ADVERTISEMENT

ಮೂಲಸೌಕರ್ಯಕ್ಕೆ ಬಂಡವಾಳ ಕಗ್ಗಂಟು ಕೆಂಪೇಗೌಡ ಬಡಾವಣೆಯ 372 ಮೂಲೆ ನಿವೇಶನಗಳ ಹರಾಜು

ಬಡಾವಣೆ ಅಭಿವೃದ್ಧಿಗೊಳ್ಳುವ ಮುನ್ನವೇ ಮೂಲೆ ನಿವೇಶನ ಹರಾಜಿಗಿಟ್ಟ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಪ್ರವೀಣ ಕುಮಾರ್ ಪಿ.ವಿ.
Published 6 ಡಿಸೆಂಬರ್ 2021, 22:06 IST
Last Updated 6 ಡಿಸೆಂಬರ್ 2021, 22:06 IST
ನಾಡಪ್ರಭು ಕೆಂಪೇಗೌಡ ಬಡಾವಣೆ
ನಾಡಪ್ರಭು ಕೆಂಪೇಗೌಡ ಬಡಾವಣೆ   

ಬೆಂಗಳೂರು: ವಿವಿಧ ಬಡಾವಣೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಬಂಡವಾಳ ಹೊಂದಿಸಲುಹೆಣಗಾಡುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಇನ್ನೂ ಅಭಿವೃದ್ಧಿಯನ್ನೇ ಕಾಣದ ನಾಡಪ್ರಭು ಕೆಂಪೇಗೌಡ ಬಡಾವಣೆಯ 372 ಮೂಲೆ ನಿವೇಶನಗಳನ್ನು ಹರಾಜಿಗಿಟ್ಟಿದೆ.

ಕೆಂಪೇಗೌಡ ಬಡಾವಣೆಯಲ್ಲಿ ಎಂಜಿನಿಯರಿಂಗ್‌ ವಿಭಾಗಕ್ಕೆ ಹಸ್ತಾಂತರಿಸಲಾದ 2,635 ಎಕರೆ 37 ಗುಂಟೆಯಲ್ಲಿ ನಿವೇಶನ ನಿರ್ಮಿಸಲಾಗುತ್ತಿದೆ. ಇವುಗಳ ಮೂಲಸೌಕರ್ಯ ಕಾಮಗಾರಿಗೆ ₹ 3 ಸಾವಿರ ಕೋಟಿಗೂ ಅಧಿಕ ವೆಚ್ಚ ಮಾಡಲಾಗುತ್ತಿದೆ. ಶಿವರಾಮ ಕಾರಂತ ಬಡಾವಣೆಯ ಮೂಲಸೌಕರ್ಯ ಅಭಿವೃದ್ಧಿಗೆ ₹ 3 ಸಾವಿರ ಕೋಟಿ ಬೇಕು. ಅರ್ಕಾವತಿ ಬಡಾವಣೆಗೆ ಪೂರ್ತಿ ಮೂಲ ಸೌಕರ್ಯ ಕಲ್ಪಿಸಲು ಇನ್ನೂ ₹ 800 ಕೋಟಿಗಳಷ್ಟು ಅನುದಾನ ಅಗತ್ಯವಿದೆ. ಬನಶಂಕರಿ ಆರನೇ ಹಂತ, ವಿಶ್ವೇಶ್ವರಯ್ಯ ಬಡಾವಣೆಯಂತಹ ಹಳೆ ಬಡಾವಣೆ ಮೂಲಸೌಕರ್ಯ ಕಲ್ಪಿಸಲು ₹ 200 ಕೋಟಿಗೂ ಅಧಿಕ ಹಣ ಬೇಕು. ಈ ಕಾಮಗಾರಿಗಳಿಗೆ ಹಣ ಹೊಂದಿಸಲು ಸಾಧ್ಯವಾಗದ ಇಕ್ಕಟ್ಟಿನ ಸ್ಥಿತಿಯನ್ನು ಬಿಡಿಎ ಎದುರಿಸುತ್ತಿದೆ.

ಕೆಂಪೇಗೌಡ ಬಡಾವಣೆಯಲ್ಲಿ ಮನೆ ನಿರ್ಮಿಸಲು ಅಗತ್ಯವಾದ ಕನಿಷ್ಠ ಸೌಕರ್ಯಗಳೂ ಇಲ್ಲ. ಹಾಗಿದ್ದರೂ ಈ ಬಡಾವಣೆಯ ನಿವೇಶನಗಳನ್ನು ಹರಾಜಿಗೆ ಇಟ್ಟಿರುವ ಬಗ್ಗೆ ಈ ಬಡಾವಣೆಯ ನಿವೇಶನದಾರರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸ್ವಲ್ಪವಾದರೂ ಮೂಲಸೌಕರ್ಯ ಕಲ್ಪಿಸಿದ ಬಳಿಕ ಮೂಲೆ ನಿವೇಶನಗಳಿಗೆ ಹೆಚ್ಚಿನ ಬೇಡಿಕೆ ಕುದುರುತ್ತದೆ. ಈ ಹಂತದಲ್ಲಿ ನಿವೇಶನ ಹರಾಜು ಹಾಕಿದರೆ ಅದರಿಂದ ಬಿಡಿಎಗೆ ನಷ್ಟವೇ ಜಾಸ್ತಿ ಎಂಬುದು ಅವರ ವಾದ.

ADVERTISEMENT

ಮೂಲೆ ನಿವೇಶನ ಹರಾಜು ವಿಳಂಬವಾದಷ್ಟೂ ಅಕ್ರಮಗಳೂ ಹೆಚ್ಚುತ್ತವೆ. ಸಾಲ ಪಡೆದು ಕಾಮಗಾರಿ ನಡೆಸಿ, ಅದಕ್ಕೆ ಬಡ್ಡಿ ಕಟ್ಟುವ ಬದಲು ಮೂಲೆ ನಿವೇಶನಗಳನ್ನು ಈಗಲೇ ಹರಾಜು ಹಾಕಿ ಹಣ ಹೊಂದಿಸುವುದು ಲೇಸು ಎಂದು ಸಮರ್ಥಿಸಿಕೊಳ್ಳುತ್ತಾರೆ ಬಿಡಿಎ
ಅಧಿಕಾರಿಗಳು.

‘ಈ ಬಡಾವಣೆಯ ಮೂಲಸೌಕರ್ಯ ಕಾಮಗಾರಿಗಳಿಗೆ ಇದುವರೆಗೆ ₹ 2,500 ಕೋಟಿ ವೆಚ್ಚ ಮಾಡಿದ್ದೇವೆ. ನಿವೇಶನ ಹಂಚಿಕೆಯಿಂದ ಬಂದಿರುವುದು ₹ 2,060 ಕೋಟಿ ಮಾತ್ರ. ಹಂಚಿಕೆಯಾದ ನಿವೇಶನಗಳಿಂದ ₹ 210 ಕೋಟಿಗಳಷ್ಟು ಶುಲ್ಕ ಇನ್ನಷ್ಟೇ ಪಾವತಿ ಆಗಬೇಕಿದೆ. ಇದುವರೆಗೆ ₹ 400 ಕೋಟಿಗೂ ಅಧಿಕ ಮೊತ್ತವನ್ನು ಬಿಡಿಎ ಹೆಚ್ಚುವರಿಯಾಗಿ ಹೂಡಿಕೆ ಮಾಡಿದೆ. ಬಾಕಿ ಇರುವ ಮೂಲಸೌಕರ್ಯ ಕಾಮಗಾರಿಗಳನ್ನು ಎಷ್ಟು ಬೇಗ ಪೂರ್ಣಗೊಳಿಸಿದರೆ ಮಾತ್ರ ಉಳಿದ ಮೂಲೆ ನಿವೇಶನಗಳಿಗೆ ಬೇಡಿಕೆ ಕುದುರುತ್ತದೆ. ಇದಕ್ಕೆ ಬಿಡಿಎ ಬಳಿ ಬೇರೆ ಸಂಪನ್ಮೂಲ ಇಲ್ಲ. ಹಾಗಾಗಿ ಇಲ್ಲಿನ ಮೂಲಸೌಕರ್ಯ ಕಾಮಗಾರಿಗಳಿಗೆ ಬಂಡವಾಳ ಹೊಂದಿಸಲು ಮೂಲೆ ನಿವೇಶನ ಹರಾಜು ಹಾಕುವುದು ಅನಿವಾರ್ಯ’ ಎನ್ನುತ್ತಾರೆ ಬಿಡಿಎ ಆಯುಕ್ತ ಎಂ.ಬಿ.ರಾಜೇಶ ಗೌಡ.

‘ಈ ಬಡಾವಣೆಯಲ್ಲಿ ನಾವು ಈಗ ನಿವೇಶನ ಹರಾಜು ಹಾಕಿದರೆ ನಮಗೆ ಪ್ರತಿ ಚದರ ಅಡಿಗೆ ₹ 6 ಸಾವಿರದಷ್ಟು ಮೊತ್ತ ಸಿಗಲಿದೆ ಎಂದು ಭಾವಿಸೋಣ. ಇದೇ ನಿವೇಶನವನ್ನು ಐದು ವರ್ಷ ಬಿಟ್ಟು ಹರಾಜು ಹಾಕಿದರೆ ಪ್ರತಿ ಚದರ ಅಡಿಗೆ ₹ 10 ಸಾವಿರದವರೆಗೆ ಸಿಗಬಹುದು. ಆದರೆ, ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಸಾಲ ಮಾಡಿದರೆ ಅದಕ್ಕಿಂತಲೂ ಹೆಚ್ಚು ಮೊತ್ತವನ್ನು ಬಡ್ಡಿ ರೂಪದಲ್ಲಿ ತೆರಬೇಕಾಗುತ್ತದೆ’ ಎಂದು ಅವರು ವಿವರಿಸಿದರು.

‘ ಕೆಂಪೇಗೌಡ ಬಡಾವಣೆಯ ಈಗಿನ ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಮೂಲೆ ನಿವೇಶನಗಳನ್ನು ಹರಾಜಿಗೆ ಇಟ್ಟಿದ್ದೇವೆ. ಇಲ್ಲಿ ಪ್ರತಿ ಚದರ ಅಡಿ ₹3,600 ರಿಂದ ₹3,800 ದರ ಇದೆ. ಸಂಪನ್ಮೂಲ ಇಲ್ಲದಿದ್ದರೆ ಕಾಮಗಾರಿ ನಡೆಸಲು ಆಗುವುದಿಲ್ಲ. ಹಾಗಾಗಿ ಸ್ವಲ್ಪ ಮೂಲೆ ನಿವೇಶನಗಳನ್ನು ಈಗ ಹರಾಜು ಮಾಡುತ್ತಿದ್ದೇವೆ’ ಎಂದು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಶಾಂತರಾಜಣ್ಣ ತಿಳಿಸಿದರು.

‘ಕೆಂಪೇಗೌಡ ಬಡಾವಣೆಯ ಮೂಲಸೌಕರ್ಯ ಕಾಮಗಾರಿಗೆ ಒಟ್ಟು ₹ 5 ಸಾವಿರ ಕೋಟಿ ವೆಚ್ಚ ಆಗಬಹುದು ಎಂದು ಆರಂಭದಲ್ಲಿ ಅಂದಾಜಿಸಲಾಗಿತ್ತು. ಈ ಬಡಾವಣೆಯಲ್ಲಿ ಇದುವರೆಗೆ 2,630 ಎಕರೆ ಪ್ರದೇಶದಲ್ಲಿ ನಿವೇಶನ ನಿರ್ಮಿಸಲಾಗುತ್ತಿದ್ದು, ಇದಕ್ಕೆ ₹ 3,000 ಕೋಟಿಗೂ ಅಧಿಕ ವೆಚ್ಚವಾಗುತ್ತಿದೆ. ಆರಂಭದಲ್ಲಿ ಗುರುತಿಸದ ಕಾಮಗಾರಿಗಳನ್ನು ಹೆಚ್ಚುವರಿಯಾಗಿ ನಿರ್ವಹಿಸಿದ ವೆಚ್ಚವೂ ಸೇರಿ ಗುತ್ತಿಗೆದಾರರಿಗೆ ₹ 100 ಕೋಟಿಗೂ ಅಧಿಕ ಮೊತ್ತ ಬಾಕಿ ಇದೆ. ಇಷ್ಟೊಂದು ದೊಡ್ಡ ಮೊತ್ತ ಬಾಕಿ ಇದ್ದರೆ ಕಾಮಗಾರಿ ಸಹಜವಾಗಿ ನಿಧಾನವಾಗಲಿದೆ. ಹಾಗಾಗಿ ಸಂಪನ್ಮೂಲ ಕ್ರೋಡೀಕರಿಸಿ, ಆದಷ್ಟು ಬೇಗ ಕಾಮಗಾರಿಗಳನ್ನು ‍ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಅವರು ತಿಳಿಸಿದರು.

‘₹ 250 ಕೋಟಿ ಸಂಗ್ರಹದ ನಿರೀಕ್ಷೆ’

ಕೆಂಪೇಗೌಡ ಬಡಾವಣೆಯಲ್ಲಿ ಬಿಡಿಎ 3,370 ಮೂಲೆ ನಿವೇಶನಗಳನ್ನು ನಿರ್ಮಿಸಿದೆ. ಅವುಗಳಲ್ಲಿ 372 ನಿವೇಶನಗಳನ್ನು ಮಾತ್ರ ಈಗ ಹರಾಜಿಗಿಟ್ಟಿದೆ. ‘372 ಮೂಲೆ ನಿವೇಶನಗಳ ಹರಾಜಿನಿಂದ ₹ 250 ಕೋಟಿಗಿಂತಲೂ ಹೆಚ್ಚು ಮೊತ್ತ ಸಂಗ್ರಹವಾಗುವ ನಿರೀಕ್ಷೆ ಇದೆ’ ಎಂದು ಬಿಡಿಎ ಆರ್ಥಿಕ ಸದಸ್ಯ ರಾಮಪ್ರಸಾದ್‌ ತಿಳಿಸಿದರು.

‘ಪ್ರತಿ ಎಕರೆ ಅಭಿವೃದ್ಧಿಗೆ ₹ 1.2 ಕೋಟಿ’

‘ಸಾಮಾನ್ಯವಾಗಿ ಪ್ರತಿ ಎಕರೆಗೆ ಮೂಲಸೌಕರ್ಯ ಕಲ್ಪಿಸಲು ತಲಾ ₹ 1 ಕೋಟಿ ವೆಚ್ಚವಾಗುತ್ತದೆ. ಆದರೆ, ಎನ್‌ಪಿಕೆ ಬಡಾವಣೆಯಲ್ಲಿ ಕುಡಿಯುವ ನೀರು ಹಾಗೂ ಕೊಳಚೆ ನೀರು ಶುದ್ಧೀಕರಿಸಿ ಪೂರೈಕೆ ಮಾಡಲು ಉಭಯ ಕೊಳವೆ ವ್ಯವಸ್ಥೆ ಕಲ್ಪಿಸಲಾಗಿದೆ. ನೆಲಮಟ್ಟದ ಜಲಸಂಗ್ರಹಾಗರಗಳನ್ನು ನಿರ್ಮಿಸಿದ್ದೇವೆ. ವಿದ್ಯುತ್‌ ಕೇಬಲ್‌ಗಳನ್ನು ನೆಲದಡಿ ಅಳವಡಿಸಲಾಗುತ್ತಿದೆ. ಇಲ್ಲಿ ಪ್ರತಿ ಎಕರೆಗೆ ₹ 1.2 ಕೋಟಿವರೆಗೆ ವೆಚ್ಚ ತಗಲುತ್ತದೆ’ ಎಂದು ಶಾಂತರಾಜಣ್ಣ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.