ಸಾಂದರ್ಭಿಕ ಚಿತ್ರ
– ಐ ಸ್ಟಾಕ್ ಚಿತ್ರ
ಬೆಂಗಳೂರು: ಉದ್ಯಮಿಯ ಮನೆಯಲ್ಲಿದ್ದ ₹1.27 ಕೋಟಿ ಮೌಲ್ಯದ ಚಿನ್ನಾಭರಣ, ₹10 ಲಕ್ಷ ಮೌಲ್ಯದ ವಾಚುಗಳ ಕಳ್ಳತನವಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸದಾಶಿವನಗರ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸದಾಶಿವನಗರದ ನಿವಾಸಿ ಅಭಿಷೇಕ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.
ಡಿ.30ರಂದು ಹೊಸ ವರ್ಷದ ಸಂಭ್ರಮಾಚರಣೆಗೆಂದು ಕೊಯಮತ್ತೂರಿಗೆ ಅಭಿಷೇಕ್ ಕುಟುಂಬವು ತೆರಳಿತ್ತು. ಆಗ ಕಳ್ಳತನವಾಗಿದೆ ಎಂದು ದೂರು ನೀಡಲಾಗಿದೆ.
ಮನೆ ಕೆಲಸ ಮಾಡುತ್ತಿದ್ದ ಹಾಜಿರಾ ಅವರ ಬಳಿ ಮನೆಯ ಒಂದು ಕೀಯನ್ನು ಕೊಟ್ಟಿದ್ದ ಅಭಿಷೇಕ್ ಅವರು, ಅದನ್ನು ತಮ್ಮ ಅತ್ತೆಗೆ ನೀಡುವಂತೆ ಸೂಚಿಸಿದ್ದರು. ಆದರೆ, ಅಂದು ಸಂಜೆಯಾದರೂ ಮನೆಯ ಕೀಯನ್ನು ಅತ್ತೆಗೆ ಹಾಜಿರಾ ಅವರು ನೀಡಿರಲಿಲ್ಲ. ಅನುಮಾನ ಬಂದು ಹಾಜಿರಾಗೆ ಅಭಿಷೇಕ್ ಕರೆ ಮಾಡಿದ್ದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಕಾರು ಚಾಲಕನಿಗೆ ಕರೆ ಮಾಡಿ ಮನೆಯ ಬಳಿಗೆ ಹೋಗಿ ಪರಿಶೀಲನೆ ನಡೆಸುವಂತೆ ತಿಳಿಸಿದ್ದರು. ಅವರು ಮನೆಗೆ ತೆರಳಿ ಪರಿಶೀಲಿಸಿದಾಗ, ಮನೆಯ ಕಬೋರ್ಡ್‌ಗಳು ತೆರೆದಿರುವುದು ಕಂಡುಬಂದಿತ್ತು. ಅಭಿಷೇಕ್ ಅವರು ಪ್ರವಾಸ ಮುಗಿಸಿ ಮನೆಗೆ ಬಂದು ನೋಡಿದಾಗ ₹1.27 ಕೋಟಿ ಮೌಲ್ಯದ 979 ಗ್ರಾಂ ಚಿನ್ನಾಭರಣ ಹಾಗೂ ₹10 ಲಕ್ಷ ಮೌಲ್ಯದ ವಾಚ್‌ಗಳ ಕಳ್ಳತನ ಮಾಡಿರುವುದು ಕಂಡು ಬಂದಿತ್ತು ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.