ADVERTISEMENT

ಬಸ್‌ಗಳಲ್ಲಿ ಬೆಂಕಿ ಅವಘಡ ಉಂಟಾಗದಂತೆ ಕ್ರಮಕ್ಕೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

ರಸ್ತೆ ಸಾರಿಗೆ ಮತ್ತು ಸುರಕ್ಷತೆ ಆಯುಕ್ತರಿಗೆ, ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸಾರಿಗೆ ಸಚಿವ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 16:00 IST
Last Updated 26 ಅಕ್ಟೋಬರ್ 2025, 16:00 IST
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ   

ಬೆಂಗಳೂರು: ಖಾಸಗಿ ಮತ್ತು ನಿಗಮಗಳ ಬಸ್‌ಗಳಲ್ಲಿ ಬೆಂಕಿ ಅವಘಡ ಉಂಟಾಗದಂತೆ ಕ್ರಮ ಕೈಗೊಳ್ಳಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ರಸ್ತೆ ಸಾರಿಗೆ ಮತ್ತು ಸುರಕ್ಷತೆ ಆಯುಕ್ತರಿಗೆ, ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಬಸ್‌ಗಳಲ್ಲಿ ಯಾವುದೇ ವಾಣಿಜ್ಯ ಸರಕು, ಲಗೇಜ್ ಸಾಗಿಸುವ ಸಂದರ್ಭದಲ್ಲಿ ಬೆಂಕಿ ತಗುಲಿ ಸರಳವಾಗಿ ಉರಿಯುವ ವಸ್ತುಗಳು ಅಥವಾ ಇತರೆ ಸ್ಫೋಟಕ ವಸ್ತುಗಳನ್ನು ಸಾಗಿಸದಂತೆ ನಿಗಾ ವಹಿಸಬೇಕು. ಎಲ್ಲ ಎಸಿ ಬಸ್‌ಗಳಲ್ಲಿ ತುರ್ತು ಸಂದರ್ಭಗಳಲ್ಲಿ ಕಿಟಕಿಗಳನ್ನು ಒಡೆಯುವುದಕ್ಕೆ ನೆರವಾಗುವ ಸುತ್ತಿಗೆಗಳನ್ನು ಕಡ್ಡಾಯವಾಗಿ ಇರಿಸಬೇಕು. ಲಗೇಜ್ ಸಾಗಿಸುವ ಜಾಗದಲ್ಲಿ ಯಾವುದೇ ವ್ಯಕ್ತಿ ಮಲಗಲು ಅವಕಾಶ ನೀಡಬಾರದು. ಬಸ್ಸುಗಳ ನವೀಕರಣ‌ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸಚಿವರು ಸೂಚಿಸಿದ್ದಾರೆ.

ಇತ್ತೀಚೆಗೆ ಕರ್ನೂಲ್ ಬಸ್ ದುರಂತ ತೀವ್ರ ದುಃಖಕರವಾದ ಸಂಗತಿ. ಈ ಹಿಂದೆ ನಾನು ಸಾರಿಗೆ ಸಚಿವನಾಗಿದ್ದಾಗ ಹಾವೇರಿ ಬಳಿ ಇದೇ ರೀತಿ ಖಾಸಗಿ ಬಸ್‌ನಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿ ಹಲವರು ಪ್ರಾಣ ಕಳೆದುಕೊಂಡಿದ್ದರು. ಆಗ ಸಾರಿಗೆ ಸಂಸ್ಥೆಗಳ ಬಸ್‌ಗಳು, ಕಾಂಟ್ರ್ಯಾಕ್ಟ್‌ ಕ್ಯಾರೇಜ್‌ ಬಸ್‌ಗಳು, ಖಾಸಗಿ ಟೂರಿಸ್ಟ್ ಬಸ್‌ಗಳು, ಟೆಂಪೊ ಟ್ರಾವೆಲರ್ಸ್‌‌, ಶಾಲಾ ವಾಹನಗಳಿಗೆಲ್ಲ ತುರ್ತು ನಿರ್ಗಮನ ದ್ವಾರಗಳನ್ನು ಕಡ್ಡಾಯ ಅಳವಡಿಸುವಂತೆ ಆದೇಶಿಸಿದ್ದೆ. ಸಮರ್ಪಕವಾಗಿ ದ್ವಾರ ಕೆಲಸ ಮಾಡುತ್ತಿರುವ ಬಗ್ಗೆ ಪರಿಶೀಲಿಸಲು ಅಭಿಯಾನ ಮಾಡಲಾಗಿತ್ತು. ಇದರಿಂದ ಹಲವು ಬಸ್ಸುಗಳಲ್ಲಿನ ದೋಷಗಳು ಗಮನಕ್ಕೆ‌‌ ಬಂದು ತುರ್ತು ನಿರ್ಗಮನ ದ್ವಾರಗಳ ಅಳವಡಿಕೆ‌ ಕಡ್ಡಾಯವಾಯಿತು ಎಂದು ನೆನಪು ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.