ದನಗಳ ಜಾತ್ರೆ
-ಸಾಂದರ್ಭಿಕ ಚಿತ್ರ
ಬೆಂಗಳೂರು: ದೊಡ್ಡಬಳ್ಳಾಪುರ ತಾಲ್ಲೂಕು ಘಾಟಿ ಸುಬ್ರಮಣ್ಯಸ್ವಾಮಿ ಕ್ಷೇತ್ರದಲ್ಲಿ ಇದೇ 25ರಿಂದ 10 ದಿನಗಳವರೆಗೆ ಅಂತರರಾಜ್ಯ ಮಟ್ಟದ ದನಗಳ ಜಾತ್ರೆ ನಡೆಯಲಿದೆ ಎಂದು ನವ ಕರ್ನಾಟಕ ಯುವ ಶಕ್ತಿ ವೇದಿಕೆ ತಿಳಿಸಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಅಂಬರೀಶ್, ‘ದನಗಳ ಜಾತ್ರೆಯಲ್ಲಿ ವಿವಿಧ ತಳಿಗಳ ಜಾನುವಾರು ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಜಾತ್ರೆಗೆ ಉಚಿತ ಪ್ರವೇಶವಿದ್ದು, ನೀರು, ಮೇವು ಸೌಲಭ್ಯವನ್ನು ಕಲ್ಪಿಸಲಾಗಿದೆ. 3 ಲಕ್ಷಕ್ಕೂ ಹೆಚ್ಚು ಜಾನುವಾರುಗಳು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಮಾಹಿತಿ ನೀಡಿದರು.
40 ಎಕರೆ ವಿಸ್ತೀರ್ಣದಲ್ಲಿ ಜಾತ್ರೆಗೆ ವ್ಯವಸ್ಥೆ ಮಾಡಿದ್ದು, ರೈತರಿಗೆ ತಂಗುದಾಣದ ವ್ಯವಸ್ಥೆ, ಸೂಕ್ತ ಭದ್ರತೆ ಒದಗಿಸಲಾಗುವುದು. ಹೈದರಾಬಾದ್ ಕರ್ನಾಟಕ, ಮಂಡ್ಯ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ, ತಮಿಳುನಾಡಿನ ಹೊಸೂರು, ಆಂಧ್ರಪ್ರದೇಶದ ರೈತರು ಜಾನುವಾರುಗಳ ಖರೀದಿ ಮತ್ತು ಮಾರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ರೈತರು ಮತ್ತು ರಾಸುಗಳಿಗೆ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿಯಿಂದ ಸೌಕರ್ಯ ಕಲ್ಪಿಸಲಾಗುತ್ತಿದೆ. ತಾತ್ಕಾಲಿಕವಾಗಿ ಪಶು ಆಸ್ವತ್ರೆ ತೆರೆದು ಜಾನುವಾರುಗಳಿಗೆ ಲಸಿಕೆಗಳನ್ನು ನೀಡುವ ವ್ಯವಸ್ಥೆ ಇದೆ ಎಂದರು.
ಪ್ರಧಾನ ಕಾರ್ಯದರ್ಶಿ ಉದಯಾರಾಧ್ಯ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.