ADVERTISEMENT

ಬಿಎಸ್‌ಆರ್‌‍ಪಿ: ಯು ಗರ್ಡರ್‌ ಅಳವಡಿಕೆ ಆರಂಭ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2024, 16:15 IST
Last Updated 18 ಡಿಸೆಂಬರ್ 2024, 16:15 IST
ಬಿಎಸ್‌ಆರ್‌ಪಿ ಕಾರಿಡಾರ್‌ 2ರಲ್ಲಿ ಮಂಗಳವಾರ ಸಂಜೆ ಯು ಗರ್ಡರ್‌ ಅಳವಡಿಸುವ ಕಾರ್ಯ ನಡೆಯಿತು
ಬಿಎಸ್‌ಆರ್‌ಪಿ ಕಾರಿಡಾರ್‌ 2ರಲ್ಲಿ ಮಂಗಳವಾರ ಸಂಜೆ ಯು ಗರ್ಡರ್‌ ಅಳವಡಿಸುವ ಕಾರ್ಯ ನಡೆಯಿತು   

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಕಾರಿಡಾರ್‌ನಲ್ಲಿ 2026ಕ್ಕೆ ಮೊದಲ ರೈಲು ಸಂಚಾರ ಆರಂಭಿಸುವ ಗುರಿಯನ್ನು ಇಟ್ಟುಕೊಂಡಿರುವ ಕರ್ನಾಟಕ ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿಯು (ಕೆ-ರೈಡ್) ಯು ಗರ್ಡರ್‌ (ಯು ಆಕಾರದ ತೊಲೆ) ಅಳವಡಿಸುವ ಕಾರ್ಯ ಆರಂಭಿಸಿದೆ.

ದೇಶದಲ್ಲಿಯೇ ಅತಿ ಉದ್ದದ (31 ಮೀಟರ್‌) ಯು ಗರ್ಡರ್‌ಗಳನ್ನು ಕಾರಿಡಾರ್‌–2 ಮಲ್ಲಿಗೆ ಮಾರ್ಗದಲ್ಲಿ ಚಿಕ್ಕಬಾಣಾವರದಿಂದ ಯಶವಂತಪುರದವರೆಗೆ ಅಳವಡಿಸುತ್ತಿದೆ. ಇಲ್ಲಿವರೆಗೆ 28 ಮೀಟರ್‌ನ ಯು ಗರ್ಡರ್‌ಗಳೇ ಅತಿ ಉದ್ದದ್ದಾಗಿದ್ದವು.

ಬಿಎಸ್‌ಆರ್‌‍ಪಿ ಮಾರ್ಗದಲ್ಲಿ 100 ಅಡಿ (31 ಮೀಟರ್‌) ಉದ್ದದ ಯು ಗರ್ಡರ್‌ ಅನ್ನು ಯಶವಂತಪುರ ಸಮೀಪ ಯಶಸ್ವಿಯಾಗಿ ಅಳವಡಿಸುವ ಮೂಲಕ ಕೆ–ರೈಡ್‌ ಎಂಜಿನಿಯರ್‌, ಅಧಿಕಾರಿಗಳು, ಸಿಬ್ಬಂದಿ, ಕಾರ್ಮಿಕ ವರ್ಗ ಮಹತ್ತರ ಸಾಧನೆ ಮಾಡಿದೆ ಎಂದು ಬೃಹತ್‌ ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ADVERTISEMENT

ಗರ್ಡರ್‌ ವಿವರ: ಗರ್ಡರ್‌ ಸಂಖ್ಯೆ 25. ಇದರಲ್ಲಿ 70 ಘನ ಮೀಟರ್‌ ಕಾಂಕ್ರೀಟ್‌, 12.5 ಟನ್‌ ಉಕ್ಕು ಬಳಸಲಾಗಿದೆ. 178 ಮೆಟ್ರಿಕ್‌ ಟನ್‌ ತೂಕ ಹೊಂದಿದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಸಾರಿಗೆ ವಾಹನದ ಮೂಲಕ ಕಾಸ್ಟಿಂಗ್ ಯಾರ್ಡ್‌ನಿಂದ ನಿಗದಿತ ಸ್ಥಳಕ್ಕೆ ರಸ್ತೆ ಮೂಲಕ ಗರ್ಡರ್‌ ತರಲಾಗಿದೆ. 550 ಟನ್ ಸಾಮರ್ಥ್ಯದ ಒಂದು ಕ್ರೇನ್‌ ಮತ್ತು 700 ಟನ್‌ ಸಾಮರ್ಥ್ಯದ ಇನ್ನೊಂದು ಕ್ರೇನ್‌ ಬಳಸಿ ಗರ್ಡರ್‌ ಅಳವಡಿಸಲಾಗಿದೆ ಎಂದು ಕೆ–ರೈಡ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.