ADVERTISEMENT

ಬ್ರ್ಯಾಂಡ್ ಬೆಂಗಳೂರು ದಾರಿ ಹತ್ತಾರು | ಮುಂದಕ್ಕೆ ಚಲಿಸಿಲ್ಲ ‘ಉಪನಗರ ರೈಲು’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 20:31 IST
Last Updated 22 ನವೆಂಬರ್ 2021, 20:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಉಪನಗರ ರೈಲುಗಳಿಂದ ಪರಿಹಾರ ಸಿಗಲಿದೆ ಎಂಬ ಸಿಲಿಕಾನ್ ಸಿಟಿ ನಿವಾಸಿಗಳ ಕನಸು ಸದ್ಯಕ್ಕೆ ನನಸಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಯೋಜನೆಗೆ ಅನುಮೋದನೆ ದೊರೆತು 13 ತಿಂಗಳು ಕಳೆದರೂ, ಕಾಮಗಾರಿಗೆ ಶಂಕುಸ್ಥಾಪನೆಯೇ ನೆರವೇರಿಲ್ಲ. ‘ಉಪನಗರ ರೈಲು’ ಯೋಜನೆ ಸ್ವಲ್ಪವೂ ಮುಂದಕ್ಕೆ ಚಲಿಸಿಲ್ಲ.

ನಗರಕ್ಕೆ ಪ್ರತ್ಯೇಕವಾಗಿ ರೈಲು ಸೇವೆ ಆರಂಭಿಸುವ ಬಗ್ಗೆ ರೈಲ್ವೆ ಇಲಾಖೆ 1983ರಲ್ಲೇ ಪ್ರಸ್ತಾಪ ಸಿದ್ಧಪಡಿಸಿತ್ತು. 2010ರಲ್ಲಿ ಸಿಸ್ಟುಪ್‌– ಪ್ರಜಾ ಸಂಘಟನೆಗಳ ಒತ್ತಾಸೆಯಿಂದ ಈ ಕೂಗು ತೀವ್ರಗೊಂಡಿತು. 2014ರಲ್ಲಿ ಡಿ.ವಿ.ಸದಾನಂದಗೌಡ ರೈಲ್ವೆ ಸಚಿವರಾಗಿದ್ದಾಗ ಬಜೆಟ್‌ನಲ್ಲೇ ಈ ಯೋಜನೆಯ ಅಗತ್ಯದ ಬಗ್ಗೆ ಪ್ರಸ್ತಾಪಿಸಿದ್ದರು.ಕೊನೆಗೂ 2019ರ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಯನ್ನು ಉಲ್ಲೇಖಿಸಲಾಯಿತು. 2020ರ ಅ. 21ರಂದು ರೈಲ್ವೆ ಮಂಡಳಿಯಿಂದ ಇದಕ್ಕೆ ಅನುಮೋದನೆಯೂ ದೊರೆಯಿತು. ಕಾಮಗಾರಿ ಪೂರ್ಣಗೊಳಿಸಲು 6 ವರ್ಷಗಳ ಕಾಲಮಿತಿ ನಿಗದಿ ಮಾಡಲಾಯಿತು.

ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ–ರೈಡ್) ಈ ಯೋಜನೆಯನ್ನು ನಾಲ್ಕು ಕಾರಿಡಾರ್‌ಗಳನ್ನಾಗಿ ವಿಂಗಡಿಸಿದೆ. ‌ಪ್ರಧಾನಿ ನರೇಂದ್ರ ಮೋದಿ ಅವರಿಂದ ಭೂಮಿಪೂಜೆ ನಡೆಸಿ ಕಾಮಗಾರಿಗೆ ಚಾಲನೆ ನೀಡಲು ನಾಲ್ಕು ತಿಂಗಳ ಹಿಂದೆಯೇ ಕೆ–ರೈಡ್ ಸಜ್ಜಾಗಿತ್ತು. ಆದರೆ, ಈವರೆಗೆ ಸಿವಿಲ್ ಕಾಮಗಾರಿಗೆ ಟೆಂಡರ್ ಆಹ್ವಾನಿಸಿಲ್ಲ. ತಯಾರಿ ಹಂತದಲ್ಲೇ ಕೆ– ರೈಡ್ ದಿನ ದೂಡುತ್ತಿದೆ.

ADVERTISEMENT

ಕೆ–ರೈಡ್ ವೆಬ್‌ಸೈಟ್ ತೆರೆದರೆ ಉಪನಗರ ರೈಲಿನ ಸುಂದರವಾದ ರೇಖಾಚಿತ್ರ, ನಿಲ್ದಾಣಗಳ ಮಾಹಿತಿ, ಯೋಜನೆಯ ವಿವರ ಎಲ್ಲವೂ ಲಭ್ಯವಾಗುತ್ತದೆ. ಸದ್ಯಕ್ಕೆ ಈ ರೈಲು ಯೋಜನೆಯ ಕನಸು ಕಾಣುತ್ತಿರುವವರು ವೆಬ್‌ಸೈಟ್‌ನಲ್ಲಿರುವ ಚಿತ್ರಗಳನ್ನಷ್ಟೇ ನೋಡಿ ತೃಪ್ತಿಪಡಬೇಕಾಗಿದೆ.

‘2,190 ದಿನಗಳ ಕಾಲಮಿತಿ ನಿಗದಿ ಮಾಡಿರುವುದನ್ನು ವೆಬ್‌ಸೈಟ್‌ನಲ್ಲೇ ದೊಡ್ಡದಾಗಿ ಪ್ರಕಟಿಸಲಾಗಿದೆ. ಅನುಮೋದನೆ ದೊರೆತು ಈಗಾಗಲೇ 397 ಕಳೆದಿದೆ. ಗಡುವಿನ ಒಳಗೆ ಯೋಜನೆ ಪೂರ್ಣಗೊಳಿಸಲು ಇನ್ನು 1,793 ದಿನಗಳು ಬಾಕಿ ಉಳಿದಿವೆ. ಕಾಮಗಾರಿಯನ್ನೇ ಆರಂಭಿಸದಿದ್ದರೆ ಬಾಕಿ ಇರುವ ದಿನಗಳಲ್ಲಿ ಯೋಜನೆ ಪೂರ್ಣಗೊಳಿಸಲು ಸಾಧ್ಯವೇ’ ಎಂಬುದು ರೈಲ್ವೆ ಹೋರಾಟಗಾರರ ಪ್ರಶ್ನೆ.

‘ಯೋಜನೆಗೆ ಅನುಮೋದನೆ ನೀಡಿ ಕೇಂದ್ರ ಸರ್ಕಾರ ಸುಮ್ಮನಾಗಿದೆ. ಪ್ರಗತಿ ಪರಿಶೀಲನೆಯನ್ನು ಯಾರೂ ನಡೆಸುತ್ತಿಲ್ಲ. ಬೆಂಗಳೂರಿನ ಸಂಚಾರ ದಟ್ಟಣೆ ನಡುವೆ ಸಿಲುಕಿ ಜನ ನಲುಗುತ್ತಿದ್ದಾರೆ. ಸಮರೋಪಾದಿಯಲ್ಲಿ ಮಾಡಬೇಕಾದ ಕೆಲಸವನ್ನು ವಿಳಂಬ ಮಾಡಲಾಗುತ್ತಿದೆ. ಜನರ ಸಹನೆಗೂ ಮಿತಿ ಇದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ವಿಮಾನ ನಿಲ್ದಾಣ ಮಾರ್ಗ ಆದ್ಯತೆಯಲ್ಲ

ಕೆಎಸ್‌ಆರ್‌ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ) ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣ ಮಾರ್ಗದಲ್ಲಿ ದೇವನಹಳ್ಳಿಗೆ ಸಂಪರ್ಕ ಕಲ್ಪಿಸುವ ‘ಸಂಪಿಗೆ’ ಕಾರಿಡಾರ್‌ ಕಾಮಗಾರಿಯನ್ನು ಆದ್ಯತೆ ಮೇರೆಗೆ ಕೈಗೊಳ್ಳಲು ಕೆ–ರೈಡ್ ಈ ಹಿಂದೆ ನಿರ್ಧರಿಸಿತ್ತು. ಆದರೆ, ಈಗ ಆದ್ಯತೆ ಬದಲಾಯಿಸಿರುವ ಸಂಸ್ಥೆಯು ಬೇರೆ ಮಾರ್ಗಗಳ ಕಾಮಗಾರಿಯನ್ನು ಮೊದಲು ಆರಂಭಿಸಲು ನಿರ್ಧರಿಸಿದೆ.

ಬೈಯಪ್ಪನಹಳ್ಳಿ ಟರ್ಮಿನಲ್‌ನಿಂದ ಚಿಕ್ಕಬಾಣಾವರಕ್ಕೆ ಸಂಪರ್ಕ ಕಲ್ಪಿಸುವ ‘ಮಲ್ಲಿಗೆ’ ಮತ್ತು ಹೀಲಳಿಗೆಯಿಂದ ರಾಜಾನುಕುಂಟೆಗೆ ಸಂಪರ್ಕ ಕಲ್ಪಿಸುವ ‘ಕನಕ’ ಮಾರ್ಗಗಳ ಕಾಮಗಾರಿಯನ್ನು ಆದ್ಯತೆ ಮೇರೆಗೆ ಆರಂಭಿಸಲಿದೆ. ಇದನ್ನು ಕೆ–ರೈಡ್ ತನ್ನ ವೆಬ್‌ಸೈಟ್‌ನಲ್ಲೇ ಹೇಳಿಕೊಂಡಿದೆ.

‘ವಿಮಾನ ನಿಲ್ದಾಣಕ್ಕೆ ಸದ್ಯ ರಸ್ತೆಯೇ ಪ್ರಮುಖ ಮಾರ್ಗ. ಈ ಮಾರ್ಗದ ಮೇಲಿರುವ ಒತ್ತಡ ಕಡಿಮೆ ಮಾಡಲು ಉಪನಗರ ರೈಲು ಮತ್ತು ಮೆಟ್ರೊ ರೈಲುಗಳ ಸಂಪರ್ಕ ಕಲ್ಪಿಸುವುದು ಅನಿವಾರ್ಯ. ಉಪನಗರ ರೈಲು ಯೋಜನೆಯಲ್ಲಿ ಈ ಮಾರ್ಗವೇ ಆದ್ಯತೆ ಆಗಬೇಕಿತ್ತು. ಕೆ–ರೈಡ್ ಬದಲಾವಣೆ ಮಾಡಿಕೊಂಡಿರುವುದು ಸರಿಯಲ್ಲ’ ಎಂಬುದು ರೈಲ್ವೆ ಹೋರಾಟಗಾರರ ಅಸಮಾಧಾನ.

‘ಎಲ್ಲ ಮಾರ್ಗಗಳೂ ನಮಗೆ ಆದ್ಯತೆಯೇ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿರುವ ಮಾರ್ಗದಲ್ಲಿ ಮೊದಲು ಕಾಮಗಾರಿ ಆರಂಭವಾಗಲಿದೆ. ಈ ದೃಷ್ಟಿಯಿಂದ ಆದ್ಯತೆ ಬದಲಾಯಿಸಿದ್ದೇವೆ ಅಷ್ಟೇ’ ಎಂದು ಕೆ–ರೈಡ್ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಗರ್ಗ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಮೊದಲ ಆರಂಭವಾದ ಕಾಮಗಾರಿಗಷ್ಟೇ ಆದ್ಯತೆ ಅಲ್ಲ. ಏಕಕಾಲದಲ್ಲೇ ಎಲ್ಲಾ ಮಾರ್ಗದ ಕಾಮಗಾರಿಗಳೂ ನಡೆಯಲಿವೆ. ನಿಗದಿತ 6 ವರ್ಷಗಳ ಅವಧಿಯಲ್ಲಿ ಎಲ್ಲಾ ಕಾಮಗಾರಿಗಳೂ ಪೂರ್ಣಗೊಳ್ಳಲಿವೆ. ಅದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಸ್ಪಷ್ಟಪಡಿಸಿದರು.

‘ಯುದ್ಧೋಪಾದಿಯಲ್ಲಿ ನಡೆಯಬೇಕಿದೆ ಕಾಮಗಾರಿ’

‘ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಉಪನಗರ ರೈಲು ಯೋಜನೆ ಪ್ರಮುಖ ಪಾತ್ರ ವಹಿಸಲಿದೆ. ಈ ರೀತಿಯ ಯೋಜನೆಗಳನ್ನು ಸರ್ಕಾರ ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕು’ ಎಂದು ರೈಲ್ವೆ ಹೋರಾಟಗಾರ ರಾಜಕುಮಾರ್ ದುಗಾರ್ ಅಭಿಪ್ರಾಯ‍ಪಟ್ಟರು.

‘13 ತಿಂಗಳು ಕಳೆದರೂ ಭೌತಿಕವಾಗಿ ಕಾಮಗಾರಿ ಆರಂಭವಾಗಿಲ್ಲ. ಇನ್ನೂ ತಯಾರಿ ಹಂತದಲ್ಲೇ ಕೆ–ರೈಡ್ ಕಾಲ ಕಳೆಯುತ್ತಿದೆ. ಬಿಎಂಆರ್‌ಸಿಎಲ್‌ಗಿಂತಲೂ ವಿಳಂಬ ದೋರಣೆಯನ್ನು ಕೆ–ರೈಡ್ ಮಾಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಾಕಿ ಇರುವ 4 ವರ್ಷ 11 ತಿಂಗಳಲ್ಲಿ ಕಾಮಗಾರಿ ಮುಗಿಸಬೇಕಿದೆ. ಆರಂಭಕ್ಕೆ ಇನ್ನೆಷ್ಟು ದಿನಗಳು ಕಾಯಬೇಕೊ ಗೊತ್ತಿಲ್ಲ. ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಮೆಟ್ರೊ ರೈಲು ಮಾರ್ಗದ ಕಾಮಗಾರಿ ಆರಂಭವಾಗಿ 15 ವರ್ಷಗಳು ಕಳೆದಿವೆ. ಈವರೆಗೆ 55 ಕಿ.ಮೀ. ಮಾತ್ರ ಮೆಟ್ರೊ ಮಾರ್ಗ ಬಳಕೆಗೆ ಲಭ್ಯವಾಗಿದೆ. ಇನ್ನು ಉಪನಗರ ರೈಲು ಯೋಜನೆ ನಿಗದಿತ ಅವಧಿಯಲ್ಲಿ ಮುಗಿಯುತ್ತದೆಯೇ’ ಎಂದು ಅನುಮಾನ ವ್ಯಕ್ತಪಡಿಸಿದರು.

‘ರೈಲ್ವೆ ಸಚಿವರು, ಸಂಸದರು ಯೋಜನೆ ಪ್ರಗತಿ ಬಗ್ಗೆ ಆಗಾಗ ಪರಿಶೀಲನೆ ನಡೆಸಬೇಕು. ಆದರೆ, ಯಾರು ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ವಿಮಾನ ನಿಲ್ದಾಣ ಯೋಜನೆಗೆ ಆದ್ಯತೆ ನೀಡದಿರುವ ಬಗ್ಗೆ ಅವರು ಧ್ವನಿ ಎತ್ತುತ್ತಿಲ್ಲ ಏಕೆ’ ಎಂದು ಪ್ರಶ್ನಿಸಿದರು.

‘ಇಷ್ಟೊಂದು ವಿಳಂಬ ಸರಿಯಲ್ಲ’

‘ಈ ಯೋಜನೆಗೆ ಬಹುತೇಕ ಕಡೆ ರೈಲ್ವೆ ಜಾಗವೇ ಬಳಕೆಯಾಗುತ್ತಿದ್ದು, ಭೂಸ್ವಾಧೀನ ಸಮಸ್ಯೆ ಅಷ್ಟಾಗಿ ಇಲ್ಲ. ಆದರೂ ವಿಳಂಬ ಮಾಡಲಾಗುತ್ತಿದೆ’ ಎಂದು ರೈಲ್ವೆ ಹೋರಾಟಗಾರ ಕೃಷ್ಣಪ್ರಸಾದ್ ಬೇಸರ ವ್ಯಕ್ತಪಡಿಸಿದರು.

‘ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲಾಗುತ್ತಿದೆ ಎಂದು ಕೆ–ರೈಡ್ ಹೇಳುತ್ತಲೇ ಇದೆ. ಶಂಕುಸ್ಥಾಪನೆ ಕೂಡ ನೆರವೇರಿಲ್ಲ. ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕವಾದರೂ ಕಾಮಗಾರಿ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

‘ನೆರೆ ರಾಜ್ಯಗಳಲ್ಲಿ ಈ ರೀತಿಯ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಲಾಗುತ್ತದೆ. ನಮ್ಮ ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಇಷ್ಟೊಂದು ವಿಳಂಬ ಮಾಡಲಾಗುತ್ತಿದೆ. ಇದು ಸರಿಯಾದ ಬೆಳವಣಿಗೆ ಅಲ್ಲ’ ಎಂದರು.

ಮೂರು ತಿಂಗಳಲ್ಲಿ ಕಾಮಗಾರಿ ಆರಂಭ

‘ಉಪನಗರ ರೈಲು ಮಾರ್ಗಕ್ಕೆ ಸಿವಿಲ್ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಎರಡು–ಮೂರು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ’ ಎಂದು ಕೆ–ರೈಡ್ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಗರ್ಗ್ ಹೇಳಿದರು.

‘ ಕೆ–ರೈಡ್ ಹೊಸ ಕಂಪನಿ. ಹಾಗಾಗಿ ಕಾಮಗಾರಿ ಆರಂಭಿಸುವ ಮುನ್ನ ಸಾಕಷ್ಟು ಪೂರ್ವತಯಾರಿಯ ಅಗತ್ಯವಿದೆ. ಈ ಯೋಜನೆಗೆ ಅನುಮೋದನೆ ಸಿಕ್ಕ ಬಳಿಕ ನಾವು ಸುಮ್ಮನೆ ಕುಳಿತಿಲ್ಲ. ಕಾರ್ಯವಿಧಾನ ರೂಪಿಸುವುದು, ಮಾರ್ಗದ ವಿನ್ಯಾಸ ಅಂತಿಮಗೊಳಿಸುವುದು, ಹಣಕಾಸು ಹೊಂದಿಸುವುದು, ಅನುಮೋದನೆ ಪಡೆಯುವುದು ಮುಂತಾದ ಅನೇಕ ಕಾರ್ಯಗಳು ನಡೆಯುತ್ತಿವೆ. ಇವೆಲ್ಲವೂ ಮಹತ್ವದ ಕೆಲಸಗಳೇ. ಈ ಕೆಲಸಗಳು ಕಣ್ಣಿಗೆ ಕಾಣಿಸುತ್ತಿಲ್ಲ ಅಷ್ಟೇ’ ಎಂದು ಗರ್ಗ್‌ ವಿವರಿಸಿದರು.

‘ಕಾಮಗಾರಿಯನ್ನು ಗಡಿಬಿಡಿಯಲ್ಲಿ ಆರಂಭಿಸಲು ಆಗುವುದಿಲ್ಲ. ಕಾರ್ಯ ಯೋಜನೆಯನ್ನು ಸಮರ್ಪಕವಾಗಿ ರೂಪಿಸಿಕೊಂಡರೆ, ನಂತರ ಸಿವಿಲ್ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಬಹುದು. ಎಲ್ಲಾ ಪೂರ್ವತಯಾರಿಗಳನ್ನೆಲ್ಲ ಪೂರ್ಣಗೊಳಿಸಿದ ಬಳಿಕವಷ್ಟೇ ಸಿವಿಲ್ ಕಾಮಗಾರಿ ಆರಂಭಿಸಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದರು.


****

ರೈಲ್ವೆ ಸಚಿವರನ್ನು ಭೇಟಿ ಮಾಡಿ ಕಾಮಗಾರಿ ಬಗ್ಗೆ ಮಾತುಕತೆ ನಡೆಸಿದ್ದೇನೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡರೆ ಉಳಿದ ಕಾಮಗಾರಿ ವೇಗವಾಗಿ ನಡೆಯಲಿದೆ.ಟ

-ಡಿ.ವಿ. ಸದಾನಂದಗೌಡ, ಸಂಸದ


****

ಸರ್ವೆ ಕಾರ್ಯ ನಡೆಯುತ್ತಿದ್ದು, ಚುನಾವಣೆ ನೀತಿ ಸಂಹಿತೆ ಇರುವುದ ರಿಂದ ಮುಂದೂಡಲಾಗಿದೆ. ಪ್ರಧಾನಿಯವರಿಂದಲೇ ಶಂಕುಸ್ಥಾಪನೆ ಮಾಡಿಸಬೇಕೆಂಬ ಆಸೆ ಇದೆ.

-ಪಿ.ಸಿ. ಮೋಹನ್, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.