ಚಿನ್ನ, ಬೆಳ್ಳಿ
ಬೆಂಗಳೂರು: ಬೀಗ ಹಾಕಿರುವ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಧನ್ ಪಾಲ್ (48) ಬಂಧಿತ ಆರೋಪಿ. ಈತನಿಂದ ₹15.70 ಲಕ್ಷ ಮೌಲ್ಯದ 136 ಗ್ರಾಂ ಚಿನ್ನದ ಗಟ್ಟಿ ಮತ್ತು 1.653 ಕೆ.ಜಿ. ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿ ಮನು ಎಂಬಾತನ ಪತ್ತೆಗೆ ಶೋಧ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡಿನಿಂದ ನಗರಕ್ಕೆ ಬಂದು ಲಾಡ್ಜ್‌ಗಳಲ್ಲಿ ತಂಗುತ್ತಿದ್ದ ಆರೋಪಿ, ಮನು ಜೊತೆಗೂಡಿ ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ. ಕೃತ್ಯದ ಬಳಿಕ ತಮಿಳುನಾಡಿಗೆ ಪರಾರಿಯಾಗುತ್ತಿದ್ದ. ಕಳೆದ ತಿಂಗಳು ಹುಳಿಮಾವಿನ ಅಕ್ಷಯ್ ನಗರದ ಮನೆಯೊಂದರಲ್ಲಿ ಯಾರೂ ಇಲ್ಲದಿದ್ದ ವೇಳೆ, ಬೀಗ ಒಡೆದು 33 ಗ್ರಾಂ ಚಿನ್ನ ಹಾಗೂ 40 ಗ್ರಾಂ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ಧಾರೆ.
ಕದ್ದ ಚಿನ್ನಾಭರಣವನ್ನು ಸ್ನೇಹಿತರಿಗೆ ಹಾಗೂ ಗಿರವಿ ಅಂಗಡಿಯಲ್ಲಿ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ. ಅನುಮಾನ ಬಾರದೆಂಬ ಕಾರಣಕ್ಕೆ ಬನ್ನೇರುಘಟ್ಟ ಮುಖ್ಯರಸ್ತೆಯ ನೈಸ್ ರಸ್ತೆಯ ಪಕ್ಕದ ಖಾಲಿ ಜಾಗದ ಮರದ ಕೆಳಗೆ ಸುಮಾರು ಒಂದು ಕೆ.ಜಿ.ಗಿಂತ ಹೆಚ್ಚು ಬೆಳ್ಳಿ ವಸ್ತುಗಳನ್ನು ಬಚ್ಚಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಹುಳಿಮಾವು ಹಾಗೂ ಮೈಸೂರಿನ ವಿಜಯನಗರದಲ್ಲಿ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಧನ್ ಪಾಲ್ಗೆ ಮತ್ತೊಬ್ಬ ಆರೋಪಿ ಮನು ಎಂಬಾತನ ಪರಿಚಯವಾಗಿತ್ತು. ಜೈಲಿನಿಂದ ಬಿಡುಗಡೆಯಾದ ಬಳಿಕ ಇಬ್ಬರೂ ಸೇರಿಕೊಂಡು ಕಳ್ಳತನ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಮಾಹಿತಿ ನೀಡಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.