾನ ಮತ್ತು ಸಾಮಾಜಿಕ ಜವಾಬ್ದಾರಿ ಕೈ ಹಿಡಿದು ಸಾಗಬೇಕು: ಡಾ. ಆರ್.ಪೂರ್ಣಿಮಾ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 10:33 IST
Last Updated 20 ಫೆಬ್ರುವರಿ 2021, 10:33 IST
   

ಬೆಂಗಳೂರು: "ಕಾಲದ ಜೊತೆ ನಾವೆಲ್ಲರೂ ಹೆಜ್ಜೆ ಹಾಕಲೇ ಬೇಕು. ಅದಕ್ಕೆ ತಂತ್ರಜ್ಞಾನದ ನೆರವು ಅತ್ಯಗತ್ಯ.
ನಮ್ಮ ಜೀವನದ ಭಾಗವಾಗಿರುವ ತಂತ್ರಜ್ಞಾನ, ನಮ್ಮ ಚಿಂತನೆಯ ಕೀಲಿಕೈ ಕೂಡ ಆಗಿರುತ್ತದೆ. ಸಮಾಜದ ಜೊತೆ ಸಂವಾದಕ್ಕೆ ಸಾಧನವೂ ಆಗಿರುತ್ತದೆ. ಆದ್ದರಿಂದ ಅದನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು.
ತಂತ್ರಜ್ಞಾನ ಮತ್ತು ಸಾಮಾಜಿಕ ಜವಾಬ್ದಾರಿ ಎರಡೂ ಕೈಹಿಡಿದು ಸಾಗಬೇಕು." ಎಂದು ಹಿರಿಯ ಪತ್ರಕರ್ತೆ, ಲೇಖಕಿ ಮತ್ತು ಪ್ರಕಾಶಕಿ ಡಾ. ಆರ್. ಪೂರ್ಣಿಮಾ ಹೇಳಿದರು.

ಅಂತಾರಾಷ್ಟ್ರೀಯ ತಾಯ್ನುಡಿ ದಿನ- ೨೦೨೧ರ ಸಂದರ್ಭದಲ್ಲಿ ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಂತ್ರಜ್ಞಾನ ಲೇಖಕ ಟಿ. ಜಿ. ಶ್ರೀನಿಧಿ ಬರೆದಿರುವ 'ಬೆರಳ ತುದಿಯ ಬೆರಗು' ಕೃತಿಯನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಲೇಖಕ ಶ್ರೀನಿಧಿ, " 2023ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯ ಶೇ. 68 ರಷ್ಟು ಜನರು ಮೊಬೈಲ್ ಬಳಕೆದಾರರಾಗಲಿದ್ದಾರೆ ಎಂದು ಸಮೀಕ್ಷೆಗಳು ಹೇಳಿವೆ. ಮೊಬೈಲ್ ಹಾಗೂ ಆ ಮೂಲಕ ಅಂತರ್ಜಾಲದ ಸಂಪರ್ಕಕ್ಕೆ ಬರುವ ಇಷ್ಟೆಲ್ಲ ಹೊಸ ಬಳಕೆದಾರರಲ್ಲಿ ಬಹಳಷ್ಟು ಜನ ಸಣ್ಣ ನಗರಗಳು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿರಲಿದ್ದಾರೆ ಹಾಗೂ ತಮ್ಮ ಮಾತೃಭಾಷೆಯಲ್ಲೇ ಅಂತರ್ಜಾಲ-ವಿಶ್ವವ್ಯಾಪಿ ಜಾಲಗಳನ್ನು ಬಳಸಲಿದ್ದಾರೆ. ಹೀಗಾಗಿಯೇ ಐಟಿ ಕ್ಷೇತ್ರದ ಭವಿಷ್ಯ ಸ್ಥಳೀಯ ಭಾಷೆಗಳಲ್ಲಿದೆ." ಎಂದು ಹೇಳಿದರು.

ADVERTISEMENT

ಸುರಾನಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಇಜ್ಞಾನ ಟ್ರಸ್ಟ್‌ ಸಹಯೋಗದೊಡನೆ ಆಯೋಜಿಸಲಾಗಿದ್ದ 'ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ' ಕಾರ್ಯಾಗಾರವನ್ನೂ ಅತಿಥಿಗಳು ಉದ್ಘಾಟಿಸಿದರು. ಭಾಷೆಗೆ ಸಂಬಂಧಿಸಿದ ತಂತ್ರಜ್ಞಾನಗಳು, ಕನ್ನಡದ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿರುವ ಅವಕಾಶಗಳು ಸೇರಿದಂತೆ ಹಲವು ವಿಷಯಗಳ ಸ್ಥೂಲ ಪರಿಚಯ ಮಾಡಿಕೊಡುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. "ಮಾಹಿತಿ ತಂತ್ರಜ್ಞಾನ ನಮ್ಮ ಜೀವನದ ಎಲ್ಲ ಕ್ಷೇತ್ರಗಳನ್ನೂ ಪ್ರಭಾವಿಸುತ್ತಿರುವ ಈ ಹೊತ್ತಿನಲ್ಲಿ ಕನ್ನಡದ ವಿದ್ಯಾರ್ಥಿಗಳಿಗೂ ಮಾಹಿತಿ ತಂತ್ರಜ್ಞಾನ ಜಗತ್ತಿನ ಪರಿಚಯ ಇರಬೇಕಾದ್ದು ಅತ್ಯಗತ್ಯ. ಆ ಉದ್ದೇಶದಿಂದಲೇ ಸುರಾನಾ ಕಾಲೇಜಿನ ಕನ್ನಡ ವಿಭಾಗ ಕಳೆದ ಹಲವು ವರ್ಷಗಳಿಂದ ಇಂತಹ ಕಾರ್ಯಾಗಾರಗಳನ್ನು ಆಯೋಜಿಸುತ್ತಾ ಬಂದಿದೆ." ಎಂದು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವತ್ಸಲಾ ಮೋಹನ್ ಹೇಳಿದರು.

ಸುರಾನಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಭವಾನಿ ಎಂ. ಆರ್., ಕನ್ನಡ ವಿಭಾಗದ ಡಾ. ವಿಶಾಲಾ ವಾರಣಾಶಿ, ಡಾ. ಸುಷ್ಮಾ ಎಂ., ಡಾ. ಕೃಪ ಎ., ಇಜ್ಞಾನ ಟ್ರಸ್ಟ್‌ನ ಟಿ. ಎಸ್. ಗೋಪಾಲ್, ಡಾ. ಎಚ್. ಆರ್. ಅಪ್ಪಣ್ಣಯ್ಯ, ಬಿ. ಎಸ್. ವಿಶ್ವನಾಥ, ಎನ್. ಜಿ. ಚೇತನ್, ಅಭಿಷೇಕ್ ಜಿ. ಎಸ್. ಉಪಸ್ಥಿತರಿದ್ದರು. ತಂತ್ರಜ್ಞಾನ ಜಗತ್ತು ಕುರಿತ ಮೂವತ್ತು ಬರಹಗಳ ಸಂಕಲನವಾದ 'ಬೆರಳ ತುದಿಯ ಬೆರಗು' ಕೃತಿಯನ್ನು ವಿಕಾಸ ಪ್ರಕಾಶನ ಪ್ರಕಟಿಸಿದೆ. ಕೃತಿಯ ಬೆಲೆ ₹ 120.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.