ADVERTISEMENT

ಜಿಬಿಎ | 47 ಕಿ.ಮೀ. ಬಫರ್ ರಸ್ತೆ ಕಾಮಗಾರಿ ಶೀಘ್ರ ಆರಂಭ: ಆಯುಕ್ತ ಮಹೇಶ್ವರ್ ರಾವ್

ಸರ್ಜಾಪುರ–ಈಜಿಪುರದಲ್ಲಿ ರಸ್ತೆ ಕಾಮಗಾರಿ ಪ್ರಾರಂಭ; ಸದ್ಯದಲ್ಲೇ ಎಲ್ಲದ್ದಕ್ಕೂ ಕಾರ್ಯಾದೇಶ: ಮಹೇಶ್ವರ್‌ ರಾವ್‌

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 23:30 IST
Last Updated 12 ಡಿಸೆಂಬರ್ 2025, 23:30 IST
   

ಬೆಂಗಳೂರು: ‘ಸಂಚಾರಯುಕ್ತ’ ಯೋಜನೆಯಡಿ 47 ಕಿ.ಮೀ. ಉದ್ದದ ಬಫರ್ ರಸ್ತೆಗಳ ಕಾಮಗಾರಿಯನ್ನು ಈ ತಿಂಗಳಾಂತ್ಯದೊಳಗೆ ಪ್ರಾರಂಭಿಸಬೇಕು’ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ವಿವಿಧ ಇಲಾಖೆಗಳ ಸಮನ್ವಯ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ನಗರದಲ್ಲಿ ಹೆಚ್ಚುವರಿ ರಸ್ತೆಗಳನ್ನು ಒದಗಿಸಲು, ಕಾಲುವೆಗಳನ್ನು ರಕ್ಷಿಸಲು, ಬಫರ್ ವಲಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು, ಸುಸ್ಥಿರ ಸಾರಿಗೆಯನ್ನು ಉತ್ತೇಜಿಸಲು ಹಾಗೂ ನೆರೆಹೊರೆಯ ರಸ್ತೆಗಳನ್ನು ಬಲಪಡಿಸಲು ಸುಮಾರು 300 ಕಿ.ಮೀ ಉದ್ದದ ಬಫರ್ ರಸ್ತೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿ, ಕೂಡಲೇ ಕಾಮಗಾರಿ ಪ್ರಾರಂಭಿಸಬೇಕು ಎಂದರು.

ಬಫರ್ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ, ಪಾಲಿಕೆವಾರು ರಸ್ತೆಗಳ ಮತ್ತು ಸ್ವತ್ತು/ಸರ್ವೇ ಮಾಹಿತಿ ಸಲ್ಲಿಸಬೇಕು. ನಂತರ ವಿನ್ಯಾಸ ಪರಿಶೀಲನೆ ನಡೆಸಿ, ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸಲು ಖಾಸಗಿ ಜಾಗಗಳು ಬೇಕಾದಲ್ಲಿ ಟಿಡಿಆರ್/ಪ್ರೀಮಿಯಂ ಎಫ್.ಎ.ಆರ್ ನೀಡುವ ಮೂಲಕ ಜಾಗ ವಶಕ್ಕೆ ಪಡೆದು ಕಾಮಗಾರಿ ಆರಂಭಿಸಲು ನಿರ್ದೇಶನ ನೀಡಿದರು.

ADVERTISEMENT

ಈಜೀಪುರ ಒಳವರ್ತುಲ ರಸ್ತೆಯಿಂದ ಸರ್ಜಾಪುರ ಹೊರವರ್ತುಲ ರಸ್ತೆಯವರೆಗೆ 2.6 ಕಿ.ಮೀ ಉದ್ದದ ಬಫರ್ ರಸ್ತೆ ಕಾಮಗಾರಿಯನ್ನು ರಕ್ಷಣಾ ಇಲಾಖೆ ಜಾಗದ ಬಳಿ ಆರ್‌ಸಿಸಿ ಗೋಡೆಯೊಂದಿಗೆ ₹44 ಕೋಟಿ ವೆಚ್ಚದಲ್ಲಿ ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ನಗರದಲ್ಲಿ ಹೊಸದಾಗಿ ಡಾಂಬರೀಕರಣಗೊಂಡಿರುವ ರಸ್ತೆಗಳಲ್ಲಿ ಲೇನ್ ಮಾರ್ಕಿಂಗ್ ಮಾಡಬೇಕು. ಜೊತೆಗೆ ಕರ್ಬ್ಸ್‌ಗಳಿಗೆ ಪೇಂಟಿಂಗ್, ಜೀಬ್ರಾ ಕ್ರಾಸಿಂಗ್ ಹಾಗೂ ಕ್ಯಾಟ್ ಐಸ್ ಅಳವಡಿಸುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಮಹೇಶ್ವರ್ ರಾವ್‌ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.