ADVERTISEMENT

ಐಷಾರಾಮಿ ‘ವಿಲ್ಲಾ’ದಲ್ಲಿ ಜಾತಿ ನಿಂದನೆ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 21:53 IST
Last Updated 28 ಅಕ್ಟೋಬರ್ 2021, 21:53 IST

ಬೊಮ್ಮನಹಳ್ಳಿ: ‘ಸ್ಟಿಲ್ ವಾಟರ್’ ಐಷಾರಾಮಿ ವಿಲ್ಲಾದಲ್ಲಿ ಜಾತಿ ನಿಂದನೆ ಮಾಡಿರುವ ಪ್ರಕರಣ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪರಿಶಿಷ್ಟ ಜಾತಿಗೆ ಸೇರಿದ ಹೇಮಾವತಿ ರಾಜಾರಾಂ ಎಂಬುವವರ ಮೇಲೆ, ಅದೇ ವಿಲ್ಲಾದ ಪಕ್ಕದ ಮನೆಯ ಬೆಂಗಾಲಿ ಬ್ರಾಹ್ಮಣ ಕುಟುಂಬವೊಂದು ಜಾತಿ ನಿಂದನೆ ಮಾಡಿ, ಕಿರುಕುಳ ನೀಡುತ್ತಿದೆ ಎನ್ನುವ ಆರೋಪದ ಮೇಲೆ ದೂರು ದಾಖಲಾಗಿದೆ.

ಪಕ್ಕದ ವಿಲ್ಲಾದಲ್ಲಿ (ನಂ.74) ವಾಸವಿರುವ ಅಂಬರ್ ಮಿತ್ರಾ ಹಾಗೂ ರಶ್ಮಿ ಮಿತ್ರಾ ಎಂಬ ದಂಪತಿ, ‘ಬ್ರಾಹ್ಮಣರು ವಾಸಿಸುವ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯವರು ವಾಸಿಸಬಾರದು ಎಂದು ನೇರವಾಗಿಯೇ ನಿತ್ಯವೂ ಜಗಳ ತೆಗೆದು ಮಾನಸಿಕ ಹಿಂಸೆ ಕೊಡುತ್ತಿದ್ದಾರೆ’ ಎಂದು ದೂರು ನೀಡಿರುವ ಹೇಮಾವತಿ ರಾಜಾರಾಂ ಆರೋಪಿಸಿದ್ದಾರೆ.

ADVERTISEMENT

‘ಕೀಳು ಜಾತಿಯ ಜನರನ್ನು ನೋಡುವುದು ಅಸಹ್ಯ. ಅವರ ಉಸಿರು ಇತ್ತ ಸುಳಿಯಬಾರದೆಂದು ಎರಡು ಮನೆಗಳ ಮಧ್ಯೆ ಎತ್ತರದ ಚಾವಣಿ ಹಾಕಿಸಿದ್ದಾರೆ. ಇದರಿಂದ ಗಾಳಿ, ಬೆಳಕು ಬರುತ್ತಿಲ್ಲ. ವಿಲ್ಲಾ ಸಮುಚ್ಚಯದ ನಿಯಮಗಳಿಗೆ ವಿರುದ್ಧವಾಗಿ ಚಾವಣಿ ನಿರ್ಮಿಸಿದ್ದಾರೆ. ಈ ಬಗ್ಗೆ ವಿಲ್ಲಾದ ಅಸೋಶಿಯೇಷನ್‌ಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ತಿಳಿಸಿದ್ದಾರೆ.

‘ವಿಲ್ಲಾದೊಳಗೆ ಸಭೆ ಸಮಾರಂಭಗಳು ನಡೆದಾಗ ಜಾತಿ ಹೆಸರು ಹಿಡಿದು ಅವಮಾನಿಸುತ್ತಲೇ ಬಂದಿದ್ದಾರೆ. ಬೇಕೆಂದೇ ಗಲೀಜು ನೀರು ಸುರಿಯುತ್ತಾರೆ. ವಿಲ್ಲಾ ಮಾರಾಟ ಮಾಡಿ ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ನೇರವಾಗಿಯೇ ಹೇಳುತ್ತಾರೆ’ ಎಂದು ಹೇಮಾವತಿ ರಾಜಾರಾಂ ದೂರಿದ್ದಾರೆ.

‘ಪ್ರಕರಣದ ತನಿಖೆ ನಡೆಯುತ್ತಿದೆ, ತಪ್ಪಿತಸ್ಥರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲಾಗುವುದು’ ಎಂದು ಸಹಾಯಕ ಪೊಲೀಸ್ ಕಮಿಷನರ್‌ ಕಿಶೋರ್ ಭರಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.