ಜಿಬಿಎ
ಬೆಂಗಳೂರು: ತೆರಿಗೆ ಸಂಗ್ರಹ ಸೇರಿದಂತೆ ಕಂದಾಯ ವಿಭಾಗದಲ್ಲಿರುವ ಕೆಲಸಗಳು ಸಕಾಲದಲ್ಲಿ ಆಗುತ್ತಿಲ್ಲದಿದ್ದರೂ, ಉದ್ದಿಮೆ ಪರವಾನಗಿಯನ್ನೂ ಕಂದಾಯ ವಿಭಾಗಕ್ಕೆ ವಹಿಸಬೇಕು ಎಂಬ ಪೂರ್ವ ನಗರ ಪಾಲಿಕೆ ಆಯುಕ್ತರ ಆದೇಶಕ್ಕೆ ಪ್ರತಿರೋಧ ವ್ಯಕ್ತವಾಗಿದೆ.
‘ಆರೋಗ್ಯ ಇಲಾಖೆಯ ಉದ್ದಿಮೆ ಪರವಾನಗಿಯ ಲಾಗಿನ್ ಐಡಿಯನ್ನು ಕಂದಾಯ ವಿಭಾಗದ ಸಿಬ್ಬಂದಿಗೆ ನೀಡಬೇಕು’ ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು ಜಿಬಿಎ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಐದು ನಗರ ಪಾಲಿಕೆ ವ್ಯಾಪ್ತಿಯ ಆಯುಕ್ತರಡಿಯ ಕಂದಾಯ ವಿಭಾಗದ ಹೆಚ್ಚುವರಿ ಆಯುಕ್ತರಿಗೆ ಆರೋಗ್ಯ ವಿಭಾಗದ ಸಾರ್ವಜನಿಕ ಆರೋಗ್ಯ ವಿಭಾಗ ಮತ್ತು ಉದ್ದಿಮೆ ಪರವಾನಗಿ ವಿತರಿಸುವ ಅಧಿಕಾರವನ್ನು ಪತ್ಯಾಯೋಜಿಸಲಾಗಿದೆ. ಅದರಂತೆ, ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಕೋರಿ ಲಾಗಿನ್‌ನಲ್ಲಿ ಸಲ್ಲಿಸುವ ಅರ್ಜಿಗಳನ್ನು ಪರಿಣಾಮಕಾರಿಯಾಗಿ ವಿತರಿಸಲು ಕಂದಾಯ ವಿಭಾಗದ ಹೆಚ್ಚುವರಿ ಆಯುಕ್ತರಿಗೆ ಲಾಗಿನ್ ಸೃಜಿಸಬೇಕು ಎಂದು ಕೋರಿದ್ದಾರೆ.
‘ಜಿಬಿಎ ಕಾಯ್ದೆಯಂತೆ ಕೆಲವು ಉದ್ದಿಮೆ ಪರವಾನಗಿಗಳನ್ನು ಮಾತ್ರ ಆರೋಗ್ಯ ವಿಭಾಗದಿಂದ ನೀಡಬಹುದಾಗಿದೆ. ಆದರೆ, ಎಲ್ಲ ರೀತಿಯ ಉದ್ದಿಮೆ ಪರವಾನಗಿಯನ್ನು ನೀಡಲು ಅವಕಾಶವಿಲ್ಲ’ ಎಂದು ಜಿಬಿಎ ಆರೋಗ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಬಿಎ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಾಮಚಂದ್ರನ್ ಅವರ ಪ್ರತಿಕ್ರಿಯೆಗೆ ಸಂಪರ್ಕಿಸಿದಾಗ ಅವರು ಸ್ಪಂದಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.