ADVERTISEMENT

ಕುಂಟುತ್ತಾ ಸಾಗಿದ ಕಾಮಗಾರಿ: ತಪ್ಪದ ಕಿರಿಕಿರಿ

ಕಾವೇರಿ ಐದನೇ ಹಂತದಲ್ಲಿ 110 ಗ್ರಾಮಗಳಿಗೆ ನೀರು ಪೂರೈಕೆ ಯೋಜನೆ l ಇನ್ನೂ ಮುಗಿಯದ ಟೆಂಡರ್‌ ಪ್ರಕ್ರಿಯೆ

ಗುರು ಪಿ.ಎಸ್‌
Published 16 ಫೆಬ್ರುವರಿ 2020, 20:50 IST
Last Updated 16 ಫೆಬ್ರುವರಿ 2020, 20:50 IST
ಜೀವನ್‌ ಬಿಮಾನಗರ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ನಡೆಯುತ್ತಿದೆ  –ಪ್ರಜಾವಾಣಿ ಚಿತ್ರ
ಜೀವನ್‌ ಬಿಮಾನಗರ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ನಡೆಯುತ್ತಿದೆ  –ಪ್ರಜಾವಾಣಿ ಚಿತ್ರ   
""

ಬೆಂಗಳೂರು: ಕಾವೇರಿ ಐದನೇ ಹಂತದ ಯೋಜನೆಯಡಿ ಬಿಬಿಎಂಪಿ ಹೊರವಲಯದ 110 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಕಾಮಗಾರಿ ಕುಂಟುತ್ತಾ ಸಾಗಿದೆ. ಈ ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರಿನ ಕೊಳವೆಗಳನ್ನು 2019ರ ಮೇ ಒಳಗೆ ಅಳವಡಿಸುವುದಾಗಿ ಜಲಮಂಡಳಿಯು ಹೇಳಿತ್ತು. 2020 ಆರಂಭವಾದರೂ ಈ ಕಾರ್ಯ ಪೂರ್ಣಗೊಂಡಿಲ್ಲ.

ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವರ್ತೂರು, ಬಡಗೆರೆ, ಗುಂಜೂರು ವ್ಯಾಪ್ತಿಯಲ್ಲಿ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಗುಂಜೂರು ಮುಖ್ಯರಸ್ತೆಗಳಲ್ಲಿ ಕಾಮಗಾರಿ ಮುಗಿದಿದ್ದು, ಒಳರಸ್ತೆಗಳಲ್ಲಿ ಸಾಗಿದೆ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶೆಟ್ಟಿಹಳ್ಳಿ, ಸೋಮನಹಳ್ಳಿ ಸೇರಿದಂತೆ ಸುತ್ತ–ಮುತ್ತಲಿನ ಗ್ರಾಮಗಳಲ್ಲಿ ಕಾಮಗಾರಿ ಸಾಗಿದೆ. ವಿಳಂಬಗತಿಯ ಕಾಮಗಾರಿಯಿಂದಸಾರ್ವಜನಿಕರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

‘ಒಟ್ಟು, 2,661 ಕಿ.ಮೀ. ಮಾರ್ಗದ ಪೈಕಿ 70 ಕಿ.ಮೀ. ಉದ್ದವರೆಗೆ ಪೈಪ್‌ಲೈನ್‌ ಅಳವಡಿಕೆ ಕಾರ್ಯ ಮಾತ್ರ ಬಾಕಿ ಇದೆ ಎಂದು ಕಳೆದ ತಿಂಗಳು ಜಲಮಂಡಳಿ ತಿಳಿಸಿತ್ತು. ಆದರೆ, ಕಾಮಗಾರಿ ತೀರಾ ನಿಧಾನಗತಿಯಲ್ಲಿ ಸಾಗುತ್ತಿದ್ದು, ಒಂದೂವರೆ ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿದ್ದೇವೆ’ ಎನ್ನುತ್ತಾರೆ ಈ ಕಾಮಗಾರಿ ನಡೆಯುವ ಗ್ರಾಮಗಳ ನಿವಾಸಿಗಳು.

ADVERTISEMENT

ಅನುಷ್ಠಾನದಲ್ಲಿ ಸಮಸ್ಯೆ:‘ಒಂದು ಊರಿನಲ್ಲಿ ಸಂಪೂರ್ಣ ಕೆಲಸ ಪೂರ್ಣಗೊಂಡ ನಂತರ, ಪಕ್ಕದ ಗ್ರಾಮದಲ್ಲಿ ಕಾಮಗಾರಿ ಕೈಗೊಳ್ಳಿ. ಆಗ ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಗುವುದಿಲ್ಲ ಎಂದು ಜಲಮಂಡಳಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಆದರೆ, ಅವರು ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಏಕಕಾಲಕ್ಕೆ ಹಲವು ಕಡೆ ಕಾಮಗಾರಿ ಸಾಗಿರುವುದರಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ’ ಎಂದು ‘ವರ್ತೂರು ರೈಸಿಂಗ್‌’ನ ಜಗದೀಶ ರೆಡ್ಡಿ ದೂರಿದರು.

‘ಪೈಪ್‌ಲೈನ್‌ ಅಳವಡಿಸಿದ ನಂತರ ಆ ರಸ್ತೆಯನ್ನು ದುರಸ್ತಿ ಮಾಡಿ ಸ್ಥಳೀಯರೇ ಹೇಳುತ್ತಾರೆ. ರಸ್ತೆ ದುರಸ್ತಿ ನಂತರ ಮತ್ತೆ ಯಾವುದಾದರೂ ಕಾಮಗಾರಿ ಆರಂಭವಾದರೆ ಸಮಯ ಮತ್ತು ಹಣ ವ್ಯರ್ಥವಾಗುತ್ತದೆ. ಬಿಬಿಎಂಪಿ ಸೂಚನೆ ನೀಡಿದ ನಂತರವೇ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಆದರೆ, ಬಿಬಿಎಂಪಿಯಿಂದ ಈ ನಿಟ್ಟಿನಲ್ಲಿ ಯಾವುದೇ ಸೂಚನೆ ಬರುತ್ತಿಲ್ಲ. ಹೀಗಾಗಿ, ಕೆಲವು ಕಡೆ ಸಮಸ್ಯೆ ಉಂಟಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.

‘ಏಪ್ರಿಲ್‌ನಲ್ಲಿ ಎಲ್ಲ ಪ್ಯಾಕೇಜ್‌ಗಳ ಟೆಂಡರ್‌ ಪೂರ್ಣ‘
‘110 ಗ್ರಾಮಗಳಿಗೆ ಕಾವೇರಿ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಒಟ್ಟು 13 ಪ್ಯಾಕೇಜ್‌

ಗಳಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಈ ಪೈಕಿ ಎರಡು ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆ ಸಂಪೂರ್ಣ ಮುಗಿದಿದ್ದು, ಕೆಲಸ ನಡೆಯುತ್ತಿದೆ. ಮೂರು ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ. 2020ರ ಏಪ್ರಿಲ್‌ ವೇಳೆಗೆ ಎಲ್ಲ ಪ್ಯಾಕೇಜ್‌ಗಳ ಟೆಂಡರ್‌ ಪ್ರಕ್ರಿಯೆ ಮುಗಿಯಲಿದ್ದು, ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಆರಂಭವಾಗಲಿದೆ’ ಎಂದು ಜಲಮಂಡಳಿಯ ಅಧ್ಯಕ್ಷ ತುಷಾರ್‌ ಗಿರಿನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಟೆಂಡರ್‌ ಪ್ರಕ್ರಿಯೆಯೇ ಮುಗಿದಿಲ್ಲ ಎಂದರೆ ಕೆಲಸ ನಡೆಯುತ್ತಿಲ್ಲ ಎಂದು ಅರ್ಥವಲ್ಲ. ಭೌತಿಕ ಪ್ರಗತಿಯನ್ನು ಮಾತ್ರವೇ ಕಾಮಗಾರಿ ಎಂದು ಪರಿಗಣಿಸಬಾರದು. ಒಪ್ಪಂದಕ್ಕೆ ಸಹಿ ಹಾಕಿದ ದಿನದಿಂದಲೇ ಕೆಲಸ ಪ್ರಾರಂಭವಾಗಿದೆ. ಯೋಜನೆಯ ಅನುಷ್ಠಾನಕ್ಕೆ ಬೇಕಾದ ಸಿದ್ಧತೆಗಳು ನಡೆಯುತ್ತಿವೆ. ಕಾಮಗಾರಿ ಸಂಪೂರ್ಣ ಮುಗಿದಿರುವ ಕಡೆಗಳಲ್ಲಿ ನೀರು ಪೂರೈಸಲಾಗುತ್ತಿದೆ’ ಎಂದು ಅವರು ಹೇಳಿದರು.

‘ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಯಿಂದ (ಜೈಕಾ) ಹಣ ಬಿಡುಗಡೆ ವಿಳಂಬವಾಗುತ್ತಿರುವುದರಿಂದ ಕಾಮಗಾರಿಯೂ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬುದು ಸುಳ್ಳು. ಯೋಜನೆಯ ಪ್ರಗತಿ ಆಧರಿಸಿ ಅವರು ಹಣ ಬಿಡುಗಡೆ ಮಾಡುತ್ತಿದ್ದಾರೆ. ಹಣದ ಕೊರತೆ ಇಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.