ADVERTISEMENT

ವಿಮಾನ ನಿಲ್ದಾಣದಲ್ಲೇ ಕ್ಯಾಬ್‌ಗಳ ಕಳವು!

ಮೂರು ತಿಂಗಳಲ್ಲಿ 5 ಕ್ಯಾಬ್‌ಗಳು ಕಳವು * ಓಲಾ, ಉಬರ್‌ ಕಂಪನಿ ಚಾಲಕರಲ್ಲಿ ಆತಂಕ

ಸಂತೋಷ ಜಿಗಳಿಕೊಪ್ಪ
Published 14 ಜುಲೈ 2018, 19:30 IST
Last Updated 14 ಜುಲೈ 2018, 19:30 IST
   

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತ ವಾಹನ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ಏಪ್ರಿಲ್‌ನಿಂದ ಜೂನ್‌ವರೆಗೆ ಐದು ಕ್ಯಾಬ್‌ಗಳು ಕಳುವಾಗಿರುವುದು ಚಾಲಕರಲ್ಲಿ ಆತಂಕ ಸೃಷ್ಟಿಸಿದೆ.

ನಿಲ್ದಾಣದ ಆವರಣ ಹಾಗೂ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ ಕ್ಯಾಬ್‌ಗಳನ್ನು ಕಳವು ಮಾಡಲಾಗುತ್ತಿದೆ. ಈ ಬಗ್ಗೆ ಹಲವು ಚಾಲಕರು ವಿಮಾನ ನಿಲ್ದಾಣ ಠಾಣೆಗೆ ದೂರು ನೀಡಿದ್ದಾರೆ.

ಮೊಬೈಲ್ ಆ್ಯಪ್ ಆಧರಿತ ಓಲಾ, ಉಬರ್‌ ಸೇರಿದಂತೆ ಕೆಲವು ಕಂಪನಿಗಳ ಕ್ಯಾಬ್‌ಗಳ ಬಳಕೆ ಹೆಚ್ಚುತ್ತಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಬಹುಪಾಲು ಮಂದಿ ಕ್ಯಾಬ್‌ಗಳನ್ನೇ ಅವಲಂಬಿಸುತ್ತಿದ್ದಾರೆ. ನಿತ್ಯವೂ ಮೂರು ಸಾವಿರ ಕ್ಯಾಬ್‌ಗಳು ಓಡಾಡುತ್ತವೆ.

ADVERTISEMENT

ಚಹಾಕ್ಕೆ ಹೋಗಿದ್ದಾಗ ಕ್ಯಾಬ್‌ ಕದ್ದರು: ನಗರದ ನಿವಾಸಿ ಕೆ.ಆರ್‌.ಮಹೇಶ್‌ ಎಂಬುವರ ಕ್ಯಾಬ್‌ನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಸಂಬಂಧ ಮಹೇಶ್ ಅವರು ಠಾಣೆಗೆ ದೂರು ನೀಡಿದ್ದಾರೆ.

‘2016ರಲ್ಲಿ ಸ್ವಿಫ್ಟ್‌ ಕಾರು (ಕೆಎ 45 9426) ಖರೀದಿಸಿದ್ದೆ. ಓಲಾ ಕಂಪನಿಗೆ ಕಾರನ್ನು ಅಟ್ಯಾಚ್‌ ಮಾಡಿ ಓಡಿಸುತ್ತಿದ್ದೆ. ಜೂನ್ 14ರಂದು ಮೆಜೆಸ್ಟಿಕ್‌ನಿಂದ ಪ್ರಯಾಣಿಕರನ್ನು ಕರೆದುಕೊಂಡು ನಿಲ್ದಾಣಕ್ಕೆ ಹೋಗಿದ್ದೆ. ಪಾರ್ಕಿಂಗ್‌ ಸ್ಥಳದಲ್ಲಿ ಸಂಜೆ 7.30ಕ್ಕೆ ನಿಲ್ಲಿಸಿ ಚಹಾ ಕುಡಿಯಲು ಹೋಗಿದ್ದೆ. ವಾಪಸ್‌ ಬಂದು ನೋಡಿದಾಗ ಕಾರು ಇರಲಿಲ್ಲ’ ಎಂದು ತಿಳಿಸಿದ್ದಾರೆ.

ಕ್ಯಾಮೆರಾ ಕಣ್ತಪ್ಪಿಸಿ ಕೃತ್ಯ: ‘ವಿಮಾನ ನಿಲ್ದಾಣದ ಹಲವೆಡೆ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿದ್ದರೂ ಕಳವು ಪ್ರಕರಣ ವರದಿ ಆಗುತ್ತಿರುವುದು ಅಚ್ಚರಿ ಮೂಡಿಸಿದೆ’ ಎಂದು ಪೊಲೀಸರು ಹೇಳಿದರು.

ಸಾಲ ಮಾಡಿ ಖರೀದಿಸಿದ್ದ ಪದವೀಧರರೊಬ್ಬರ ಕ್ಯಾಬ್‌ ಕೂಡಾ ಕಳುವಾಗಿದೆ.‘ಪದವಿ ಮುಗಿದ ಬಳಿಕ ಎಲ್ಲಿಯೂ ಕೆಲಸ ಸಿಗಲಿಲ್ಲ. ಹೀಗಾಗಿ, ಬ್ಯಾಂಕ್‌ನಿಂದ ಸಾಲ ಪಡೆದು ಕಾರು ಖರೀದಿಸಿದ್ದೆ. ಈಗ ಸಾಲ ಮರುಪಾವತಿಯೂ ಕಷ್ಟವಾಗಿದೆ’ ಎಂದು ಆ ಚಾಲಕ ಗೋಳು ತೋಡಿಕೊಂಡರು.

‘₹5ರಿಂದ 10 ಲಕ್ಷದವರೆಗೆ ಹಣ ಕೊಟ್ಟು ಚಾಲಕರು ಕಾರು ಖರೀದಿಸುತ್ತಾರೆ. ದಿನಕ್ಕೆ ಗರಿಷ್ಠ ₹2,500 ಸಂಪಾದಿಸಿದರೆ ಹೆಚ್ಚು. ಹೀಗಿರುವಾಗ, ಕ್ಯಾಬ್‌ಗಳು ಕಳುವಾದರೆ ಚಾಲಕನ ಕುಟುಂಬ ಬೀದಿಗೆ ಬರುತ್ತದೆ’ ಎಂದುಚಾಲಕ ಮಂಜುನಾಥ್‌ ಹೇಳಿದರು.

‘ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದರಿಂದ ಕೃತ್ಯ’

ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್‌ ಸ್ಥಳದಲ್ಲಿ ಸೀಮಿತ ಸಂಖ್ಯೆಯ ವಾಹನಗಳನ್ನಷ್ಟೇ ನಿಲ್ಲಿಸಲು ಜಾಗವಿದೆ. ಉಳಿದ ವಾಹನಗಳನ್ನು ನಿಲ್ದಾಣದ ಹಿಂಭಾಗದ ಖಾಲಿ ಜಾಗದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದೆ. ಇದು ಕಳ್ಳರಿಗೆ ಅನುಕೂಲವಾಗಿದೆ ಎಂದು ಚಾಲಕ ರಾಜು ಲೋಕಾಪುರ ಹೇಳಿದರು.

ನಿಗದಿತ ಪಾರ್ಕಿಂಗ್‌ ಜಾಗದಲ್ಲಿರುವ ವಾಹನಗಳು ಸುರಕ್ಷಿತವಾಗಿವೆ. ಖಾಲಿ ಜಾಗದಲ್ಲಿ ನಿಲ್ಲಿಸುತ್ತಿರುವ ಕ್ಯಾಬ್‌ಗಳು ಕಳುವಾಗುತ್ತಿವೆ. ನಿಲ್ದಾಣದ ಅಧಿಕಾರಿಗಳು ಎರಡೂ ಪಾರ್ಕಿಂಗ್ ಜಾಗದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

‘ಕಾರಿನ ಚಕ್ರವನ್ನೂ ಕದ್ದಿದ್ದರು’

‘ನಿಲ್ದಾಣದಲ್ಲಿ ನಿಲ್ಲಿಸುವ ಕ್ಯಾಬ್‌ಗಳ ಚಕ್ರ, ಎಂಪಿ3 ಪ್ಲೇಯರ್‌ ಸೇರಿದಂತೆ ಹಲವು ವಸ್ತುಗಳನ್ನೂ ಬಿಡದೆ ಹೊತ್ತೊಯ್ಯುವವರೂ ಇದ್ದಾರೆ’ ಎಂದು ಚಾಲಕ ನಾರಾಯಣ ಹೇಳಿದರು.

‘ನಗರದಲ್ಲಿ ಕ್ಯಾಬ್‌ ಓಡಿಸುವುದಕ್ಕಿಂತ ದಿನಕ್ಕೆ ಎರಡು ಬಾರಿ ನಿಲ್ದಾಣಕ್ಕೆ ಹೋಗಿಬಂದರೆ ದುಡಿಮೆ ಚೆನ್ನಾಗಿರುತ್ತದೆ. ಹಲವು ಚಾಲಕರು ರಾತ್ರಿ ನಿಲ್ದಾಣದಲ್ಲೇ ಮಲಗುತ್ತಾರೆ. ಆರು ತಿಂಗಳಿನಲ್ಲಿ ಹಲವು ಕ್ಯಾಬ್‌ಗಳ ಚಕ್ರಗಳನ್ನು ಬಿಚ್ಚಿಕೊಂಡು ಹೋಗಿದ್ದಾರೆ’ ಎಂದು ಮಾಹಿತಿ ನೀಡಿದರು.

*ಪಾರ್ಕಿಂಗ್‌ ಸ್ಥಳದ ಬಗ್ಗೆ ಗೊತ್ತಿರುವ ವ್ಯಕ್ತಿಗಳೇ ಕ್ಯಾಬ್‌ ಕಳವು ಮಾಡುತ್ತಿರುವ ಅನುಮಾನವಿದೆ. ಅವರು ಯಾರು ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ
– ಪೊಲೀಸ್ ಅಧಿಕಾರಿ

ಮುಖ್ಯಾಂಶಗಳು

* ಚಹಾ ಕುಡಿಯಲು ಹೋದಾಗ ಕ್ಯಾಬ್‌ ಕಳವು

* ಸಾಲ ಮಾಡಿ ಖರೀದಿಸಿದ್ದ ಕ್ಯಾಬ್‌

* ಸಿ.ಸಿ ಕ್ಯಾಮೆರಾ ಕಣ್ತಪ್ಪಿಸಿ ಕೃತ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.