ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ – ಉಲ್ಲಂಘನೆ ತಡೆಯಲು ದಾರಿ ಯಾವುದು?

‘ತಪ್ಪಿತಸ್ಥರಿಗೆ ಶಿಕ್ಷೆಯೂ ಸಾಧ್ಯ’

ಪ್ರವೀಣ ಕುಮಾರ್ ಪಿ.ವಿ.
Published 10 ಜನವರಿ 2022, 19:52 IST
Last Updated 10 ಜನವರಿ 2022, 19:52 IST
ಬ್ರಾಂಡ್‌ ಬೆಂಗಳೂರುಗಾಗಿ... ಯಶವಂತಪುರದ ಪಕ್ಷಿನೋಟ –ಪ್ರಜಾವಾಣಿ ಚಿತ್ರ/ಇರ್ಷಾದ್‌ ಮಹಮ್ಮದ್‌
ಬ್ರಾಂಡ್‌ ಬೆಂಗಳೂರುಗಾಗಿ... ಯಶವಂತಪುರದ ಪಕ್ಷಿನೋಟ –ಪ್ರಜಾವಾಣಿ ಚಿತ್ರ/ಇರ್ಷಾದ್‌ ಮಹಮ್ಮದ್‌   

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳ ಸರ್ವೆ ಕೈಗೊಂಡಿದ್ದು, ಒಟ್ಟು 65,091 ಅಕ್ರಮ ಕಟ್ಟಡಗಳನ್ನು ಗುರುತಿಸಿದ್ದೇವೆ. ಅವುಗಳಲ್ಲಿ 15,317 ಕಟ್ಟಡಗಳಿಗೆ ಬಿಬಿಎಂಪಿ ಕಾಯ್ದೆಯನ್ವಯ ನೋಟಿಸ್‌ ಜಾರಿಗೊಳಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ’....

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನ ಪರಿಷತ್ತಿನಲ್ಲಿ ಎನ್‌.ರವಿಕುಮಾರ್‌ ಅವರ ಪ್ರಶ್ನೆಗೆ 2021ರ ಡಿ. 16ರಂದು ನೀಡಿರುವ ಲಿಖಿತ ಉತ್ತರ ಇದು. ಬಿಬಿಎಂಪಿಯು ನಗರದ 18.42 ಲಕ್ಷ ಕಟ್ಟಡಗಳಿಂದ ತೆರಿಗೆ ಸಂಗ್ರಹಿಸುತ್ತಿದೆ. ಆದರೆ, ತೆರಿಗೆ ವ್ಯಾಪ್ತಿಗೆ ಬಾರದ ಕಟ್ಟಡಗಳೂ ಸೇರಿದರೆ ಒಟ್ಟು ಕಟ್ಟಡಗಳ ಸಂಖ್ಯೆ ಇನ್ನೂ ಹೆಚ್ಚು ಇದೆ.

‘ನಿಯಮಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮನಬಂದಂತೆ ಕಟ್ಟಡ ನಿರ್ಮಿಸುವ ಪರಿಪಾಠ ಅನೂಚಾನವಾಗಿ ನಡೆದುಬಂದಿದೆ. ಈ ಪರಿಪಾಠಕ್ಕೆ ಕಡಿವಾಣ ಹಾಕುವಂತೆ ಹೈಕೋರ್ಟ್‌ ಪದೇ ಪದೇ ಬಿಬಿಎಂಪಿಗೆ ಚಾಟಿ ಬೀಸುತ್ತಲೇ ಇದೆ. ಆದರೆ, ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸುವ ಬದಲು ಬಿಬಿಎಂಪಿ ಉಲ್ಲಂಘನೆ ಸಕ್ರಮಗೊಳಿಸುವುದಕ್ಕೆ ಇರುವ ಮಿತಿಯನ್ನು ಶೇ 5ರಿಂದ ಶೇ 15ಕ್ಕೆ ಹೆಚ್ಚಿಸುವಂತಹ ಮಾರ್ಗಗಳ ಬಗ್ಗೆಯೇ ಆಸಕ್ತಿ ತೋರಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕಟ್ಟಡ ನಿರ್ಮಾಣ ತಜ್ಞರು.

ADVERTISEMENT

‘ನಿಯಮ ಉಲ್ಲಂಘಿಸಿ ನಿರ್ಮಾಣವಾಗಿರುವ ಕಟ್ಟಡಗಳ ಸಂಖ್ಯೆ ಕೇವಲ 65,091 ಎಂಬುದನ್ನು ಒಪ್ಪಲಾಗದು. ಈ ಅಂಕಿ–ಅಂಶ ವಾಸ್ತವದಿಂದ ಕೂಡಿಲ್ಲ. ನಗರದಲ್ಲಿ ನಿಯಮಬದ್ಧವಾಗಿ ಕಟ್ಟಿರುವ ಕಟ್ಟಡಗಳನ್ನು ದುರ್ಬೀನು ಹಾಕಿ ಹುಡುಕುವ ಸ್ಥಿತಿ ಇದೆ’ ಎಂಬುದು ತಜ್ಞರ ಅಂಬೋಣ.

‘ನಗರದಲ್ಲಿರುವ ಶೇ 95ಕ್ಕೂ ಅಧಿಕ ಕಟ್ಟಡಗಳು ಬಿಬಿಎಂಪಿಯ ಕಟ್ಟಡಗಳ ಉಪವಿಧಿಯನ್ನು ಒಂದಿಲ್ಲ ಒಂದು ರೀತಿ ಉಲ್ಲಂಘನೆ ಮಾಡಿವೆ’ ಎನ್ನುತ್ತಾರೆ ಅಸೋಸಿಯೇಷನ್‌ ಆಫ್‌ ಕನ್ಸಲ್ಟಿಂಗ್‌ ಸಿವಿಲ್‌ ಎಂಜಿನಿಯರ್ಸ್‌ (ಇಂಡಿಯಾ) ಸಂಸ್ಥೆಯ (ಎಸಿಸಿಇಐ) ಬೆಂಗಳೂರು ಕೇಂದ್ರದ ಚೇರ್‌ಮನ್‌ ಶ್ರೀಕಾಂತ್ ಎಸ್‌.ಚನ್ನಾಳ.

‘ಇತ್ತೀಚೆಗೆ ಆಯ್ದ ಕೆಲವು ಪ್ರದೇಶಗಳಲ್ಲಿ ನಾವು ಸಮೀಕ್ಷೆ ನಡೆಸಿದೆವು. ಕೆಲವು ಕಡೆ ಶೇ 95ರಷ್ಟು, ಇನ್ನು ಕೆಲವು ಕಡೆ ಶೇ 98ರಷ್ಟು ಕಟ್ಟಡಗಳು ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ. ಕೆಲವೆಡೆ ಶೇ 100ರಷ್ಟು ಕಟ್ಟಡಗಳೂ ನಿಯಮ ಮೀರಿ ನಿರ್ಮಾಣಗೊಂಡಿರುವುದು ಕಂಡು ಬಂದಿದೆ’ ಎಂದು ಅವರು ವಿವರಿಸಿದರು.

ಜನರು ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುವುದಕ್ಕೆ ಪ್ರಮುಖ ಕಾರಣ ಬಿಬಿಎಂಪಿ ಕಟ್ಟಡ ನಿರ್ಮಾಣ ಉಪವಿಧಿಗಳಲ್ಲಿರುವ ಲೋಪಗಳು ಎನ್ನುತ್ತಾರೆ ಶ್ರೀಕಾಂತ್‌.

‘ಬಿಬಿಎಂಪಿ ಕಟ್ಟಡ ಉಪವಿಧಿಗಳನ್ನು ಬಹುಮಹಡಿ ಕಟ್ಟಡಗಳನ್ನಷ್ಟೇ ಆದ್ಯತೆಯಾಗಿಟ್ಟುಕೊಂಡು ರೂಪಿಸಿದಂತಿದೆ. ಆದರೆ, ದೊಡ್ಡ ನಿವೇಶನಗಳಲ್ಲಿ ಟಿಡಿಆರ್‌ ಬಳಸಿ ಬಹುಮಹಡಿ ಕಟ್ಟಡಗಳ ಎತ್ತರ ಹೆಚ್ಚಿಸಲು ಅವಕಾಶ ಕಲ್ಪಿಸಲಾಗುತ್ತದೆ. ಇಂತಹ ನಿಯಮಗಳು ಬಹುಮಹಡಿ ಕಟ್ಟಡ ನಿರ್ಮಿಸುವವರಿಗೆ ಹೆಚ್ಚು ಅನುಕೂಲ ಕಲ್ಪಿಸುತ್ತವೆ. ಕೇಂದ್ರ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ ಬಹುಮಹಡಿ ಕಟ್ಟಡಗಳ ಪ್ರಮಾಣ ಶೇ 1.6 ರಷ್ಟು ಮಾತ್ರ. ಇನ್ನುಳಿದ ಶೇ 98.4ರಷ್ಟು ಇತರ ಕಟ್ಟಡಗಳ ಮಾಲೀಕರಿಗೆ ಉಪವಿಧಿಗಳು ಪೂರಕವಾಗಿಲ್ಲ. ಉಲ್ಲಂಘನೆ ಹೆಚ್ಚುವುದಕ್ಕೆ ಇಂತಹ ತಾರತಮ್ಯ ನೀತಿಗಳೂ ಕಾರಣ’ ಎಂದು ಅವರು ವಿಶ್ಲೇಷಿಸಿದರು.

‘ನಗರದಲ್ಲಿ ಕಟ್ಟಡ ನಿಯಮಗಳ ಉಲ್ಲಂಘನೆ ಮಿತಿಮೀರಿದೆ. ಉಲ್ಲಂಘನೆಯಾಗಿರುವ ಕಟ್ಟಡದ ಭಾಗವನ್ನು ಕೆಡಹುವುದು ವಾಸ್ತವದಲ್ಲಿ ಕಷ್ಟಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಅವುಗಳನ್ನು ಸಕ್ರಮಗೊಳಿಸುವಂತೆಯೂ ಇಲ್ಲ. ಕೆಡವದಿದ್ದರೆ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಅಡಕತ್ತರಿಯಲ್ಲಿ ಸಿಲುಕಿದ ಪರಿಸ್ಥಿತಿ ನಮ್ಮದು’ ಎಂದು ಅಳಲು ತೋಡಿಕೊಳ್ಳುತ್ತಾರೆ ಬಿಬಿಎಂಪಿ ಅಧಿಕಾರಿಗಳು.

‘ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದವರನ್ನು ದಂಡಿಸಿ, ಭವಿಷ್ಯದಲ್ಲಿ ಯಾವತ್ತೂ ಇಂತಹ ಉಲ್ಲಂಘನೆ ನಡೆಯದಂತೆ ತಡೆಯುವ ಪರಿಹಾರ ಮಾರ್ಗವನ್ನು ಕಂಡುಕೊಳ್ಳುವ ಸವಾಲು ಸರ್ಕಾರದ ಮುಂದಿದೆ. ಒಂದು ಬಾರಿ ದಂಡ ವಿಧಿಸಿ ಉಲ್ಲಂಘನೆಯನ್ನು ಸಕ್ರಮಗೊಳಿಸುವುದರಲ್ಲೇ ಸರ್ಕಾರಕ್ಕೆ ಹೆಚ್ಚು ಆಸಕ್ತಿ. ಆದರೆ, ಇದು ಸರಿಯಲ್ಲ. ಅದರ ಬದಲು, ಉಲ್ಲಂಘನೆಗೆ ಪ್ರತಿವರ್ಷವೂ ದಂಡ ಪಾವತಿಸುವಂತೆ ಮಾಡುವ ಪರಿಹಾರ ಮಾರ್ಗಗಳೂ ಇವೆ. ಅದನ್ನು ಜಾರಿಗೊಳಿಸಲು ಬೇಕಾದ ಇಚ್ಛಾಶಕ್ತಿ ಸರ್ಕಾರಕ್ಕೆ ಇದೆಯೇ’ ಎಂದು ಪ್ರಶ್ನಿಸುತ್ತಾರೆ ಕಟ್ಟಡ ನಿರ್ಮಾಣ ತಜ್ಞರು.

ಉಲ್ಲಂಘನೆ– ನಾನಾ ಬಗೆ

lಸೆಟ್‌ ಬ್ಯಾಕ್‌ ಪ್ರದೇಶವನ್ನು ಬಿಡದೇ ಕಟ್ಟಡ ನಿರ್ಮಾಣ

lಎತ್ತರದ ಮಿತಿಗೆ ಸಂಬಂಧಿಸಿದ ಉಲ್ಲಂಘನೆ

lಫ್ಲೋರ್‌ ಏರಿಯಾ ರೇಷಿಯೊ (ಎಫ್‌ಎಎಆರ್‌) ಮಿತಿಯ ಉಲ್ಲಂಘನೆ

lವಾಸಕ್ಕೆ ಸಂಬಂಧಿಸಿದ ಉಲ್ಲಂಘನೆ (ವಸತಿ ಉದ್ದೇಶದ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಇತ್ಯಾದಿ)

lರಾಷ್ಟ್ರೀಯ ಕಟ್ಟಡ ಸಂಹಿತೆ (ಎನ್‌ಬಿಡಿ) ಹಾಗೂ ಭಾರತೀಯ ಗುಣಮಟ್ಟ (ಐಎಸ್‌) ಸಂಹಿತೆ ಉಲ್ಲಂಘನೆ

‘ತಪ್ಪೆಸಗಿದರೆ ದಂಡ: ಇಲ್ಲ ಖಚಿತತೆ’

ಕಟ್ಟಡ ನಿಯಮಗಳಲ್ಲಿ ಇಂತಿಷ್ಟು ಪ್ರಮಾಣದ ಉಲ್ಲಂಘನೆಗೆ ಇಷ್ಟು ದಂಡ ಎಂಬುದನ್ನು ಎಲ್ಲೂ ಉಲ್ಲೇಖಿಸಿಲ್ಲ. ಉಲ್ಲಂಘನೆಗೆ ಬಿಬಿಎಂಪಿ ಕಾಲಕಾಲಕ್ಕೆ ನಿಗದಿಪಡಿಸುವಷ್ಟು ದಂಡ ವಿಧಿಸಬಹುದು ಎಂದು ಉಪವಿಧಿ 6 (ii)ರಲ್ಲಿ ಹೇಳಲಾಗಿದೆ. ಇದನ್ನು ನಿಖರಪಡಿಸುವ ಕಾರ್ಯವೂ ನಡೆದಿಲ್ಲ.

‘ಇದೊಂದು ರೀತಿ ಜಾಣ ಕುರುಡು ಇದ್ದಂತೆ. ಇಂತಹ ಅಸಡ್ಡೆಗಳಿಂದಾಗಿಯೇ ಮಧ್ಯವರ್ತಿಗಳ ಹಾವಳಿಗೆ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸಿದಂತಾಗಿದೆ’ ಎಂದು ವಿಶ್ಲೇಷಿಸುತ್ತಾರೆ ಎಸಿಸಿಇಐ ಕಾರ್ಯದರ್ಶಿ ಅಜಿತ್‌ ಕುಮಾರ್‌.

‘ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ನೀತಿನಿಯಮಗಳನ್ನು ರೂಪಿಸುವ ಸಂದರ್ಭದಲ್ಲಿ ಪರಿಣಿತರ ಸಲಹೆಗಳನ್ನೇನೋ ನೀಡುತ್ತಾರೆ. ಆದರೆ, ಅಂತಿಮವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮಗೆ ಅನುಕೂಲವಾಗುವಂತಹ ಸಲಹೆಗಳನ್ನಷ್ಟೇ ನಿಯಮಗಳಲ್ಲಿ ಅಳವಡಿಸಿಕೊಳ್ಳುತ್ತಾರೆ’ ಎಂದರು.

ಎನ್‌ಬಿಸಿ ಜಾರಿಗೆ ಮೀನಮೇಷ ಏಕೆ?

‘2016ರ ರಾಷ್ಟ್ರೀಯ ಕಟ್ಟಡ ಸಂಹಿತೆಯನ್ನು (ಎನ್‌ಬಿಸಿ) ಕಟ್ಟುನಿಟ್ಟಾಗಿ ಜಾರಿಗೊಳಿಸುವ ಬಗ್ಗೆ ಬಿಬಿಎಂಪಿ ಮೀನಮೇಷ ಎಣಿಸುತ್ತಿದೆ. ಇದು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ತನ್ನಿಂದ ತಾನೆ ಕಡಿವಾಣ ಬೀಳಲಿದೆ’ ಎಂದು ಅಭಿಪ್ರಾಯಪಡುತ್ತಾರೆ ಶ್ರೀಕಾಂತ್ ಎಸ್‌.ಚನ್ನಾಳ.

‘ಎನ್‌ಬಿಸಿಯ ಪ್ರಕಾರ ಕಟ್ಟಡ ಯೋಜನೆಗೆ ಮಂಜೂರಾತಿಪಡೆಯಲು ಅನೇಕ ರೀತಿಯ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಮಣ್ಣು ಪರೀಕ್ಷೆ ವರದಿ, ಸರ್ವೇ ವರದಿ, ಕಟ್ಟಡ ಸಂರಚನೆಯ ವಿನ್ಯಾಸ, ಎತ್ತರಕ್ಕೆ ಸಂಬಂಧಿಸಿದ ತಾಂತ್ರಿಕ ವಿವರಗಳ ಜೊತೆಗೆ ಅದಕ್ಕೆ ಏನೆಲ್ಲ ಸಾಮಗ್ರಿ ಬಳಸಲಾಗುತ್ತದೆ, ನಿರ್ಮಾಣ ಕಾರ್ಯದಲ್ಲಿ ಯಾವೆಲ್ಲ ತಂತ್ರಜ್ಞರ ಸೇವೆ ಪಡೆಯಲಾಗುತ್ತದೆ ಎಂಬ ವಿವರಗಳನ್ನೂ ಒದಗಿಸಬೇಕು. ನೋಂದಾಯಿತ ತಂತ್ರಜ್ಞರೇ ಈ ಕುರಿತ ಪ್ರಮಾಣಪತ್ರ ನೀಡಬೇಕು. ಇದು ಕಟ್ಟಡ ಮಾಲೀಕರು ಹಾಗೂ ಅದನ್ನು ಪ್ರಮಾಣೀಕರಿಸುವ ತಂತ್ರಜ್ಞರ ಮೇಲಿನ ಹೊಣೆಯನ್ನು ಹೆಚ್ಚಿಸಲಿದೆ’ ಎಂದು ಅವರು ವಿವರಿಸಿದರು.

‘ಕಟ್ಟಡ ನಿರ್ಮಿಸಲು ಬಿಬಿಎಂಪಿಯಿಂದ ಮಂಜೂರಾತಿ ಪಡೆದರೆ ಸಾಲದು, ಅದಕ್ಕೆ ಸ್ಥಳೀಯ ಜನಪ್ರತಿನಿಧಿಯ ಅಥವಾ ಅವರ ಚೇಲಾಗಳ ಅಪ್ಪಣೆಯನ್ನೂ ಪಡೆಯಬೇಕಾದ ಸ್ಥಿತಿ ಇದೆ. ಇದಕ್ಕೆ ಮೊದಲು ಕಡಿವಾಣ ಹಾಕಬೇಕು’ ಎಂದು ಅವರು ಒತ್ತಾಯಿಸಿದರು.

ಜಯನಗರ ಏಳನೇ ಬ್ಲಾಕ್‌ನ ನ್ಯಾಷನಲ್‌ ಕಾಲೇಜು ಬಳಿ 20X38 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ ನಕ್ಷೆ ಮಂಜೂರಾತಿ ಇಲ್ಲದೆಯೇ ಆರು ಅಂತಸ್ತುಗಳ ಕಟ್ಟಡ ನಿರ್ಮಿಸುತ್ತಿದ್ದರೂ ಸ್ವತ್ತಿನ ಮಾಲೀಕರಾದ ಶಾಂತಾ ದೇವರಾಜ್‌ ವಿರುದ್ಧ ಕ್ರಮಕೈಗೊಳ್ಳದ ಆರೋಪದ ಮೇರೆಗೆ ಬನಶಂಕರಿ ಉಪವಿಭಾಗದಲ್ಲಿ ಕಾರ್ಯಪಾಲಕ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿದ್ದ ಜೆ.ಆರ್.ಭಾಸ್ಕರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆಗಿದ್ದ ಎಂ.ಬಿ.ಜಯಕುಮಾರ್‌, ಆರ್‌.ಮಧು, ಸಹಾಯಕ ಎಂಜಿನಿಯರ್‌ ಆಗಿದ್ದ ಪ್ರದೀಪ್‌ ವಿರುದ್ಧ ಬಿಬಿಎಂಪಿ ಆರೋಪಪಟ್ಟಿ ಸಿದ್ಧಪಡಿಸಿದೆ.

ಈ ಅಧಿಕಾರಿಗಳ ವಿರುದ್ಧ ಉತ್ತರಹಳ್ಳಿಯ ನಿವಾಸಿ ಶಶಿಕುಮಾರ್‌ ಅವರು ನೀಡಿದ ದೂರಿನ ಅನ್ವಯ ಕರ್ನಾಟಕ ನಾಗರಿಕ ಸೇವಾ ನಿಯಮ (ನಡತೆ) ಅಡಿ ಬಿಬಿಎಂಪಿ ವಿಚಾರಣೆ ಕೈಗೆತ್ತಿಕೊಂಡಿದೆ.

‘ಈ ನಾಲ್ವರು ಅಧಿಕಾರಿಗಳ ವಿರುದ್ಧ ಬಿಬಿಎಂಪಿ ವಿಚಾರಣೆ ನಡೆಸುವುದಕ್ಕೆ ನಾಲ್ಕು ವರ್ಷ ಹೋರಾಟ ನಡೆಸಬೇಕಾಯಿತು. ಕಾನೂನು ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಿಸಿರುವ ಕುರಿತು 2017ರ ನ.2ರಂದು ಬಿಬಿಎಂಪಿ ಆಯುಕ್ತರಿಗೆ ದೂರು ನೀಡಿದ್ದೆ. ನಿಯಮ ಉಲ್ಲಂಘಿಸಿ ನಿರ್ಮಿಸಿದ ಭಾಗವನ್ನು ಕೆಡಹುವಂತೆ ಬಿಬಿಎಂಪಿ 2018ರ ಜುಲೈ 28ರಂದು ಆದೇಶ ಮಾಡಿತು. ಇಲ್ಲಿ ಅಧಿಕಾರಿಗಳು ಮತ್ತೊಂದು ತಪ್ಪೆಸಗಿದ್ದರು. ಈ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿತ್ತು. ಆದರೂ ವಸತಿ ಉದ್ದೇಶದ ಕಟ್ಟಡ ಎಂದು ನಮೂದಿಸಿ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿದ್ದರು. ಇವೆಲ್ಲವೂ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ನಡೆಸುವ ತಪ್ಪುಗಳು. ಈ ರೀತಿ ಕರ್ತವ್ಯ ಲೋಪ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು’ ಎನ್ನುತ್ತಾರೆ ಶಶಿಕುಮಾರ್.

‘ಹೇಗೆ ನಿಯಮ ಉಲ್ಲಂಘನೆ ಮಾಡಬಹುದು ಎಂದು ಅಧಿಕಾರಿಗಳೇ ದಾರಿ ತೋರಿಸುತ್ತಾರೆ. ಇಂತಹ ತಪ್ಪು ಮಾಡುವ ಅಧಿಕಾರಿಗಳಿಗೆ ಪಾಠ ಆಗಬೇಕು. ಆ ಕಾರಣಕ್ಕಾಗಿಯೇ ನಾನು ಈ ಪ್ರಕರಣ ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದೇನೆ’ ಎಂದು ಅವರು ತಿಳಿಸಿದರು.

lಸ್ವಾಧೀನಾನುಭವ ಪ್ರಮಾಣ ಪತ್ರ (ಒ.ಸಿ.) ನೀಡುವುದಕ್ಕೂ ಕಟ್ಟಡ ಉಲ್ಲಂಘನೆಗೂ ಸಂಬಂಧ ಕಲ್ಪಿಸಬಾರದು. ಕಟ್ಟಡ ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೂ ಒ.ಸಿ. ನೀಡಬಹುದು. ಆದರೆ, ಅದನ್ನು ಸರಿಪಡಿಸುವವರೆಗೂ ಪ್ರತಿ ವರ್ಷ ದಂಡ ಅಥವಾ ಹೆಚ್ಚುವರಿ ತೆರಿಗೆ ವಿಧಿಸಬೇಕು. ಇದರಿಂದ ಬಿಬಿಎಂಪಿಗೆ ಪ್ರತಿ ವರ್ಷವು ದಂಡದ ರೂಪದಲ್ಲಿ ಹೆಚ್ಚಿನ ವರಮಾನವೂ ಬರಲಿದೆ. ಪ್ರತಿ ವರ್ಷವೂ ದಂಡ ತೆರುವ ಭಯದಿಂದ ಉಲ್ಲಂಘನೆಯೂ ಕಡಿಮೆ ಆಗಲಿದೆ. ತಪ್ಪು ಸರಿಪಡಿಸುವುದಕ್ಕೆ ಮಾಲೀಕರಿಗೆ ಅವಕಾಶವೂ ಸಿಗಲಿದೆ.

lಸ್ವಾಧೀನಾನುಭವ ಪತ್ರದಲ್ಲೇ ‘ಇದು ನಿಯಮ ಉಲ್ಲಂಘಿಸಿದ ಕಟ್ಟಡ’ ಎಂದು ನಮೂದಿಸಬೇಕು. ಆಗ ಅದರ ಮಾರುಕಟ್ಟೆ ಮೌಲ್ಯ ಕಡಿಮೆ ಆಗಲಿದೆ.

lಬೇರೆ ಬೀದಿ ಗಳಲ್ಲಿ ಸರ್ವೆ ನಡೆಸಿ ಅಲ್ಲಿಗೆ ವಾಸ್ತವದಲ್ಲಿ ಕಟ್ಟಡಗಳು ಹೇಗಿವೆ ಎಂಬುದನ್ನು ಆಧರಿಸಿ ನಿರ್ದಿಷ್ಟ ಎಫ್‌ಎಆರ್ ನಿಗದಿಪಡಿಸಬೇಕು.

lಸ್ವಾಧೀನಾನುಭವ ಪತ್ರ ಇಲ್ಲದ ಕಟ್ಟಡಗಳಿಗೆ ವಿದ್ಯುತ್‌, ಕುಡಿಯುವ ನೀರು ಹಾಗೂ ಒಳಚರಂಡಿ ಸಂಪರ್ಕ ಕಲ್ಪಿಸಬಾರದು.

lನಿಯಮಬದ್ಧವಾಗಿ ಕಟ್ಟಡ ನಿರ್ಮಿಸಿದವರಿಗೆ ತೆರಿಗೆ ವಿನಾಯಿತಿ ಅಥವಾ ಇತರ ರೂಪದಲ್ಲಿ ಉತ್ತೇಜನ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.