ಬೆಂಗಳೂರು: ಜಲಮಂಡಳಿಯ ಕಾವೇರಿ ಐದನೇ ಹಂತದ ಕೊಳವೆ ಮಾರ್ಗದ ಚೇಂಬರ್‌ಗೆ ಬಿದ್ದು 9ನೇ ತರಗತಿಯ ವಿದ್ಯಾರ್ಥಿ ಪ್ರೀತಂ (14) ಮೃತಪಟ್ಟ ಪ್ರಕರಣದ ತನಿಖೆಗೆ ಜಲಮಂಡಳಿಯು ಮೂವರು ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಫೆಬ್ರುವರಿ 5ರ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಾತಗುಣಿ ಎಂಬಲ್ಲಿ ಘಟನೆ ನಡೆದಿತ್ತು.
ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಬಾಲಕನ ಸಾವು ಸಂಭವಿಸಿದೆ ಎಂಬ ಆರೋಪವಿದ್ದು, ತನಿಖೆಗೆ ಸಮಿತಿ ರಚಿಸಲಾಗಿದೆ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ.
ಕನಕಪುರ ರಸ್ತೆಯಲ್ಲಿ ಕಾವೇರಿ ನೀರು ಪೂರೈಕೆ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಈ ವೇಳೆ ಕಗ್ಗಲೀಪುರದಲ್ಲಿ ಚೇಂಬರ್ ತೆಗೆದು ಹಾಗೆಯೇ ಬಿಡಲಾಗಿತ್ತು. ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಈ ನಡುವೆ ಪ್ರೀತಂ ನಾಲ್ಕು ದಿನದ ಹಿಂದೆಯೇ ಚೇಂಬರ್ ಬಳಿ ಹೋದಾಗ ಬಿದ್ದಿದ್ದ. ಅಂದು ಸಂಜೆಯಾದರೂ ಬಾಲಕ ಮನೆಗೆ ಬಾರದೇ ಇದ್ದಾಗ ಆತಂಕಗೊಂಡ ಪೋಷಕರು ನಾಪತ್ತೆ ದೂರು ನೀಡಿದ್ದರು. ಕಗ್ಗಲೀಪುರ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಚೇಂಬರ್ ಬಳಿಯೇ ವಾಸನೆ ಬಂದಿದ್ದರಿಂದ ಹುಡುಕಾಟ ನಡೆಸಿದಾಗ ಆತನ ಶವ ಪತ್ತೆಯಾಗಿತ್ತು.
‘ಈ ಹಿಂದೆಯೇ ಚೇಂಬರ್ ತೆರೆದಿರುವುದು, ಸುರಕ್ಷತಾ ಕ್ರಮ ವಹಿಸದ ಬಗ್ಗೆ ಜಲಮಂಡಳಿಗೆ ದೂರು ನೀಡಿದ್ದೆವು. ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಮ್ಮ ಮಗನನ್ನು ಕಳೆದುಕೊಳ್ಳುವಂತಾಯಿತು’ ಎಂದು ತಾಯಿ ಪುಷ್ಪಾ ಹಾಗೂ ಕುಟುಂಬದವರು ಕಣ್ಣೀರಿಟ್ಟರು.
ವರದಿ ನಂತರ ಕ್ರಮ: ‘ಘಟನೆಯ ಬಗ್ಗೆ ಪ್ರಧಾನ ಮುಖ್ಯ ಎಂಜಿನಿಯರ್ ಬಿ.ಎಸ್.ದಲಾಯತ್, ಮುಖ್ಯ ಎಂಜಿನಿಯರ್‌ಗಳಾದ ಎ. ರಾಜಶೇಖರ್, ಕೆ.ಎನ್. ಮಹೇಶ್ ನೇತೃತ್ವದಲ್ಲಿ ತನಿಖೆ ನಡೆಸಲು ತಂಡ ನೇಮಿಸಲಾಗಿದೆ. ವರದಿ ಬಂದ ನಂತರ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.