ADVERTISEMENT

ಬ್ರಿಟಿಷ್‌ ಕಾಲದ ಕಾಯ್ದೆ ಬದಲಾಯಿಸಲು ಚಿಂತನೆ: ಸಚಿವೆ ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 0:25 IST
Last Updated 13 ಜುಲೈ 2025, 0:25 IST
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮಹಿಳೆ ಚಲಾಯಿಸುವ ಆಟೊದಲ್ಲಿ ಸಂಚರಿಸುವ ಮೂಲಕ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಉಚಿತ ಆಟೊ ಚಾಲನಾ ತರಬೇತಿಗೆ ಚಾಲನೆ ನೀಡಿದರು
ಪ್ರಜಾವಾಣಿ ಚಿತ್ರ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮಹಿಳೆ ಚಲಾಯಿಸುವ ಆಟೊದಲ್ಲಿ ಸಂಚರಿಸುವ ಮೂಲಕ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಉಚಿತ ಆಟೊ ಚಾಲನಾ ತರಬೇತಿಗೆ ಚಾಲನೆ ನೀಡಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಬ್ರಿಟಿಷರ ಕಾಲದ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿ ನಾಲ್ಕು ಸಂಹಿತೆಗಳನ್ನು (ಕೋಡ್‌) ರೂಪಿಸಲಾಗುತ್ತಿದೆ. ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತೆಯನ್ನು ಒದಗಿಸುವುದಕ್ಕಾಗಿ ಒಂದು ಸಂಹಿತೆ ಇರಲಿದೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಬಿ.ಪ್ಯಾಕ್‌ ಹಾಗೂ ಸಿಜಿಐ ಶನಿವಾರ ಹಮ್ಮಿಕೊಂಡಿದ್ದ ‘ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಆಟೊ ಚಾಲನಾ ತರಬೇತಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬ್ರಿಟಿಷರು ಇಲ್ಲಿನ ದುಡಿಮೆಗಾರರನ್ನು ಕಾರ್ಮಿಕರೆಂಬಂತೆ ನೋಡದೆ ಗುಲಾಮರು ಎಂದು ಭಾವಿಸಿದ್ದರು. ಅವರು ರೂಪಿಸಿದ 29 ಕಾರ್ಮಿಕ ಕಾಯ್ದೆಗಳಿವೆ. ಅವೆಲ್ಲವನ್ನು ಕೇಂದ್ರ ಸರ್ಕಾರ ಒಟ್ಟುಗೂಡಿಸಿ ನಾಲ್ಕು ಸಂಹಿತೆ ಮಾಡಲಿದೆ ಎಂದು ವಿವರಿಸಿದರು.

ADVERTISEMENT

ದೇಶದಲ್ಲಿ 90 ಕೋಟಿ ಜನರು ದುಡಿಯುವವರಾಗಿದ್ದಾರೆ. ಅದರಲ್ಲಿ ಶೇ 10ರಷ್ಟು ಮಾತ್ರ ಸರ್ಕಾರಿ ಅಥವಾ ಖಾಸಗಿ ಸಂಘಟಿತ ನೌಕರರು. ಉಳಿದವರು ಅಸಂಘಟಿತ ಕಾರ್ಮಿಕರಾಗಿದ್ದಾರೆ. ಈಗ ಮಹಾನಗರಗಳಲ್ಲಿ ಗಿಗ್‌ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡಿದಾಗ ಮನೆಗೆ ತಲುಪಿಸುವ ಕಾರ್ಮಿಕರು ಅವರು. ಇನ್ನು 10 ವರ್ಷದಲ್ಲಿ ಗಿಗ್‌ ಕಾರ್ಮಿಕರ ಸಂಖ್ಯೆ 25 ಕೋಟಿ ದಾಟಲಿದೆ. ಗಿಗ್‌ ಕಾರ್ಮಿಕರು, ಆಟೊ ಚಾಲಕರೂ ಸೇರಿದಂತೆ ಎಲ್ಲ ಅಸಂಘಟಿತ ಕಾರ್ಮಿಕರಿಗೂ ಸಂಘಟಿತ ನೌಕರರಿಗೆ ಸಿಗುವ ಸಾಮಾಜಿಕ ಭದ್ರತೆ ಸಿಗಬೇಕು ಎಂಬುದು ಕೇಂದ್ರ ಸರ್ಕಾರದ ಚಿಂತನೆ ಎಂದು ಹೇಳಿದರು.

ಮಹಿಳೆಯರು ಆಟೊ ಚಾಲಕರಾದರೆ ಮಹಿಳಾ ಪ್ರಯಾಣಿಕರು ಧೈರ್ಯವಾಗಿ ರಾತ್ರಿಯೂ ಸಂಚರಿಸಲು ಸಾಧ್ಯ ಎಂದರು.

ಸಿಜಿಐ ಏಷ್ಯಾ ಪೆಸಿಫಿಕ್ ಉಪಾಧ್ಯಕ್ಷರಾದ ಶ್ರೀವಿದ್ಯಾ ನಟರಾಜ್, ಸಾರಿಕಾ ಪ್ರಧಾನ್, ಸಿಎಸ್‌ಆರ್‌ ಮುಖ್ಯಸ್ಥರಾದ ಸುಧಾಕರ್ ಪೈ, ಬಿ.ಪ್ಯಾಕ್‌ ಸದಸ್ಯರಾದ ಮಿಮಿ ಪಾರ್ಥ ಸಾರಥಿ, ಚಿತ್ರ ತಲ್ವಾರ್‌, ಕಾವೇರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.