ADVERTISEMENT

ಕ್ಯಾನ್ಸರ್ | ವಾರ್ಷಿಕ 22 ಸಾವಿರ ಮಂದಿ ನೋಂದಣಿ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ

ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಿಂದ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 15:44 IST
Last Updated 3 ಫೆಬ್ರುವರಿ 2026, 15:44 IST
   

ಬೆಂಗಳೂರು: ‘ಕ್ಯಾನ್ಸರ್ ರೋಗ ಪತ್ತೆ ಮತ್ತು ಚಿಕಿತ್ಸೆ ಸಂಬಂಧ ವಾರ್ಷಿಕ ಸರಾಸರಿ 22 ಸಾವಿರ ಮಂದಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಆರಂಭಿಕ ಹಂತದಲ್ಲಿಯೇ ರೋಗ ನಿರ್ಣಯದ ಜತೆಗೆ ಚಿಕಿತ್ಸೆ ಒದಗಿಸಿದಲ್ಲಿ ಶೇ 60ರಿಂದ ಶೇ 70ರಷ್ಟು ಮಂದಿಗೆ ರೋಗ ಗುಣಪಡಿಸಬಹುದು’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ತಿಳಿಸಿದೆ. 

ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಸಂಸ್ಥೆಯು ಬುಧವಾರ (ಫೆ.4) ಬೆಳಿಗ್ಗೆ 7.30ಕ್ಕೆ ಸಂಸ್ಥೆಯ ಆವರಣದಿಂದ ಲಾಲ್‌ಬಾಗ್‌ವರೆಗೆ ಜಾಗೃತಿ ಜಾಥಾ ಹಮ್ಮಿಕೊಂಡಿದೆ. 

‘ರಾಜ್ಯದಲ್ಲಿ 89,125 ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ಬೆಂಗಳೂರಿನಲ್ಲಿ ಪುರುಷರಲ್ಲಿ ‌ಶ್ವಾಸಕೋಶ, ಉದರ, ಪ್ರಾಸ್ಟೇಟ್ (ಮೂತ್ರನಾಳ), ಅನ್ನನಾಳದ ಕ್ಯಾನ್ಸರ್, ಮಹಿಳೆಯರಲ್ಲಿ ಸ್ತನ, ಗರ್ಭಕಂಠ, ಅಂಡಾಶಯದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಫಾಲೋಅಪ್ ಚಿಕಿತ್ಸೆಗಾಗಿ ಸಂಸ್ಥೆಗೆ ವಾರ್ಷಿಕ 3.5 ಲಕ್ಷದಿಂದ 4 ಲಕ್ಷದವರೆಗೂ ಪ್ರಕರಣಗಳು ನೋಂದಣಿಯಾಗುತ್ತಿವೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಟಿ.ನವೀನ್‌ ತಿಳಿಸಿದ್ದಾರೆ.

ADVERTISEMENT

‘ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಣಿಯ (ಪಿಬಿಸಿಆರ್) ಪ್ರಕಾರ, ರಾಜ್ಯದಲ್ಲಿ ವಾರ್ಷಿಕ ಸರಾಸರಿ ಶೇ 1ರಷ್ಟು ಪುರುಷರು ಮತ್ತು ಮಹಿಳೆಯರಲ್ಲಿ ಕ್ಯಾನ್ಸ‌ರ್ ಪ್ರಕರಣಗಳ ಹೆಚ್ಚಳ ಗುರುತಿಸಲಾಗಿದೆ. ಬದಲಾದ ಜೀವನಶೈಲಿ, ತಂಬಾಕು ಉತ್ಪನ್ನಗಳ ಸೇವನೆಯಂತಹ ವ್ಯಸನ ಸೇರಿ ವಿವಿಧ ಕಾರಣಗಳಿಂದ ಕ್ಯಾನ್ಸರ್ ಪ್ರಕರಣಗಳು ಏರಿಕೆಯಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ಕ್ಯಾನ್ಸರ್ ಮತ್ತು ಅದರ ಲಕ್ಷಣಗಳು, ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ಅಪಾಯಗಳು, ಕ್ಯಾನ್ಸರ್‌ ರೋಗಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ಸಾರ್ವಜನಿಕರಲ್ಲಿ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಸಂಚಾರಿ ಕ್ಯಾನ್ಸರ್ ತಪಾಸಣಾ ವಾಹನ ಮತ್ತು ಮ್ಯಾಮೋಗ್ರಫಿ ಯಂತ್ರದ ನೆರವಿನಿಂದ ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆಗೆ ಶಿಬಿರಗಳನ್ನೂ ನಡೆಸಲಾಗುತ್ತಿದೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಜನರು ಕ್ಯಾನ್ಸರ್ ಬಗ್ಗೆ ಭಯ ಪಡದೆ ವೈದ್ಯಕೀಯ ಪರೀಕ್ಷೆಗೆ ಒಳಗಾಗುವ ಮೂಲಕ ರೋಗವನ್ನು ಜಯಿಸಬೇಕು. ಆರಂಭಿಕ ಹಂತದಲ್ಲಿ ಕ್ಯಾನ್ಸ‌ರ್ ಪತ್ತೆಯಾದರೆ ಚಿಕಿತ್ಸೆ ಸುಲಭ
–ಡಾ.ಟಿ.ನವೀನ್‌, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.