ADVERTISEMENT

ವಿದ್ಯಾರ್ಥಿನಿ ಅಪಹರಣ: ಕೃತ್ಯ ನಡೆದ 12 ತಾಸಿನಲ್ಲೇ ಆರೋಪಿಗಳ ಸೆರೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 18:06 IST
Last Updated 11 ಅಕ್ಟೋಬರ್ 2025, 18:06 IST
<div class="paragraphs"><p>ಬಂಧನ </p></div>

ಬಂಧನ

   

ಬೆಂಗಳೂರು: ಮದುವೆ ಮಾಡಿಕೊಡಲು ನಿರಾಕರಿಸಿದ್ದರು ಎನ್ನುವ ಕಾರಣಕ್ಕೆ ಸಿ.ಎ (ಚಾರ್ಟರ್ಡ್ ಅಕೌಂಟೆಂಟ್) ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಅಪಹರಿಸಿದ್ದ ಐವರು ಆರೋಪಿಗಳನ್ನು ಸುಬ್ರಮಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬೈಕ್‌ ಮೆಕಾನಿಕ್ ಕೆಲಸ ಮಾಡುತ್ತಿದ್ದ ಹೊಸಕೆರೆಹಳ್ಳಿಯ ನಿವಾಸಿ ರಂಗ(23), ಬನಶಂಕರಿಯ ಎರಡನೇ ಹಂತದ ನಿವಾಸಿ, ಆಟೊ ಚಾಲಕ ರಾಜೇಶ್ (26), ತ್ಯಾಗರಾಜನಗರದ ನಿವಾಸಿ, ಸ್ಯಾರಿ ಬಾಕ್ಸ್ ಮೇಕರ್ ಕೆಲಸ ಮಾಡುತ್ತಿದ್ದ ಚಂದನ್, ಪ್ರೀಟಿಂಗ್‌ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದ ಎಸ್‌.ಶ್ರೇಯಸ್‌, ಸ್ಟೀಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್‌ ಬಂಧಿತರು.

ADVERTISEMENT

ಚಿಕ್ಕಸಲ್ಲಂದ್ರದ ಸಿಂಹಾದ್ರಿಲೇಔಟ್‌ನ ನಿವಾಸಿ ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘ಯಶಸ್ವಿನಿ ಕಾಲೇಜಿನ ಸಿ.ಎ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ಹೇಮಾ ಬಿಂದು ಅವರನ್ನು ಮದುವೆ ಮಾಡಿಕೊಡುವಂತೆ ಅವರ ತಾಯಿ ಬಳಿ ಆರೋಪಿ ರಂಗ ಕೇಳಿಕೊಂಡಿದ್ದ. ಎರಡು ಬಾರಿ ಮನೆಗೂ ಬಂದು ಮನವಿ ಮಾಡಿದ್ದ. ಕೊಲೆ ಪ್ರಕರಣವೊಂದರಲ್ಲಿ ರಂಗ ಜೈಲಿಗೆ ಹೋಗಿದ್ದ. ಇದೇ ಕಾರಣಕ್ಕೆ ಮಗಳನ್ನು ಮದುವೆ ಮಾಡಿಕೊಡಲು ಹೇಮಾ ಅವರ ತಾಯಿ ನಿರಾಕರಿಸಿದ್ದರು. ಅ.8ರಂದು ಟೀ ಕುಡಿಯುತ್ತಾ ಇರುವಾಗ ರಾಜೇಶ್, ದರ್ಶನ್‌, ಚಂದನ್‌, ಶ್ರೇಯಸ್‌ ಹಾಗೂ ಯೋಗೇಶ್ ಹಾಗೂ ಮಂಜುನಾಥ್ ಅವರೊಂದಿಗೆ ಬಂದಿದ್ದ ರಂಗ, ಹೇಮಾ ಅವರನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದ’ ಎಂದು ಪೊಲೀಸರು ಹೇಳಿದರು.

ಎರಡು ತಂಡ ರಚನೆ: ವಿದ್ಯಾರ್ಥಿನಿ ತಾಯಿ ನೀಡಿದ ದೂರು ಆಧರಿಸಿ ಆರೋಪಿಗಳ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿತ್ತು. ತಾಂತ್ರಿಕ ಸಾಕ್ಷ್ಯಾಧಾರ ಆಧರಿಸಿ ಘಟನೆ ನಡೆದು 12 ತಾಸಿನ ಒಳಗಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಸುಬ್ರಮಣ್ಯಪುರ ಠಾಣೆಯ ಪೊಲೀಸರು ಯಶಸ್ವಿ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.