ಎಫ್‌ಐಆರ್
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಬಿಬಿಎಂಪಿಯಿಂದ ಕಟ್ಟಡ ನಕ್ಷೆ ಪಡೆಯಲು ಆನ್‌ಲೈನ್‌ನಲ್ಲಿ ನಕಲಿ ದಾಖಲೆಗಳನ್ನು ಅಪ್‌ಲೋಡ್ ಮಾಡಿದ ಆರೋಪದ ಮೇರೆಗೆ ಬಿಬಿಎಂಪಿ ಅನುಮೋದಿತ ವಾಸ್ತುಶಿಲ್ಪಿ ಆರ್. ಅರ್ಪಿತಾ ಸೇರಿ 12 ಜನರ ವಿರುದ್ಧ ವಿ.ವಿ.ಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಬಿಎಂಪಿ ನಗರ ಯೋಜನೆ ವಿಭಾಗದ (ದಕ್ಷಿಣ) ಸಹಾಯಕ ನಿರ್ದೇಶಕ ಕೆ.ಸಿ.ನಚೀಕೆತ್ ದೂರಿನ ಮೇರೆಗೆ ಮಹಾವೀರ್ ಕುಮಾರ್, ಸುನಿಲ್ ಕುಮಾರ್, ಪ್ರವೀಣ್ ಕುಮಾರ್, ಈಶ್ವರ ಲಾಲ್, ಲಲಿತ ಸಿ ಜೈನ್, ಪ್ರಮೋದ್ ಬಿ ಜೈನ್, ವಿಮಲಾ ಬಾಯಿ, ಭರತ್, ಸುಭಾಷ್, ರಾಜೇಶ್ ಕೆ ಶಾ, ಅರ್ಪಿತಾ, ಮೆಸರ್ಸ್ ಮೈಂಡ್ ವರ್ಕ್ಸ್ ವೆಂಚರ್ಸ್ ಎಲ್.ಎಲ್.ಪಿ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
‘ವಿ.ವಿಪುರ ವಾಣಿ ವಿಲಾಸ ರಸ್ತೆಯ ಸ್ವತ್ತಿನ ಸಂಖ್ಯೆ 26ಕ್ಕೆ ಕಟ್ಟಡ ನಕ್ಷೆ ಮಂಜೂರಾತಿಗಾಗಿ ಆನ್‌ಲೈನ್ ಮೂಲಕ ಬಿಬಿಎಂಪಿಯಿಂದ ಅನುಮೋದಿತ ವಾಸ್ತುಶಿಲ್ಪಿ ಅರ್ಪಿತಾ ಅವರಿಗೆ ಅರ್ಜಿ ಸಲ್ಲಿಸಲಾಗಿತ್ತು. ನೆಲ ಮತ್ತು ಮೂರು ಅಂತಸ್ತುಗಳ ನಕ್ಷೆ ಮಂಜೂರಾತಿ ನೀಡಲಾಗಿತ್ತು. ಉದ್ದೇಶಿತ ಕಟ್ಟಡದ ಲೈನ್ ಮಾರ್ಕಿಂಗ್ ಪರಿಶೀಲಿಸಲು ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾಗ, ತಂತ್ರಾಂಶದಲ್ಲಿ ಸಲ್ಲಿಸಿದ್ದ ಛಾಯಾಚಿತ್ರಕ್ಕೂ, ಸ್ಥಳದಲ್ಲಿದ್ದ ಸ್ವತ್ತಿಗೂ ವ್ಯತ್ಯಾಸವಿತ್ತು. ಸ್ವತ್ತಿನ ಸಂಖ್ಯೆ 26ರ ಬದಲು ಸ್ವತ್ತಿನ 29ರ ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಿ, ವಂಚಿಸಲಾಗಿದೆ’ ಎಂದು ಅಧಿಕಾರಿ ದೂರಿನಲ್ಲಿ ಆರೋಪಿಸಿದ್ದಾರೆ.
‘ವಂಚನೆ ಎಸಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅವರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.