ADVERTISEMENT

ಜಾತಿ ಪ್ರಮಾಣ ಪತ್ರ ವಿತರಣೆಗೆ ಸಿ.ಎಂ ಕ್ರಮ: ಆಂಜನೇಯ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 15:57 IST
Last Updated 7 ನವೆಂಬರ್ 2025, 15:57 IST
ಎಚ್‌.ಆಂಜನೇಯ
ಎಚ್‌.ಆಂಜನೇಯ   

ಬೆಂಗಳೂರು: ‘ಒಳಮೀಸಲಾತಿ ಸೌಲಭ್ಯದಡಿ ವೈದ್ಯಕೀಯ ಸೀಟು ಪಡೆಯಲು ಜಾತಿ ಪ್ರಮಾಣ ಪತ್ರಗಳನ್ನು ಒದಗಿಸಬೇಕೆಂಬ ಆದೇಶ ಆತಂಕಕ್ಕೆ ಕಾರಣವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಅನುಸಾರ ‘ಗ್ರಾಮ ಒನ್’ ಸೇರಿ ಸರ್ಕಾರದ ಅಧೀನದಲ್ಲಿರುವ ಸೇವಾ ಕೇಂದ್ರಗಳಲ್ಲಿ ಜಾತಿ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ’ ಎಂದು ಮಾಜಿ ಸಚಿವ ಎಚ್. ಆಂಜನೇಯ ತಿಳಿಸಿದ್ದಾರೆ.

ಜಾತಿ ಪ್ರಮಾಣ ಪತ್ರ ವಿತರಣೆ ವಿಷಯದಲ್ಲಿದ್ದ ಗೊಂದಲಕ್ಕೆ ಸಂಬಂಧಿಸಿದಂತೆ ಆಂಜನೇಯ ಅವರು ಸಿದ್ದರಾಮಯ್ಯ ಅವರ ಜತೆ ಮಾತುಕತೆ ನಡೆಸಿದರು. ಬಳಿಕ ಈ ಬಗ್ಗೆ ಮಾಹಿತಿ ನೀಡಿರುವ ಅವರು, ‘ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ತಕ್ಷಣ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಸೋಮವಾರದಿಂದಲೇ ಮಾದಿಗ-ಛಲವಾದಿ ಸಮುದಾಯದವರು ಪ್ರಮಾಣ ಪತ್ರ ಪಡೆಯಬಹುದು’ ಎಂದು ಹೇಳಿದರು. 

‘ಮಾದಿಗ ಮೂಲ ಜಾತಿಯವರು ಜಾತಿಸೂಚಕ ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರಕ್ಕೆ ಸೇರಿದವರಾಗಿದ್ದರೇ ಪ್ರವರ್ಗ ಎ, ಹೊಲೆಯ ಮೂಲ ಜಾತಿಯವರು ಜಾತಿಸೂಚಕ ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರಕ್ಕೆ ಸೇರಿದವರಾಗಿದ್ದರೇ ಪ್ರವರ್ಗ ಬಿ ಎಂದು ಪ್ರಮಾಣ ಪತ್ರ ಪಡೆಯಬಹುದು. ಈ ಪ್ರಮಾಣ ಪತ್ರ ಪಡೆದವರು ಒಳಮೀಸಲಾತಿಯಡಿ ಶಿಕ್ಷಣ, ಉದ್ಯೋಗ, ಸಾಲ, ಮನೆ, ಕೊಳವೆ ಬಾವಿ ಸೇರಿ ಎಲ್ಲ ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ’ ಎಂದರು. 

ADVERTISEMENT

‘ಸೋಮವಾರದಿಂದಲೇ ಮಾದಿಗ ಸಮುದಾಯದವರು ತಮ್ಮ ತಮ್ಮ ಕೇಂದ್ರಗಳಲ್ಲಿ ಅಗತ್ಯ ದಾಖಲೆ ಸಲ್ಲಿಸಿ, ಪ್ರವರ್ಗ ‌ಎ ಗುಂಪಿನ ಪ್ರಮಾಣ ಪತ್ರ ಪಡೆದು ಒಳಮೀಸಲಾತಿಯ ಆಶಯದ ಫಲ ಪಡೆಯಬೇಕು’ ಎಂದು ಹೇಳಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.