ADVERTISEMENT

ಬೆಸ್ಕಾಂ ಎ.ಇ, ಮಧ್ಯವರ್ತಿ ಬಂಧನ

ಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ₹ 1.5 ಲಕ್ಷ ಲಂಚ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 16:23 IST
Last Updated 14 ಫೆಬ್ರುವರಿ 2023, 16:23 IST
ಆನಂದ್‌
ಆನಂದ್‌   

ಬೆಂಗಳೂರು: ಮನೆಯೊಂದಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ₹1.5 ಲಕ್ಷ ಲಂಚ ಪಡೆದ ಬೆಸ್ಕಾಂನ ಅಗರ ಉಪ ವಿಭಾಗದ (ಎಸ್‌–20) ಸಹಾಯಕ ಎಂಜಿನಿಯರ್‌ ಸಂತೋಷ್‌ ಮತ್ತು ಅಧಿಕಾರಿಯ ಪರವಾಗಿ ಲಂಚದ ಹಣ ಪಡೆದುಕೊಂಡ ಮಧ್ಯವರ್ತಿ ಮಲ್ಲಿಕಾರ್ಜುನ್‌ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಸುಜಿತ್‌ ಕುಮಾರ್‌ ಮತ್ತು ಇತರರು ಹೊಸ ಮನೆ ನಿರ್ಮಿಸಿದ್ದಾರೆ. ಮನೆಗೆ ವಿದ್ಯುತ್‌ ಸಂಪರ್ಕ ಪಡೆಯಲು ಗುತ್ತಿಗೆದಾರ ಪುಟ್ಟೇನಹಳ್ಳಿಯ ವೇಣುಗೋಪಾಲ್‌ ಎಸ್‌. ಎಂಬುವವರ ಮೂಲಕ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಮಾನ್ಯ ಮಾಡಿ, ವಿದ್ಯುತ್‌ ಸಂಪರ್ಕಕ್ಕೆ ಮಂಜೂರಾತಿ ನೀಡಲು ₹ 2.30 ಲಕ್ಷ ಲಂಚ ನೀಡುವಂತೆ ಆನಂದ್‌ ಬೇಡಿಕೆ ಇಟ್ಟಿದ್ದರು.

ಪುನಃ ಗುತ್ತಿಗೆದಾರರು ಭೇಟಿಮಾಡಿ ಚೌಕಾಸಿ ನಡೆಸಿದ್ದರು. ₹1.5 ಲಕ್ಷ ಲಂಚ ನೀಡಿದರೆ ಮಂಜೂರಾತಿ ನೀಡುವುದಾಗಿ ಆರೋಪಿ ತಿಳಿಸಿದ್ದರು. ಈ ಕುರಿತು ಗುತ್ತಿಗೆದಾರರು ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್‌ ವಿಭಾಗಕ್ಕೆ ದೂರು ನೀಡಿದ್ದರು. ಅಧಿಕಾರಿಯ ಸೂಚನೆಯಂತೆ ದೂರುದಾರರು ಮಂಗಳವಾರ ಬೆಸ್ಕಾಂ ಕಚೇರಿಯಲ್ಲಿ ಭೇಟಿಮಾಡಿದ್ದರು. ಲಂಚದ ಹಣವನ್ನು ಅಲ್ಲಿದ್ದ ಮಧ್ಯವರ್ತಿ ಮಲ್ಲಿಕಾರ್ಜುನ್‌ಗೆ ನೀಡುವಂತೆ ಆನಂದ್‌ ಸೂಚಿಸಿದ್ದರು. ಅದರಂತೆ ದೂರುದಾರರು ಹಣ ನೀಡಿದರು. ತಕ್ಷಣ ದಾಳಿಮಾಡಿದ ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ಬಂಧಿಸಿದರು.

ADVERTISEMENT

‘ಆರೋಪಿಗಳನ್ನು ಬಂಧಿಸಿ, ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ವಿದ್ಯುತ್‌ ಸಂಪರ್ಕ ಕೋರಿ ಸಲ್ಲಿಸಿದ್ದ ಅರ್ಜಿ ಹಾಗೂ ಅದಕ್ಕೆ ಸಂಬಂಧಿಸಿದ ಕಡತವನ್ನೂ ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕ ವಿಚಾರಣೆ ಬಳಿಕ ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು’ ಎಂದು ಲೋಕಾಯುಕ್ತದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಲೋಕಾಯುಕ್ತದ ಬೆಂಗಳೂರು ನಗರ ಎಸ್‌ಪಿ ಕೆ.ವಿ. ಅಶೋಕ್‌ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.