ADVERTISEMENT

ಸಚಿವ ಸಂಪುಟ ನಿರ್ಧಾರ: ಬಿಬಿಎಂಪಿ ವಿಭಜನೆ ಮಸೂದೆ ಹಿಂದಕ್ಕೆ

ಪರ್ಯಾಯ ವ್ಯವಸ್ಥೆ ರೂಪಿಸಲು ಚರ್ಚೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 20:28 IST
Last Updated 11 ಜುಲೈ 2019, 20:28 IST
   

ಬೆಂಗಳೂರು: ಬಿಬಿಎಂಪಿಯನ್ನು ಮೂರು ಭಾಗಗಳಾಗಿ ವಿಂಗಡಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದ ಮಸೂದೆಯನ್ನು ಹಿಂದಕ್ಕೆ ಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್‌.ಪಾಟೀಲ ನೇತೃತ್ವದ ಸಮಿತಿ ನೀಡಿದ್ದ ವರದಿ ಶಿಫಾರಸಿನ ಮೇರೆಗೆ ಬಿಬಿಎಂಪಿ ಮೂರು ಭಾಗಗಳಾಗಿ ವಿಂಗಡಿಸಲು ತೀರ್ಮಾನಿಸಿ, ವಿಧಾನಮಂಡಲದಲ್ಲಿ ಮಸೂದೆ ಮಂಡಿಸಿ ಒಪ್ಪಿಗೆ ಪಡೆಯಲಾಗಿತ್ತು. ಇದನ್ನು ಹಿಂದಕ್ಕೆ ಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಮಸೂದೆಯನ್ನು ಹಿಂದೆ ಪಡೆದ ಬಳಿಕ ಪರ್ಯಾಯ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗುವುದು. ಇದರರ್ಥ ಬಿ‌.ಎಸ್‌.ಪಾಟೀಲ ಅವರ ವರದಿಯನ್ನು ತಿರಸ್ಕರಿಸಿದ್ದೇವೆ ಎಂದಲ್ಲ. ಬೇರೆ ಯಾವ ರೀತಿಯಲ್ಲಿ ವರದಿಯನ್ನು ಅನುಷ್ಠಾನ ಮಾಡಬಹುದು ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.

ADVERTISEMENT

ವೈಟ್‌ ಟಾಪಿಂಗ್‌ಗೆ ₹565 ಕೋಟಿ
ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆಯಡಿ ವೈಟ್‌ ಟಾಪಿಂಗ್‌ ಕಾಮಗಾರಿಗಳನ್ನು ಮೂರು ಪ್ಯಾಕೇಜ್‌ಗಳಲ್ಲಿ ಕೈಗೊಳ್ಳಲು ₹565 ಕೋಟಿ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

₹147 ಕೋಟಿ, ₹211 ಮತ್ತು ₹207 ಕೋಟಿ ಹೀಗೆ ಮೂರು ಪ್ಯಾಕೇಜ್‌ಗಳಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಅಲ್ಲದೇ, ಬೆಂಗಳೂರು ಜಿಲ್ಲೆಯ ಬೆಂಗಳೂರು ಉತ್ತರ ತಾಲ್ಲೂಕಿನ ಗಾಣಿಗರಹಳ್ಳಿ ಕೆರೆಯ ಆಧುನೀಕರಣ ಕಾಮಗಾರಿಗೆ ₹ 13 ಕೋಟಿ ಮತ್ತು ಚಿಕ್ಕಬಾಣಾವರ ಕೆರೆಯ ಅಭಿವೃದ್ಧಿಗೆ ₹30 ಕೋಟಿ ಅನುದಾನ ಒದಗಿಸಲು ತೀರ್ಮಾನಿಸಲಾಗಿದೆ ಎಂದರು.

ತ್ಯಾಜ್ಯ ಸಂಸ್ಕರಣೆ ಘಟಕ
ಹೆಸರಘಟ್ಟ ಕೆರೆ ಸುತ್ತಮುತ್ತ ನಗರೀಕರಣ ಹೆಚ್ಚಾಗಿದೆ. ಇದರಿಂದ, ತ್ಯಾಜ್ಯದ ನೀರನ್ನು ಕೆರೆಗಳಿಗೆ ಬೀಡಲಾಗುತ್ತಿದೆ. ಹೆಸರಘಟ್ಟ ಕೆರೆ ಮಾತ್ರವಲ್ಲದೆ, ತಿಪ್ಪಗೊಂಡನಹಳ್ಳಿ ಕೆರೆಯೂ ಕಲುಷಿತಗೊಳ್ಳುತ್ತಿದೆ. ಇವೆರಡೂ ಕೆರೆಗಳೂ ಕಲುಷಿತಗೊಳ್ಳುವುದನ್ನು ತಡೆಯಲು ಜನ ವಸತಿ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಮತ್ತು ತ್ಯಾಜ್ಯ ನೀರು ಸಂಸ್ಕರಣೆಗೆ ಶುದ್ಧಿಕರಣ ಸ್ಥಾಪಿಸಲು ₹37 ಕೋಟಿ ನೀಡಲು ನಿರ್ಧರಿಸಲಾಗಿದೆ ಎಂದು ಕಷ್ಣ ಬೈರೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.