ಶಾಂತಿನಗರದ ಕೆಂಗಲ್ ಹನುಮಂತಯ್ಯ ರಸ್ತೆಯ ಮೇಲ್ಸೇತುವೆಯ ಕಂಬಗಳ ಮೇಲೆ ಬಿಡಿಸಿರುವ ಕ್ರಿಕೆಟ್ ಆಟಗಾರರ ಭಾವಚಿತ್ರ.
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಬೆಂಗಳೂರು: ಮೆಟ್ರೊ ಸ್ತಂಭಗಳನ್ನು ನೋಡಿ, ‘ಕಂಬದ ಮ್ಯಾಲಿನ ಗೊಂಬಿಯೇ’ ಹಾಡು ಗುನುಗುವಂತಾದರೆ, ಮೇಲ್ಸೇತುವೆಯ ಮೇಲಿನ ಕ್ರೀಡಾ ಸಾಧಕರ ಚಿತ್ರ ಕಂಡು ನಗು ಮಿನುಗುತ್ತದೆ. ಸಮಾಜ ಸುಧಾರಕರ ಚಿತ್ರಗಳು ಮಕ್ಕಳಲ್ಲಿ ಯಾರಿವರು ಎಂಬ ಕುತೂಹಲವನ್ನೂ ಮೂಡಿಸುತ್ತವೆ. ‘ನಮ್ಮ ಮೆಟ್ರೊ’ ಸೌಂದರ್ಯದೊಂದಿಗೆ ಸಂಸ್ಕೃತಿ, ಸ್ಫೂರ್ತಿ ಮತ್ತು ಕೀರ್ತಿಯನ್ನು ಒಟ್ಟೊಟ್ಟಿಗೆ ಒಡಮೂಡಿಸಿದೆ.
‘ಬ್ರ್ಯಾಂಡ್ ಬೆಂಗಳೂರು’ ಯೋಜನೆಯಡಿ ಮೆಟ್ರೊ ಪಿಲ್ಲರ್ ಹಾಗೂ ಐತಿಹಾಸಿಕ ಪಾರಂಪರಿಕ ಕಟ್ಟಡಗಳ ದೀಪಾಲಂಕಾರದ ಮೂಲಕ ನಗರದ ಸೌಂದರ್ಯ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಈಗಾಗಲೇ ಕೆಲವು ಸ್ತಂಭಗಳಲ್ಲಿ ನಾಡಿನ ಕಲೆಯ ಅನಾವರಣಗೊಳಿಸುವ ಕಾರ್ಯ ಸಾಗಿದೆ.
‘ನಮ್ಮ ಮೆಟ್ರೊ’ ಪಿಲ್ಲರ್‌ಗಳಲ್ಲಿ ಚನ್ನಪಟ್ಟಣದ ಗೊಂಬೆಗಳೇ ಜೀವತಳೆದಂತೆ ಬಣ್ಣಬಣ್ಣಗಳಲ್ಲಿ ನಳನಳಿಸುತ್ತಿವೆ. ಶಾಂತಿನಗರದ ಕೆಂಗಲ್ ಹನುಮಂತಯ್ಯ ರಸ್ತೆಯಲ್ಲಿ ‘ಕ್ರೀಡಾ ಜಂಕ್ಷನ್’ ಎಂದು ಹೆಸರಿಸಿ, ಪ್ರತಿ ಸ್ತಂಭಕ್ಕೂ ನೀಲಿ ಬಣ್ಣದ ಜರ್ಸಿ ಧರಿಸಿರುವ ಕ್ರಿಕೆಟ್ ಪಟುಗಳ ಚಿತ್ರಗಳನ್ನು ಬರೆಯಲಾಗಿದೆ. ಅದೇ ರೀತಿ ಮೈಸೂರು ರಸ್ತೆಯ ಬಾಲಗಂಗಾಧರ ನಾಥ ಸ್ವಾಮೀಜಿ ಮೇಲ್ಸೇತುವೆಯ ಪಿಲ್ಲರ್‌ಗಳಲ್ಲಿ ಸಮಾಜ ಸುಧಾರಕರ ಭಾವಚಿತ್ರಗಳು ಕಲಾತ್ಮಕವಾಗಿ ಮೂಡಿ ಬಂದಿವೆ.
ನಮ್ಮ ಮೆಟ್ರೊವನ್ನು ಮತ್ತಷ್ಟು ಆಕರ್ಷಣೀಯವಾಗಿಸುವ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್ ಹೊಸ ಹೆಜ್ಜೆ ಇಟ್ಟಿದೆ. ಇದರ ಭಾಗವಾಗಿ ನಗರದ ಹುಸ್ಕೂರು ಗೇಟ್‌ನಿಂದ ಹೆಬ್ಬಗೋಡಿವರೆಗಿನ ಮಾರ್ಗದಲ್ಲಿರುವ ಮೆಟ್ರೊ ಸ್ತಂಭಗಳ ಮೇಲೆ ‘ಪಿಲ್ಲರ್ಸ್ ಆಫ್ ಬೆಂಗಳೂರು-ಪ್ರತಿನಿತ್ಯದ ಚಾಂಪಿಯನ್‌ಗಳ ಸಂಭ್ರಮಾಚರಣೆ’ ಶೀರ್ಷಿಕೆಯಡಿಯಲ್ಲಿ ಚನ್ನಪಟ್ಟಣದ ಕಲೆಯನ್ನು ಬಿಂಬಿಸುವ ಕಲಾಕೃತಿಗಳನ್ನು ಸುಂದರವಾಗಿ ಮೂಡಿಸಲಾಗಿದೆ.
ಬಯೋಕಾನ್ ಫೌಂಡೇಷನ್‌ನ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿ ಈ ಯೋಜನೆ ಅನುಷ್ಠಾನ ಮಾಡಲಾಗಿದೆ.
ಹೂವು ಮಾರಾಟಗಾರರು, ಎಲೆಕ್ಟ್ರೀಷಿಯನ್, ಟೇಲರ್‌ಗಳು, ವೈದ್ಯರು, ದಾದಿಯರು, ಸಂಗೀತಗಾರರು, ವಿಜ್ಞಾನಿಗಳು ಸೇರಿದಂತೆ ದೈನಂದಿನ ಜೀವನದ ಭಾಗವಾಗಿರುವ ಎಲ್ಲಾ ಪಾತ್ರಧಾರಿಗಳ ಚಿತ್ರಗಳು ಚನ್ನಪಟ್ಟಣದ ಗೊಂಬೆಗಳಂತೆ ಸುಂದರವಾದ ಕೆತ್ತನೆಯ ರೀತಿಯಲ್ಲಿ ಮೂಡಿಬಂದಿವೆ.
‘ಪಿಲ್ಲರ್ಸ್ ಆಫ್ ಬೆಂಗಳೂರು’ ಹೆಸರಿನಲ್ಲಿ ಹುಸ್ಕೂರು ಗೇಟ್‌ನಿಂದ ಪ್ರಾರಂಭವಾಗುವ ಮೆಟ್ರೊ ಪಿಲ್ಲರ್‌ಗಳ ಮೇಲೆ ನಮ್ಮ ಸಾಂಪ್ರದಾಯಿಕ ಕಲೆಯನ್ನು ಬಿಂಬಿಸುವ ಕಲಾಕೃತಿಗಳನ್ನು ಚಿತ್ರಿಸಲಾಗಿದೆ. ಈ ಎಲ್ಲ ಕಲಾಕೃತಿಗಳು ಬೀದಿ ಬದಿ ವ್ಯಾಪಾರಿಗಳು, ರೈತರು, ಪೌರಕಾರ್ಮಿಕರು, ಸ್ವಚ್ಛತಾ ಕಾರ್ಮಿಕರು, ಆಟೊ ಚಾಲಕರ ಚಿತ್ರ ಒಳಗೊಂಡಿವೆ. ಚನ್ನಪಟ್ಟಣದ ಗೊಂಬೆಗಳ ಸ್ಪರ್ಶ ನೀಡಿ ಈ ಚಿತ್ರಗಳನ್ನ ಚಿತ್ರಿಸಿರುವುದು ವಿಶೇಷ’ ಎಂದು ಬಯೋಕಾನ್ ಫೌಂಡೇಶನ್ ಮಿಷನ್ ತಿಳಿಸಿದೆ.
ಬಿಬಿಎಂಪಿ ವತಿಯಿಂದ ಶಾಂತಿನಗರದ ಕೆ.ಎಚ್. ರಸ್ತೆಯಲ್ಲಿರುವ ಮೇಲ್ಸೇತುವೆ ಪಿಲ್ಲರ್‌ಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದುಕೊಟ್ಟ ಕ್ರಿಕೆಟಿಗರ ಭಾವಚಿತ್ರಗಳನ್ನು ಚಿತ್ರಿಸಲಾಗಿದೆ.
‘ಕ್ರೀಡಾ ಜಂಕ್ಷನ್’ನಲ್ಲಿ ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್, ಇ.ಎ.ಎಸ್. ಪ್ರಸನ್ನ, ಸೈಯದ್ ಕಿರ್ಮಾನಿ, ವಿ.ಸುಬ್ರಹ್ಮಣ್ಯ, ಬಿ.ಎಸ್.ಚಂದ್ರಶೇಖರ್, ಜಿ.ಆರ್.ವಿಶ್ವನಾಥ್, ಅನಿಲ್ ಕುಂಬ್ಳೆ, ರೋಜರ್ ಬಿನ್ನಿ, ಶಾಂತಾ ರಂಗಸ್ವಾಮಿ ಅವರ ಆಟದ ವೈಖರಿಯನ್ನು ಚಿತ್ರಗಳಲ್ಲಿ ನೋಡಬಹುದು. ಅಲ್ಲದೇ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಅವರ ಆಟದ ಭಂಗಿ ಸಹ ನೋಡುಗರನ್ನು ಆಕರ್ಷಿಸುತ್ತದೆ.
ಮೈಸೂರು ರಸ್ತೆಯ ಬಾಲಗಂಗಾಧರ ನಾಥ ಸ್ವಾಮೀಜಿ ಮೇಲ್ಸೇತುವೆಯ ಪಿಲ್ಲರ್‌ಗಳಲ್ಲಿ ಸಮಾಜ ಸುಧಾರಕರು ಹಾಗೂ ಹೋರಾಟಗಾರರ ಭಾವಚಿತ್ರವನ್ನು ಬಿಡಿಸಲಾಗಿದೆ. ಮಹರ್ಷಿ ವಾಲ್ಮೀಕಿ, ಟಿಪ್ಪು ಸುಲ್ತಾನ್, ಅಕ್ಕಮಹಾದೇವಿ, ಸಂತ ಸೇವಾಲಾಲ್, ಬಾಲಗಂಗಾಧರನಾಥ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ ಸೇರಿದಂತೆ ಹಲವು ಮಹನೀಯರ ಚಿತ್ರಗಳು ಗಮನ ಸೆಳೆಯುತ್ತವೆ.
‘ನಗರದ ಸೌಂದರ್ಯ ಹೆಚ್ಚಿಸಲು ಕೆಲವು ಕಂಬಗಳಿಗೆ ಚಿತ್ರಗಳನ್ನು ಬಿಡಿಸಲಾಗಿದೆ. ಇನ್ನು ಕೆಲವು ಕಂಬಗಳನ್ನು ಜಾಹೀರಾತಿಗೆ ಮೀಸಲಿಡಲಾಗಿದೆ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಾಧಕರ ಚಿತ್ರಗಳು ಸಾಧನೆಗೆ ಸ್ಪೂರ್ತಿ ’
‘ದೇಶಕ್ಕೆ ಕೀರ್ತಿ ತಂದುಕೊಟ್ಟ ಕ್ರೀಡಾಪಟುಗಳ ಭಾವಚಿತ್ರಗಳನ್ನು ಕಂಬಗಳಲ್ಲಿ ನೋಡುವುದಕ್ಕೆ ಖುಷಿಯಾಗುತ್ತದೆ. ಈ ಚಿತ್ರಗಳನ್ನು ನೋಡಿದಾಗ ಮಕ್ಕಳಿಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಆಸೆ ಮೂಡುತ್ತದೆ. ಮೇಲ್ಸೇತುವೆ ಕೆಳಗೆ ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳನ್ನು ಹಾಕಲಾಗಿದೆ. ಹಾಗಾಗಿ ಈ ಪ್ರದೇಶದಲ್ಲಿ ಯಾರೂ ಗಲೀಜು ಮಾಡುವುದಿಲ್ಲ ’ ಎಂದು ಸ್ಥಳೀಯ ನಿವಾಸಿ ರಮೇಶ್ ರಾಜು ತಿಳಿಸಿದರು.
‘ನಗರದ ಸೌಂದರ್ಯಕ್ಕೆ ಆದ್ಯತೆ‘ ‘ನಗರದ ಸೌಂದರ್ಯ ಹೆಚ್ಚಿಸುವುದರ ಜತೆಗೆ ಸ್ವಚ್ಛತೆ ಕಾಪಾಡುವಂತೆ ಅರಿವು ಮೂಡಿಸಲು ಕಂಬಗಳ ಮೇಲೆ ರೈತರು ವ್ಯಾಪಾರಿಗಳ ಚಿತ್ರಗಳನ್ನು ಬಿಡಿಸಲಾಗಿದೆ. ಈಗಾಗಲೇ 75 ಕಿ.ಮೀ. ಮಾರ್ಗದಲ್ಲಿ ಮೂರು ಹಂತಗಳಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಸಹಕಾರದೊಂದಿಗೆ ಕಲಾಕೃತಿಗಳನ್ನು ರಚಿಸಲಾಗಿದೆ. ತುಮಕೂರು ರಸ್ತೆಯಲ್ಲಿ ಸ್ಪರ್ಶ್ ಆಸ್ಪತ್ರೆ ಎಂ.ಜಿ.ರಸ್ತೆಯಲ್ಲಿ ಡಿಸ್ಕವರಿ ವಿಲೇಜ್ ಸಂಸ್ಥೆ.. ಹೀಗೆ ಕಾರ್ಪೊರೇಟ್ ಸಂಸ್ಥೆಗಳು ಕೈ ಜೋಡಿಸಿವೆ. ನಗರದ ಸೌಂದರ್ಯ ಹಾಗೂ ಶುಚಿತ್ವ ಕಾಪಾಡಲು ಜನರು ಸಹಕಾರ ನೀಡಬೇಕು’ ಎಂದು ಬಿಎಂಆರ್‌ಸಿಎಲ್ ಉಪ ಮುಖ್ಯ ಎಂಜಿನಿಯರ್ (ಸ್ವತ್ತು ಅಭಿವೃದ್ಧಿ ವಿಭಾಗ) ಆರ್.ರಾಘವೆಂದ್ರ ರಾವ್ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.