ಬೆಂಗಳೂರು: ಫ್ಯಾಂಟಮ್, ಸ್ಪೈಡರ್‌ಮ್ಯಾನ್, ಡೋರಾ, ಶಿವ, ಹನುಮಾನ್... ಹೀಗೆ ಹತ್ತಾರು ಕಾರ್ಟೂನ್ ಪಾತ್ರಗಳು ಇಲ್ಲಿ ನೈಜವಾಗಿ ಪ್ರತ್ಯಕ್ಷವಾದಂತಿತ್ತು.
ನಗರದ ವೈಟ್‌ಫೀಲ್ಡ್‌ನ ಕೈಗಾರಿಕಾ ಪ್ರದೇಶದಲ್ಲಿರುವ ‘ಕಾಮಿಕ್ ಕಾನ್’ ಆವರಣದಲ್ಲಿ ಪ್ರಸಕ್ತ ವರ್ಷದ‘ಬೆಂಗಳೂರು ಕಾಮಿಕ್ ಕಾನ್-2022’ನಲ್ಲಿ ಈ ಎಲ್ಲ ಪಾತ್ರಗಳ ವೇಷಧಾರಿಗಳು ಕಾಣಿಸಿಕೊಂಡರು. ಪುಟಾಣಿಗಳಿಂದ ಹಿಡಿದು ಹರೆಯದವರವರೆಗೂ ಕಾರ್ಟೂನ್ ಪ್ರಿಯರು ಈ ವೇಷಗಳನ್ನು ತೊಟ್ಟು ಆನಂದಿಸಿದರು. ಹಲವಾರು ಆಸಕ್ತರು ಪ್ರದರ್ಶನ ಮಳಿಗೆಗಳಲ್ಲಿ ಈ ಕಾರ್ಟೂನ್ ಪಾತ್ರಗಳ ತಾಂತ್ರಿಕ ವಿಷಯಗಳನ್ನು ತಿಳಿದುಕೊಳ್ಳಲು ಮುಂದಾದರು.
ಮಳಿಗೆಯೊಂದರಲ್ಲಿ ಮೋಷನ್ ಗ್ರಾಫಿಕ್ಸ್ ತಂತ್ರಾಂಶ ‘ರಿವರ್ ಕಾಮಿಕ್ಸ್’ ಗಮನ ಸೆಳೆಯಿತು. ಸಂಗೀತ, ಧ್ವನಿ ಪರಿಣಾಮಗಳು ಮತ್ತು ಗ್ರಾಫಿಕ್ ವಿಡಿಯೋ/ ಪರಿಣಾಮಗಳನ್ನು ಈ ಅಪ್ಲಿಕೇಷನ್ ಹೊಂದಿದೆ. ಭಾರತದ ಮೊದಲ ಮೋಷನ್ ಗ್ರಾಫಿಕ್ಸ್ ಅಪ್ಲಿಕೇಷನ್ ಎಂದೂ ಈ ಮನೋರಂಜನಾ ತಂತ್ರಾಂಶಗಳ ಕಂಪನಿ ಹೇಳಿಕೊಂಡಿದೆ.
‘‘ರಿವರ್ ಕಾಮಿಕ್ಸ್’ ಪ್ರೇಕ್ಷಕರಿಗೆ ವರ್ಧಿತ ಧ್ವನಿ, ಚಲನೆಯ ವಿಶಿಷ್ಟತೆಗಳ ಮೂಲಕ ನಮ್ಮ ಕಲ್ಪನೆಗೆ ಜೀವ ತುಂಬಲು ತಾಂತ್ರಿಕ ನೆರವು ನೀಡುತ್ತದೆ. ಧ್ವನಿ, ಸಂಗೀತ, ವಿಶೇಷ ಪರಿಣಾಮಗಳ ಭಂಡಾರವೂ ಇದರಲ್ಲಿದೆ. ಭಾರತ ಮತ್ತು ವಿಶ್ವದ ಇತಿಹಾಸ, ಸಾಂಸ್ಕೃತಿಕ-ಆಧಾರಿತ ಕಂಟೆಂಟ್‌ನ ವ್ಯಾಪಕ ಪ್ರಕಾರಗಳ ಕಥಾ ಸೃಷ್ಟಿಗೆ ಅವಕಾಶ ಕಲ್ಪಿಸಿದೆ. ಈ ಅಪ್ಲಿಕೇಶನ್‌ಗೆ ವಾರ್ಷಿಕ ₹ 299 ಚಂದಾ ದರವಿದೆ’ ಎಂದು ರಿವರ್‌ಕಾಮಿಕ್ಸ್ ಸಿಇಒ ಮತ್ತು ಸಂಸ್ಥಾಪಕ ಜೆ.ಎಂ. ಥಾಕರ್ ಹೇಳಿದರು.
ಬೇರೇನಿತ್ತು ಕಾಮಿಕ್ ಕಾನ್‌ನಲ್ಲಿ?
‘ಬಾಂಬೆ ಲೋಕಲ್’ ಹಿಪ್ – ಹಾಪ್ ತಂಡ ವಿಶೇಷ ಪ್ರದರ್ಶನ ನೀಡಿತು.ಹಿಪ್-ಹಾಪ್ ಕಲಾವಿದರಾದ ಗ್ರಾವಿಟಿ, ಶೇಕ್ಸ್‌ಪಿಯರ್, ಫರ್ಹಾನ್ ಬೀಟ್ ಬಾಕ್ಸರ್ಸ್, ಡಿ-ಸೈಫರ್, ಬೀಟ್ ರಾ ಅವರ ಗೀತ ಗಾಯನ ಕೇಳುಗರಿಗೆ ಮುದ ನೀಡಿತು.
ಇಲ್ಲಿ ಹೊಸ ಮೋಜಿನ ಆಟಗಳು, ಕಾರ್ಟೂನ್‌ಗಳು ಗಮನ ಸೆಳೆದವು. ಮಕ್ಕಳು ಇಲ್ಲಿ ಪುಟ್ಟ ಉಡುಗೊರೆಗಳನ್ನು ಪಡೆದು ಸಂಭ್ರಮಿಸಿದರು. ಪುಟ್ಟ ಆಟಗಳಲ್ಲಿ ವಿಜೇತರಿಗೆ ಬಹುಮಾನವನ್ನೂ ಕೊಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.